ಪಾಟ್ನಾ: ನಾಲ್ವರು ದರೋಡೆಕೋರರು ಗ್ರಾಹಕರ ಸೋಗಿನಲ್ಲಿ ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ ಸುಮಾರು 40 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಕದ್ದೊಯ್ದ ಘಟನೆ ಬಿಹಾರದ ಬೇಗುಸರಾಯ್ ಎಂಬಲ್ಲಿ ನಡೆದಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾಲ್ವರು ಆರೋಪಿಗಳು ಜ್ಯುವೆಲ್ಲರ್ ಶಾಪ್ ಗೆ ನುಗ್ಗಿದ್ದು ಅದರಲ್ಲಿ ಇಬ್ಬರು ಪರಾರಿಯಾಗಿದ್ದು, ಇನ್ನಿಬ್ಬರು ದರೋಡೆಕೋರರ ಕಾಲಿಗೆ ಮಾಲೀಕ ಗುಂಡು ಹೊಡೆದಿದ್ದು, ನಂತರ ಇಬ್ಬರನ್ನು ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಜ್ಯುವೆಲ್ಲರಿ ಶಾಪ್ ಮಾಲೀಕ ಪ್ರಮೋದ್ ಪೋದ್ದಾರ್ ಅವರ ಹೇಳಿಕೆ ಪ್ರಕಾರ, ದರೋಡೆಕೋರರು ಶಾಪ್ ಗೆ ನುಗ್ಗಿದಾಗ ತನ್ನ ಪುತ್ರ ರಾಜೀವ್ ಇದ್ದಿರುವುದಾಗಿ ತಿಳಿಸಿದ್ದಾರೆ. ಮೊದಲು ಇಬ್ಬರು ದರೋಡೆಕೋರರು ಬಂದಿದ್ದು, ಮೊದಲ ಮಹಡಿಗೆ ತೆರಳಿ, ಚಿನ್ನಾಭರಣಗಳನ್ನು ಪರಿಶೀಲಿಸಿದ್ದರು. ನಂತರ ಇಬ್ಬರು ಗನ್ ನಿಂದ ಗುಂಡು ಹೊಡೆಯುತ್ತಾ ಬಂದಿದ್ದು, ಗ್ರಾಹಕರು ಆತಂಕದಿಂದ ಅಡಗಿಕೊಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ಗ್ರಾಹಕರಿಗೆ ಹಿಂದೆ ಹೋಗಿ ಎಂದು ದರೋಡೆಕೋರರು ಹೇಳಿದ್ದು, ನಂತರ ಶೋಕೇಸ್ ನಲ್ಲಿಟ್ಟಿದ್ದ ಚಿನ್ನಾಭರಣವನ್ನು ಚೀಲದೊಳಕ್ಕೆ ತುಂಬಿಸಿಕೊಂಡು ಹೊರಗೆ ಓಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶಾಪ್ ಸಮೀಪವೇ ನನ್ನ ಮನೆ ಇದ್ದು, ಚೀರಾಟ, ಕೂಗಾಟ ಕೇಳಿ ನಾನು ಅಂಗಡಿಗೆ ಬಂದಿದ್ದೆ. ಆಗ ದರೋಡೆಕೋರರು ಪರಾರಿಯಾಗಲು ಯತ್ನಿಸಿದ್ದರು. ಅವರು ಕೂಡಾ ನನ್ನ ಗುರಿ ಮಾಡಿ ಗುಂಡು ಹೊಡೆದಿದ್ದರು, ಆದರೆ ನಾನು ಅದರಿಂದ ತಪ್ಪಿಸಿಕೊಂಡು ನನ್ನ ಸ್ವಯಂರಕ್ಷಣೆಗಾಗಿ ಇಬ್ಬರ ಕಾಲಿಗೆ ಗುಂಡು ಹಾರಿಸಿರುವುದಾಗಿ ಪೋದ್ದಾರ್ ತಿಳಿಸಿದ್ದಾರೆ.