Advertisement

ಸ್ವಾವಲಂಬಿ ಬದುಕಿಗೆ ಮಾದರಿ ಕಟ್ಟದಪಡ್ಪು ಆಟೋ ಚಾಲಕಿ

02:40 AM Jun 28, 2018 | Karthik A |

ಪುಂಜಾಲಕಟ್ಟೆ: ಸ್ವಾವಲಂಬಿ ಬದುಕಿಗಾಗಿ ಆಟೋರಿಕ್ಷಾ ಚಾಲನೆ ನಡೆಸುತ್ತ ಗ್ರಾಮೀಣ ಪ್ರದೇಶದ ಮಹಿಳೆಯೊಬ್ಬರು ಇತರರಿಗೆ ಮಾದರಿಯಾಗಿದ್ದಾರೆ. ಜೀವನದಲ್ಲಿ ಸಾಧಿಸಬೇಕೆಂಬ ಆಕಾಂಕ್ಷೆ ಹೊಂದಿದವರಿಗೆ ಗ್ರಾಮೀಣ ಪ್ರದೇಶವಾದ ಮಣಿನಾಲ್ಕೂರು ಗ್ರಾಮದ ಮಾರ್ದಡ್ಕದ ‘ಶ್ರೀ ಭ್ರಾಮರಿ’ ಆಟೋರಿಕ್ಷಾ ಚಾಲಕಿ ಪೂರ್ಣಿಮಾ ಅವರು ತನ್ನ ಕುಟುಂಬ ನಿರ್ವಹಣೆಯ ಜತೆ ಸ್ವಾವಲಂಬಿ ಜೀವನ ನಡೆಸುತ್ತಾ ಆದರ್ಶಪ್ರಾಯರಾಗಿದ್ದಾರೆ. ಇವರು ತಾಲೂಕಿನ ಏಕೈಕ ಆಟೋರಿಕ್ಷಾ ಚಾಲಕಿಯಾಗಿ ಗುರುತಿಸಿಕೊಂಡಿದ್ದಾರೆ. ಮಣಿನಾಲ್ಕೂರು-ಕಕ್ಯಪದವು ನಡುವಿನ ಕಟ್ಟದಪಡ್ಪು ಜಂಕ್ಷನ್‌ನಲ್ಲಿ ಆಟೋರಿಕ್ಷಾವನ್ನು ಪಾರ್ಕಿಂಗ್‌ ಮಾಡಿ, ಪ್ರಯಾಣಿಕರನ್ನು ಸಾಗಿಸುವ ಕಾರ್ಯ ಮಾಡುತ್ತಿರುವ ಪೂರ್ಣಿಮಾ ಅವರು ಇಲ್ಲಿನ ನಿವಾಸಿ ಜಯಾನಂದ ಶೆಟ್ಟಿ ಅವರ ಪತ್ನಿ.

Advertisement

ಪತಿಯಿಂದ ಚಾಲನೆ ತರಬೇತಿ
ಆಟೋರಿಕ್ಷಾ ಚಾಲಕರಾಗಿದ್ದ ಪತಿ ಜಯಾನಂದ ಶೆಟ್ಟಿ ಬೆನ್ನುನೋವಿನ ಕಾರಣಕ್ಕೆ ಆಟೋರಿಕ್ಷಾ ಚಾಲನೆ ಬಿಟ್ಟು ಬೇರೆ ಉದ್ಯೋಗ ಆರಿಸಿಕೊಂಡಾಗ, ಪೂರ್ಣಿಮಾ ಅವರಿಗೆ ರಿಕ್ಷಾ ಚಾಲನೆಯ ಆಸಕ್ತಿ ಹುಟ್ಟಿತು. ಅದಕ್ಕೆ ಪತಿಯ ಪ್ರೋತ್ಸಾಹವೂ ದೊರೆಯಿತು. ಅದರಂತೆ ಒಂದು ವಾರದಷ್ಟು ಕಾಲ ಪತಿಯಿಂದಲೇ ರಿಕ್ಷಾ ಚಾಲನೆಯ ತರಬೇತಿ ಪಡೆದುಕೊಂಡು ಇಂದು ಚಾಲಕಿಯಾಗಿದ್ದಾರೆ.

ಕಾಯಕದಲ್ಲಿ ಖುಷಿ
‘ನನಗೆ ಚಿಕ್ಕಂದಿನಿಂದಲೂ ವಾಹನಗಳನ್ನು ಕಂಡರೆ ಹೆದರಿಕೆ ಇತ್ತು. ಸೈಕಲ್‌ ತುಳಿದವಳು ನಾನಲ್ಲ. ಆದರೆ ಇಂದು ರಿಕ್ಷಾ ಚಾಲಕಿಯಾಗಿ ಗುರುತಿಸಿಕೊಂಡಿದ್ದೇನೆ’ ಎನ್ನುತ್ತಾರೆ ಪೂರ್ಣಿಮಾ. ಮದುವೆಗೆ ಮುಂಚೆ ಬೀಡಿ ಕಟ್ಟುವ ಕಾಯಕ, ಮದುವೆ ಬಳಿಕ ಮನೆ ಕೆಲಸದಲ್ಲೇ ನಿರತಳಾಗಿದ್ದೆ. ಮಗಳು ಶಾಲೆ ಸೇರುತ್ತಲೇ ನನಗೆ ಬೇರೆ ಕೆಲಸದ ಅಗತ್ಯ ಇದೆ ಎಂದೆನ್ನಿಸಿತು. ಪತಿಯ ಬಳಿಯಲ್ಲೇ ರಿಕ್ಷಾ ಚಾಲನೆ ಕಲಿತೆ’ ಎನ್ನುವ ಇವರಿಗೆ ಮುಂದೆ ಪಿಕಪ್‌ ವಾಹನ ಖರೀದಿಸಿ ಚಲಾಯಿಸುವ ಯೋಚನೆ ಇದೆ.

ವಯೋವೃದ್ಧರಿಗೆ ಉಚಿತ ಸೇವೆ
ಒಂದೂವರೆ ವರ್ಷದಿಂದ ರಿಕ್ಷಾ ಚಾಲನೆ ವೃತ್ತಿ ನಿರ್ವಹಿಸುವ ಪೂರ್ಣಿಮಾ, ತಮ್ಮ ಕಾರ್ಯತತ್ಪರತೆಯಿಂದ ಮಾದರಿಯಾಗಿದ್ದಾರೆ. ಪ್ರಯಾಣಿಕರ ಅಪೇಕ್ಷೆ ಮೇರೆಗೆ ಪುತ್ತೂರು, ದೇರಳಕಟ್ಟೆ, ಬೆಳ್ತಂಗಡಿವರೆಗೂ ರಿಕ್ಷಾ ಚಲಾಯಿಸಿದ ಅನುಭವ ಪಡೆದಿದ್ದಾರೆ. ರಾತ್ರಿ ಹೊತ್ತಿನಲ್ಲಿ ತುರ್ತು ಕರೆ ಬಂದಾಗ ಪತಿ ರಿಕ್ಷಾ ಚಾಲನೆ ಮಾಡುತ್ತಾರೆ. ವಯೋವೃದ್ಧರನ್ನು ತಮ್ಮ ರಿಕ್ಷಾದಲ್ಲಿ ಉಚಿತವಾಗಿ ಸಾಗಿಸುವ ಸಮಾಜಸೇವೆಯ ಕಳಕಳಿ ಅವರದು.

ಸ್ವಾವಲಂಬಿಗಳಾಗಿ
ನಮ್ಮ ಪರಿಸರದ ಯುವತಿಯರಿಗೂ ರಿಕ್ಷಾ ಚಾಲನೆ ಕಲಿಯಲು ಹೇಳುತ್ತಿದ್ದೇನೆ. ಯಾರೂ ಮುಂದೆ ಬರುತ್ತಿಲ್ಲ. ತನ್ನಂತೆಯೇ ಮಹಿಳೆಯರು ಸ್ವಾವಲಂಬಿಗಳಾಗಿ. ನಿಜವಾಗಿಯೂ ಇದು ಅತ್ಯಂತ ಸಂತಸದ ಕೆಲಸ.
– ಪೂರ್ಣಿಮಾ ಡಿ., ಆಟೋರಿಕ್ಷಾ ಚಾಲಕಿ

Advertisement
Advertisement

Udayavani is now on Telegram. Click here to join our channel and stay updated with the latest news.

Next