Advertisement

ಪಡಿತರ ಚೀಟಿಯಲ್ಲಿ ‘ಏಸು’ಭಾವಚಿತ್ರ; ಡಿಕೆಶಿ ಸ್ವಕ್ಷೇತ್ರದಲ್ಲಿ ಮತಾಂತರ ವಿವಾದ

03:57 PM Oct 20, 2022 | Team Udayavani |

ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸ್ವಕ್ಷೇತ್ರದ ಉಯ್ಯಂಬಹಳ್ಳಿ ಹೋಬಳಿಯಲ್ಲಿ ಏಸು ಪ್ರತಿಮೆ ವಿವಾದ ರಾಜ್ಯಾದ್ಯಂತ ಸದ್ದು ಮಾಡಿತ್ತು. ಆ ವಿವಾದ ಮುಗಿಯುವ ಮುನ್ನವೇ ಈಗ ಮತಾಂತರ ವಿವಾದ ಬುಗಿಲೆದ್ದಿದ್ದು, ಅದನ್ನು ಖಂಡಿಸಿ ಶ್ರೀರಾಮ ಸೇನೆ ಜಿಲ್ಲಾಡಳಿತಕ್ಕೆ ದೂರು ನೀಡಿದೆ.

Advertisement

ಕನಕಪುರ ತಾಲೂಕಿನ ಉಯ್ಯಂಬಹಳ್ಳಿ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಸರ್ಕಾರಿ ಪಡಿತರ ಚೀಟಿಯಲ್ಲಿ ಏಸು ಭಾವಚಿತ್ರವನ್ನು ಮುದ್ರಿಸಿ ಪ್ರತಿ ಮನೆಗಳಿಗೆ ಹಂಚಿಕೆ ಮಾಡಲಾಗಿದೆ. ಅದು ಈಗ ವಿವಾದದ ಕಿಡಿಯಾಗಿದೆ. ಪಡಿತರ ಚೀಟಿಯ ಮೂಲಕ ಮತಾಂತರ ಮಾಡುವ ಹುನ್ನಾರ ನಡೆಸಲಾಗುತ್ತಿದೆ. ಕೂಡಲೇ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥರು ದೂರು ನೀಡಿದ್ದಾರೆ.

ಇದನ್ನೂ ಓದಿ:ಅಕ್ರಮ ಪಟಾಕಿ ಗೋದಾಮಿನಲ್ಲಿ ಸ್ಫೋಟ; 4 ಬಲಿ, ಹಲವರಿಗೆ ಗಾಯ

ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೇ ಬೆನ್ನೆಲುಬಾಗಿ ಏಸು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದರು. ಅದರಿಂದ ರಾಜ್ಯಾದ್ಯಂತ ವಿವಾದ ತಾರಕಕ್ಕೇರಿ. ನಂತರ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಇನ್ನು ಬಗೆಹರಿದಿಲ್ಲ, ಅದರ ಬೆನ್ನಲ್ಲೇ ಅದೇ ಹೋಬಳಿಯಲ್ಲಿ ಮತ್ತೂಂದು ಅವಾಂತರ ಸೃಷ್ಟಿಯಾಗಿದ್ದು, ಸರ್ಕಾರಿ ಸವಲತ್ತು ವಿತರಣೆ ಮಾಡುವ ಪಡಿತರ ಚೀಟಿಯಲ್ಲಿ ಏಸು ಭಾವಚಿತ್ರ ಮುದ್ರಿಸಿ ಮನೆ ಮನೆಗಳಿಗೆ ಹಂಚಿಕೆ ಮಾಡಲಾಗಿದೆ ಎಂಬುದು ವಿವಾದಕ್ಕೆ ಕಾರಣವಾಗಿದೆ.

ಮತಾಂತರ ಮಾಡುವ ಹುನ್ನಾರ: ಭಾರತೀಯ ಸಂಸ್ಕೃತಿಯಲ್ಲಿ ಹಿಂದೂಗಳ ಮನೆಯಲ್ಲಿ ದೇವತೆಗಳ ಭಾವಚಿತ್ರಗಳನ್ನು ಪೂಜಿಸುವುದು ವಾಡಿಕೆ. ಆದರೆ, ಏಸು ಭಾವಚಿತ್ರವಿರುವ ಪಡಿತರ ಚೀಟಿ ಹಂಚಿಕೆ ಮಾಡಿದ್ದು, ನಿಧಾನವಾಗಿ ಮತಾಂತರ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಯಾವುದೇ ಕ್ರಮಕ್ಕೆ ಮುಂದಾಗಿಲ್ಲದಿರುವುದು ವಿಪರ್ಯಾಸ ಎಂದು ಶ್ರೀರಾಮಸೇನೆ ಆತಂಕ ವ್ಯಕ್ತಪಡಿಸಿದೆ.

Advertisement

ಸೂಕ್ತ ಕ್ರಮಕ್ಕೆ ಮುಂದಾಗಿ: ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ನಾಗಾರ್ಜುನ್‌ ಮಾತನಾಡಿ, ಏಸು ಭಾವಚಿತ್ರ ನಂತರ ನಿಧಾನವಾಗಿ ಏಸು ಒಬ್ಬರೇ ದೇವರು, ಹಿಂದೂ ದೇವ ತೆಗಳು ದೇವರೆ ಅಲ್ಲ ಎನ್ನುವ ಭಾವನೆ ಬೆಳೆಸಿ ಮತಾಂತರ ಮಾಡುತ್ತಾರೆ. ಸರ್ಕಾರದ ಸವಲತ್ತು ಹಂಚಿಕೆಯಲ್ಲೂ ಮತಾಂತರ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದರೆ ಉಗ್ರವಾದ ಹೋರಾಟವನ್ನು ಎದುರಿಸಬೇಕು ಎಂಬ ಎಚ್ಚರಿಕೆ ನೀಡಿದ್ದಾರೆ.

ದೊಡ್ಡಮಟ್ಟದ ಹೋರಾಟಕ್ಕೆ ಸಿದ್ಧ: ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಇದನ್ನು ತಡೆದು ಸೂಕ್ತ ಕ್ರಮ ಜರುಗಿಸದಿದ್ದರೆ ಶ್ರೀರಾಮಸೇನೆ ಹಿಂದೂಗಳನ್ನು ಮತಾಂತರ ಮಾಡಲು ಬಿಡುವುದಿಲ್ಲ, ಈ ಬಗ್ಗೆ ದೊಡ್ಡಮಟ್ಟದ ಹೋರಾಟಕ್ಕೆ ಸಿದ್ಧವಾಗುವುದಾಗಿ ಎಚ್ಚರಿಕೆ ನೀಡಿದ್ದು, ಈ ಬಗ್ಗೆ ದೂರನ್ನು ಸಹ ನೀಡಲಾಗಿದೆ. ಮತಾಂತರದ ಹುನ್ನಾರದ ಹಿಂದೆ ಯಾರಿದ್ದಾರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ನಾಗಾರ್ಜುನ್‌ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next