ಬೆಂಗಳೂರು: ರಾಜ್ಯದ ಅಭಿವೃದ್ಧಿಗೆ ಸಂಬಂಧಪಟ್ಟ ಬೇಡಿಕೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಯಡಿಯೂರಪ್ಪ, ರಾಜ್ಯಗಳ ಬೇಡಿಕೆ ಬಗ್ಗೆ ವಿಸ್ತೃತ ಚರ್ಚೆ ಹಾಗೂ ಇಲಾಖಾವಾರು ಕೇಂದ್ರ ಸಚಿವರಿಗೆ ಪ್ರಸ್ತಾವ ಸಲ್ಲಿಸಲು ಪ್ರಧಾನಿಯವರು ಸೂಚಿಸಿದ್ದಾರೆ.
ಈ ವಿಷಯದ ಬಗ್ಗೆ ಪ್ರಧಾನಿಯವರು ಖುದ್ದಾಗಿ ನನ್ನೊಂದಿಗೆ ಮಾತನಾಡಿದ್ದಾರೆಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಹೊಸ ವರ್ಷದ ಆರಂಭದಲ್ಲೇ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಪ್ರಧಾನ್ರಿ ಮೋದಿಯವರ ಘನ ಉಪಸ್ಥಿತಿಯಲ್ಲಿ ರೈತ ಸಮಾವೇಶ ನಡೆದಿತ್ತು. ಆಗ ರಾಜ್ಯದ ಸಿಎಂ ಆಗಿ ನಮ್ಮ ಅಹವಾಲನ್ನು ಪ್ರಧಾನಿಯವರಲ್ಲಿ ಪ್ರಾಮಾಣಿಕವಾಗಿ ಸಲ್ಲಿಸಿದ್ದೇನೆ. ಇದು ನಮ್ಮ ಪ್ರಜಾ ಪ್ರಭುತ್ವ ದಲ್ಲಿ ಸಹಜವಾಗಿ ನಡೆಯುವ ವಿದ್ಯಮಾನವಾಗಿದೆ.
ಆದರೆ, ಈ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡಿರು ವುದು ಗಮನಕ್ಕೆ ಬಂದಿದ್ದು, ಅವು ಸತ್ಯಕ್ಕೆ ದೂರವಾದವು ಎಂದು ಹೇಳಿದ್ದಾರೆ. ಪ್ರಧಾನಮಂತ್ರಿಗಳು ನಮ್ಮ ರಾಜ್ಯದ ಬೇಡಿಕೆಗಳನ್ನು ಸ್ವೀಕರಿಸಿದ್ದಾರೆ. ನಮ್ಮ ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ರಾಜ್ಯದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ನೆರೆ ಪರಿಹಾರ ಕಾರ್ಯಗಳಿಗೆ ಹೆಚ್ಚಿನ ನೆರವು ಒಳಗೊಂಡಂತೆ 50,000 ಕೋಟಿ ರೂ.ವಿಶೇಷ ಅನುದಾನ ನೀಡಬೇಕು ಎಂಬ ಮನವಿಯನ್ನು ಪ್ರಧಾನಿಯವರಿಗೆ ರೈತ ಸಮಾವೇಶದ ವೇದಿಕೆಯಿಂದ ಸಲ್ಲಿಸುವುದು ಸಮಂಜಸವೆಂಬ ಕಾರಣಕ್ಕೆ ಅಲ್ಲಿ ಉಲ್ಲೇಖೀಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಧಾನಮಂತ್ರಿಗಳ ಆಡಳಿತ ವೈಖರಿ ಇಡೀ ಜಗತ್ತಿಗೆ ಗೊತ್ತಿದೆ. ಇಡೀ ದೇಶಕ್ಕೆ ತಿಳಿದಿರುವಂತೆ ಮೋದಿ ಸರ್ಕಾರ ರೈತರಿಗೆ ಅಭೂತ ಪೂರ್ವ ನೆರವು ನೀಡಿದೆ. ಉತ್ತಮ ಯೋಜನೆಗಳನ್ನು ಜಾರಿಗೊಳಿಸಿ, ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಹೆಜ್ಜೆಗಳನ್ನು ಇಡುತ್ತಿದೆ. ರಾಜ್ಯದ ಕೃಷಿಕರು ಹಾಗೂ ನೀರಾವರಿ ಯೋಜನೆಗಳ ವಾಸ್ತವಾಂಶವೂ ಪ್ರಧಾನಿಯವರಿಗೆ ತಿಳಿದಿದೆ.
ಮೋದಿಯವರೇ ನಮ್ಮ ರಾಜ್ಯಕ್ಕೆ ಅತಿ ಹೆಚ್ಚಿನ ನೆರವು, ಅನುದಾನ ನೀಡಿದವರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ. ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದ್ದು, ಈ ಬಗ್ಗೆ ದೆಹಲಿಯಲ್ಲಿ ವಿಸ್ತೃತವಾಗಿ ಚರ್ಚಿಸಲು ಮತ್ತು ಇಲಾಖಾವಾರು ಕೇಂದ್ರ ಸಚಿವರಿಗೆ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಖುದ್ದಾಗಿ ಪ್ರಧಾನಿಯವರು ನನ್ನೊಂದಿಗೆ ಮಾತನಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.