Advertisement
ಉಡುಪಿ ಜಿಲ್ಲೆಯ 300 ನ್ಯಾಯಬೆಲೆ ಅಂಗಡಿಗಳಲ್ಲಿ ಸುಮಾರು 70, ದ.ಕ. ಜಿಲ್ಲೆಯ 500 ನ್ಯಾಯಬೆಲೆ ಅಂಗಡಿಗಳಲ್ಲಿ ಸುಮಾರು 150 ಅಂಗಡಿಯವರು ಪೋಸ್ ಯಂತ್ರವನ್ನು ಅಳವಡಿಸಿದ್ದಾರೆ. ಇದಕ್ಕೆ ಸಿಸ್ಟಮ್, ಇಂಟರ್‌ನೆಟ್ ಸಂಪರ್ಕ, ಬಯೋಮೆಟ್ರಿಕ್ ಅಳವಡಿಕೆ ಬೇಕು. ಬಯೋಮೆಟ್ರಿಕ್‌ಗಾಗಿ ಆಧಾರ್ ಲಿಂಕ್ ಮಾಡಿದರೆ ಸಾಕು.ಉಡುಪಿ ಜಿಲ್ಲೆಯಲ್ಲಿ ಯಾರೂ ನ್ಯಾಯಾಲಯದ ಕಟಕಟೆ ಏರಲಿಲ್ಲ. ಬೇರೆ ಜಿಲ್ಲೆಗಳಲ್ಲಿ ಕೆಲವರು ನ್ಯಾಯಾಲಯದ ಕಟಕಟೆ ಏರಿದ್ದಾರೆನ್ನಲಾಗುತ್ತಿದೆ. ಆದರೆ ಇದೇನಿದ್ದರೂ ಆ ನಿರ್ದಿಷ್ಟ ನ್ಯಾಯಬೆಲೆ ಅಂಗಡಿಗೆ ಮಾತ್ರ ಸೀಮಿತವಾಗಿರುತ್ತದೆ. ಯಂತ್ರ ಅಳವಡಿಸಲು ಸುಮಾರು 15,000 ರೂ. ಖರ್ಚು ತಗಲುವುದಾದರೆ ಕೇವಲ 2-3 ತಿಂಗಳಲ್ಲಿ ಈ ಮೊತ್ತ ವಾಪಸು ಸಿಗುತ್ತದೆ ಎನ್ನುತ್ತಾರೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖಾಧಿಕಾರಿಗಳು.
ಯಂತ್ರ ಅಳವಡಿಸಿದರೆ ಪಡಿತರ ಚೀಟಿಯ ಯಾವನೇ ಒಬ್ಬ ಸದಸ್ಯ ಸ್ವತಃ ಬಂದು ಪಡಿತರವನ್ನು ತೆಗೆದುಕೊಳ್ಳಬೇಕು. ವಯೋವೃದ್ಧರೇನಾದರೂ ಇದ್ದ ಪಕ್ಷದಲ್ಲಿ ಅವರಿಗಾಗಿ ಶೇ. 1 ಕಾರ್ಡ್‌ಗೆ ವಿನಾಯಿತಿ ನೀಡಲಾಗಿದೆ. ಹಿಂದೆ ಆಹಾರ ಧಾನ್ಯಗಳು ಗೋದಾಮಿನಲ್ಲಿ ಉಳಿಯುತ್ತಿರಲಿಲ್ಲ. ಯಂತ್ರ ಅಳವಡಿಸಿದ ಬಳಿಕ 5, 10 ಕ್ವಿಂ. ಧಾನ್ಯಗಳು ಗೋದಾಮಿನಲ್ಲಿ ಉಳಿಯುತ್ತಿವೆ. ಆಹಾರಧಾನ್ಯಗಳು ಅರ್ಹರಿಗೆ ಸಿಗುತ್ತಿವೆ ಎನ್ನುವುದು ಇದರರ್ಥ ಎಂದು ಮೂಲಗಳು ತಿಳಿಸುತ್ತವೆ.
“ಯಾವುದೇ ನ್ಯಾಯಬೆಲೆ ಅಂಗಡಿಗಳು ಪಡಿತರ ವಿತರಣೆಯಿಂದ ಲಾಭ ಹೊಂದಿಲ್ಲ. ಸಹಕಾರಿ ಸಂಘಗಳು ಬ್ಯಾಂಕಿಂಗ್ ವ್ಯವಹಾರದಿಂದ ಮಾತ್ರ ಬದುಕಿ ಉಳಿದಿವೆ. ಪಡಿತರ ವ್ಯವಹಾರದಿಂದ ಪ್ರತಿವರ್ಷ ಲಕ್ಷಾಂತರ ರೂ. ನಷ್ಟವಾಗುತ್ತಿದೆ. ಸೇವಾ ಮನೋಭಾವದಿಂದ ಮಾತ್ರ ಮಾಡಬೇಕು. ಬಹುತೇಕ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಸರಕಾರದ ಧಾನ್ಯಗಳ ಜತೆ ಚಹಾ, ಕಾಫಿ ಹುಡಿ, ಹಲ್ಲುಜ್ಜುವ ಪೇಸ್ಟ್, ಎಣ್ಣೆ ಇತ್ಯಾದಿಗಳನ್ನು ಇಟ್ಟುಕೊಳ್ಳುತ್ತೇವೆ. ಸರಕಾರದಿಂದ ಸಿಗುವ ಧಾನ್ಯವನ್ನು ಕೊಂಡೊಯ್ಯುತ್ತಾರೆ ವಿನಾ ಯಾರೂ ಇತರ ಸಾಮಾನುಗಳನ್ನು ಕೊಂಡೊಯ್ಯುವುದಿಲ್ಲ. ಸಿಬಂದಿಯೂ ಇದಕ್ಕಾಗಿ ಗ್ರಾಹಕರನ್ನು ಒತ್ತಾಯಿಸುವುದಿಲ್ಲ. ಇಷ್ಟೆಲ್ಲ ಸಮಸ್ಯೆಗಳಿರುವಾಗ ಪೋಸ್ ಯಂತ್ರ ಅಳವಡಿಸಲು ಹೇಳುತ್ತಿದ್ದಾರೆ. ಕಂಪ್ಯೂಟರ್ ಸೇರಿದಂತೆ ಪೋಸ್ ಯಂತ್ರ ಅಳವಡಿಸಲು 50,000 ರೂ. ಬೇಕು. ಸರಕಾರವೇ ಅಳವಡಿಸಿ ಕೊಟ್ಟರೆ ನಾವು ನಿರ್ವಹಿಸಬಹುದು ಎಂದು ಹೇಳಿದ್ದೇವೆ’ ಎನ್ನುತ್ತಾರೆ ಸಹಕಾರಿ ಸಂಘವೊಂದರ ಅಧ್ಯಕ್ಷರು. ಧಾನ್ಯಗಳಲ್ಲಿ ತೂಕನಷ್ಟ?
ನ್ಯಾಯಬೆಲೆ ಅಂಗಡಿಯವರು ಧಾನ್ಯಗಳಲ್ಲಿ ತೂಕ ನಷ್ಟವಾಗುತ್ತಿದೆ ಎಂದು ಹೇಳುತ್ತಾರೆ. ಅಕ್ಕಿ ಬರುವುದು ಛತ್ತೀಸ್‌ಗಢದಿಂದ. ರೈಲಿನಿಂದ ಆಹಾರ ಸಾಮಗ್ರಿ ಬರುತ್ತದೆ. ಭಾರತೀಯ ಆಹಾರ ನಿಗಮ, ಆಹಾರ ಇಲಾಖೆ, ಜಿಲ್ಲಾ ಕೇಂದ್ರಗಳು ಹೀಗೆ ಎರಡು ಮೂರು ಬಾರಿ ಲೋಡ್ ಅನ್‌ಲೋಡ್ ಆಗುತ್ತದೆ. ಹೀಗಾಗಿ ತೂಕದಲ್ಲಿ ನಷ್ಟ ಬರುವುದನ್ನು ಇಲಾಖೆಯವರೂ ಒಪ್ಪಿಕೊಳ್ಳುತ್ತಾರೆ. ಆದರೆ ಸಹಕಾರಿ ಸಂಘಗಳು ಬ್ಯಾಂಕಿಂಗ್ ವ್ಯವಹಾರಕ್ಕೆ ಮೊದಲು ಊರಿನಲ್ಲಿ ತಳವೂರಿದ್ದು ಪಡಿತರ ವ್ಯವಸ್ಥೆಯಿಂದ ಎನ್ನುವುದನ್ನೂ ಬೆಟ್ಟುಮಾಡುತ್ತಾರೆ.