Advertisement
ನೃತ್ಯ ನಿಕೇತನ ಕೊಡವೂರು (ರಿ.) ಸಂಸ್ಥೆಯ ಎಳೆಯರು ಅಭಿನಯಿಸಿದ ಮಳೆ ಬಂತು ಮಳೆ ನೃತ್ಯರೂಪಕ ಹಾಗೂ ರಥಬೀದಿ ಗೆಳೆಯರು ಸಂಸ್ಥೆಯು ನಡೆಸಿದ “ಕುಣಿಯೋಣು ಬಾರಾ’ ನಾಟಕ ಶಿಬಿರದಲ್ಲಿ ಸಿದ್ಧಗೊಂಡ ಜೀಮೂತವಾಹನ ನಾಟಕ, ಕಲಾವಿದೆ ಮಂಜುಳಾ ಸುಬ್ರಹ್ಮಣ್ಯ ಅಭಿನಯಿಸಿದ ರಾಧಾ ಏಕವ್ಯಕ್ತಿ ಪ್ರದರ್ಶನ ಸಹೃದಯರನ್ನು ರಂಜಿಸಿದವು. ಈ ಕಾರ್ಯಕ್ರಮ ಮಕ್ಕಳ ಮನೋಲೋಕವನ್ನು ನಿಜವಾದ ಅರ್ಥದಲ್ಲಿ ಹೃದ್ಯಗೊಳಿಸಿತು.
ಮಳೆ ಇಲ್ಲವೆಂಬ ದುಃಖದಲ್ಲಿ ಪ್ರಾಣಿಗಳೆಲ್ಲ ಒದ್ದಾಡುತ್ತಿರುತ್ತವೆ. ಪುಟ್ಟ ಮತ್ತು ಪುಟ್ಟಿ ಈ ಪ್ರಾಣಿಗಳ ಸಂಕಟ ತಿಳಿದುಕೊಳ್ಳುತ್ತಾರೆ. ತಮ್ಮ ಅಜ್ಜಿಯನ್ನು ಕತೆ ಹೇಳಲು ಆಗ್ರಹಿಸುತ್ತಾರೆ. ಅಜ್ಜಿ ತನ್ನ ಕತೆಯ ಮೂಲಕ ಮಕ್ಕಳಿಗೆ ಪ್ರಕೃತಿಯ ಬಗ್ಗೆ ತಾದಾತ್ಮ$Â ಬೆಳೆಯುವಂತೆ ಮಾಡುತ್ತಾಳೆ. ಅಜ್ಜಿ ಕತೆಯಲ್ಲಿ ಮಳೆ ಸುರಿಯುತ್ತಿರುವಾಗಲೇ ನಿಜವಾಗಿಯೂ ಮಳೆ ಬರುತ್ತದೆ. ಜತೆಗೆ ಮಕ್ಕಳ ಮನೋಲೋಕದಲ್ಲೇ ಸುರಿಯುವ ವಿಶಿಷ್ಟ ಅನುಭವದ ಮಳೆ ಮನಸ್ಸನ್ನು ಒದ್ದೆಯಾಗಿಸುತ್ತದೆ. ಕರುಣೆಯ ವರ್ಷಧಾರೆಯಾಗಿಯೂ ಅದು ಹರಿಯುತ್ತದೆ. ಫ್ಯಾಂಟಸಿ ಜತೆಗೆ ಎಚ್ಚರ, ವಾಸ್ತವ ಬೆಸೆಯುತ್ತಾ ಸಾಗುವ ಕತೆಯ ನಡೆ ಮಕ್ಕಳನ್ನು ಆಕರ್ಷಿಸುತ್ತದೆ. ನಾಟ್ಯದ ಕುಣಿತದೊಂದಿಗೆ ಆವರಣ ಕಟ್ಟಿಕೊಳ್ಳುವ ಈ ರೂಪಕ ಭಾವಾಭಿನಯ, ಸಂಗೀತದಿಂದಲೇ ಜೀವಪಡೆಯುತ್ತಾ ಮಕ್ಕಳ ಮನಸ್ಸನ್ನು ತಟ್ಟುತ್ತದೆ. ಸುಧೀರ್ ರಾವ್ ಕೊಡವೂರು ನಿರ್ದೇಶನದ ರೂಪಕ ಮೆಚ್ಚುಗೆ ಗಳಿಸಿತು. ಗಾಂಧಿ ನೆನಪಿಸಿದ ಜೀಮೂತವಾಹನ
“ಜೀಮೂತವಾಹನ’ ಮೂಲದಲ್ಲಿ ಸಂಸ್ಕೃತ ಸಾಹಿತ್ಯದ ಶ್ರೇಷ್ಠಕವಿ ಶ್ರೀಹರ್ಷ ರಚಿಸಿದ “ನಾಗಾನಂದ’ ನಾಟಕ. ಕನ್ನಡದಲ್ಲಿ ಎಚ್. ಎಸ್. ವೆಂಕಟೇಶಮೂರ್ತಿ ಹೊಸ ರೂಪದಲ್ಲಿ ಸಮಕಾಲೀನವಾಗಿಸಲು ಪ್ರಯತ್ನಿಸಿದ್ದಾರೆ. ನಾಟಕದ ಒಂದು ಮುಖ್ಯ ಘಟ್ಟವನ್ನು ಇಟ್ಟುಕೊಂಡು ಎಚ್‌ಎಸ್‌ವಿ ಹೊಸ ಆಶಯದ ನಾಟಕ ರಚಿಸಿದ್ದಾರೆ. ಜೀಮೂತವಾಹನನನ್ನು ಕೇಂದ್ರವಾಗಿಸಿ ಗಾಂಧಿಯಾಗಿಸಿದ ಕೀರ್ತಿ ಅವರದು. ಯುವರಂಗಕರ್ಮಿ ಸಂತೋಷ ನಾಯಕ್ ಪಟ್ಲ ಈ ನಾಟಕಕ್ಕೆ ಉತ್ತಮ ವಿನ್ಯಾಸ ಮತ್ತು ನಿರ್ದೇಶನದ ಮೂಲಕ ಜೀವತುಂಬಿದ್ದಾರೆ.
Related Articles
Advertisement
ಸ್ವಗತದಲ್ಲೇ ಏಕಾಂಗಿಯಾದ ರಾಧೆಮಂಜುಳಾ ಸುಬ್ರಹ್ಮಣ್ಯ ಅವರ ಏಕವ್ಯಕ್ತಿ ಪ್ರದರ್ಶನ ರಾಧೆ ಕೂಡ ಕುತೂಹಲ ಮೂಡಿಸಿತು. ಹೆಚ್ಚು ಸ್ವಗತವಾಗಿಯೇ ಸಾಗುವ ಅವಳ ಆತ್ಮಕಥನ ಸಂಗೀತದಿಂದ, ಕೆಲವೊಂದು ಭಾವಾಭಿನಯದಿಂದ ಕಳೆಗಟ್ಟುತ್ತದೆ. ಡಾ| ಶ್ರೀಪಾದ ಭಟ್ ನಿರ್ದೇಶನದ ಈ ಪ್ರಯೋಗದಲ್ಲಿ ವಾಚಿಕ ಅತಿವಿಲಂಬಿಸಿದಂತಿದೆ ಅನಿಸುತ್ತದೆ. ನೃತ್ಯ- ಭಾವಾಭಿವ್ಯಕ್ತಿ ಯಲ್ಲಿ ಮಂಜುಳಾರ ಪ್ರತಿಭೆ ಎದ್ದುಕಾಣುತ್ತದೆ. ಜಿ. ಪಿ. ಪ್ರಭಾಕರ ತುಮರಿ