Advertisement

ಬಸವಣ್ಣನ ಸಿಟ್ಟು ತಣಿಸಲು ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರ!

12:57 PM Jun 15, 2017 | |

ವಿಧಾನಸಭೆ: ಬಸವಣ್ಣನವರ ಭಾವಚಿತ್ರವನ್ನು ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಬೇಕೆಂದು ಆದೇಶ ಹೊರಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಖೀಲ ಭಾರತ ವೀರಶೈವ ಮಹಾಸಭಾ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮ ವಿಧಾನಸಭೆಯಲ್ಲಿ ಬುಧವಾರ ಸ್ವಾರಸ್ಯಕರ ಚರ್ಚೆಗೆ ಎಡೆಮಾಡಿಕೊಟ್ಟಿತು. ಇಲಾಖಾ ಅನುದಾನಗಳ ಬೇಡಿಕೆ ಮೇಲೆ ಮಾತನಾಡುತ್ತಿದ್ದ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌, ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮವನ್ನು ಅಕ್ಷರಧಾಮ ಮಾದರಿಯಲ್ಲಿ ಅಂತಾರಾಷ್ಟ್ರೀಯ ಮ್ಯೂಸಿಯಂ ನಿರ್ಮಾಣ ಮಾಡುವ ಯೋಜನೆ ನನೆಗುದಿಗೆ ಬಿದ್ದಿರುವ ಬಗ್ಗೆ ಪ್ರಸ್ತಾಪಿಸಿದರು.

Advertisement

ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿಯ ಗೋವಿಂದ ಕಾರಜೋಳ, ಕೂಡಲಸಂಗಮ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರವಿದ್ದರೂ ಕಳೆದ ನಾಲ್ಕು ವರ್ಷಗಳಿಂದ ಕೂಡಲಸಂಗಮ ನಿರ್ವಹಣೆಯಿಲ್ಲದೆ ಮೂಗು ಮುಚ್ಚಿಕೊಂಡು
ಹೋಗುವ ಸ್ಥಿತಿ ಇದೆ. ಎಂಟು ಸಾವಿರ ಮಂದಿ ಕುಳಿತುಕೊಳ್ಳಬಹುದಾದ ಸಭಾಮಂಟಪ ಹಾಳಾಗುತ್ತಿದೆ. ನಿರ್ವಹಿಸಲಾಗದಿದ್ದರೆ ಅಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದನ್ನು ಬಿಟ್ಟುಬಿಡಬೇಕು ಎಂದು ಆಗ್ರಹಿಸಿದರು.

ಅಷ್ಟರಲ್ಲಿ ಬಿಜೆಪಿಯ ಲಕ್ಷ್ಮಣ ಸವದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ಬಸವಣ್ಣನ ಬಗ್ಗೆ ಅರಿವಾಗಿದೆ.
ಕೂಡಲಸಂಗಮವನ್ನು ನಿರ್ಲಕ್ಷಿಸಿದ್ದರಿಂದ ಬಸವಣ್ಣನವರಿಗೆ ಸಿಟ್ಟು ಬರಬಾರದು ಎಂಬ ಕಾರಣಕ್ಕೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಲು ಸೂಚಿಸಿದ್ದಾರೆ ಎಂದರು. ಈ ವೇಳೆ ಬಿಜೆಪಿಯ ಕೆಲ ಸದಸ್ಯರು, ಅದಕ್ಕಾಗಿಯೇ ವೀರಶೈವ ಮಹಾಸಭಾದವರು ಮುಖ್ಯಮಂತ್ರಿಗಳಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು.

ವೀರಶೈವ ಮಹಾಸಭಾದವರು ನಿಮ್ಮನ್ನೇಕೆ ಸಮಾರಂಭಕ್ಕೆ ಆಹ್ವಾನಿಸಿಲ್ಲ. ನೀವು ವೀರಶೈವರಲ್ಲವೇ ಎಂದು ಜೆಡಿಎಸ್‌ ಸದಸ್ಯರು, ಬಿಜೆಪಿಯ ಜಗದೀಶ ಶೆಟ್ಟರ್‌, ಲಕ್ಷ್ಮಣ ಸವದಿ ಮತ್ತಿತರ ಕಾಲೆಳೆದರು. ಅದಕ್ಕೆ ಶೆಟ್ಟರ್‌, ನಮ್ಮನ್ನು ಕರೆದಿಲ್ಲ, ಅದಕ್ಕೆ ಹೋಗಿಲ್ಲ ಎಂದು ಉತ್ತರಿಸಿದರು.

ಅಷ್ಟರಲ್ಲಿ ಬಿಜೆಪಿಯ ಕೆಲ ಸದಸ್ಯರು, ಬಸವಣ್ಣನನ್ನು ಲಿಂಗಾಯತರಿಗೆ ಕೊಟ್ಟಿದ್ದೇ ನೀವು (ಬ್ರಾಹ್ಮಣರು). ನಿಮ್ಮನ್ನೂ ಆಹ್ವಾನಿಸಿಲ್ಲ ಎಂದು ಸಚಿವ ಆರ್‌.ವಿ.ದೇಶಪಾಂಡೆ ಅವರನ್ನು ಛೇಡಿಸಿದರು. ಇದಕ್ಕೆ ದೇಶಪಾಂಡೆ, ನಾನು
ಈ ಪ್ರಶ್ನೆಯನ್ನು ಹಿಂದೆಯೇ ಕೇಳಿದ್ದೆ ಎಂದಾಗ ಸದನದಲ್ಲಿ ನಗೆಯ ಅಲೆ ಚಿಮ್ಮಿತು.

Advertisement

ಮಧ್ಯಪ್ರವೇಶಿಸಿದ ಕಾಂಗ್ರೆಸ್‌ನ ಎ.ಎಸ್‌. ಪಾಟೀಲ್‌ ನಡಹಳ್ಳಿ, ಬಸವಣ್ಣ ಅವರು ಜಾತಿರಹಿತ ಸಮಾಜ ನಿರ್ಮಾಣಕ್ಕಾಗಿ ಮಂತ್ರಿ ಪಟ್ಟವನ್ನೇ ತ್ಯಜಿಸಿದರು. ಆದರೆ, ಈಗ ಅದೇ  ಬಸವಣ್ಣನವರ ಹೆಸರಿನಲ್ಲಿ ಜಾತಿ ಸಂಘಟಿತ
ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರೆ, ಇದು ವೀರಶೈವ ಮಹಾಸಭಾ ಹೆಸರಿನಲ್ಲಿ ಆಡಳಿತ ನಡೆಸುವವರೇ ಮಾಡಿದ ಅಭಿನಂದನಾ ಸಮಾರಂಭವೇ ಎಂದು ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನಿಸಿದರು.

ಬಿಸಿಯೇರಿದ ಚರ್ಚೆ: ಬಸವಣ್ಣ ಅವರ ಹೆಸರಿನಲ್ಲಿ ಕಾಂಗ್ರೆಸ್‌ ರಾಜಕೀಯ ಮಾಡುತ್ತಿದೆ ಎಂಬ ಮಾತು ಬಿಜೆಪಿ ಸದಸ್ಯರಿಂದ ಕೇಳಿಬಂದಾಗ, ಮಧ್ಯಪ್ರವೇಶಿಸಿದ ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ, ಅಂಬೇಡ್ಕರ್‌ ಮನುಸ್ಮತಿಯನ್ನು ಬಹಿರಂಗವಾಗಿ ಸುಟ್ಟುಹಾಕಿದ್ದರು. ಅಲ್ಲದೆ, ಹಿಂದೂ ಧರ್ಮ ಬೇಡವೆಂದು ಬೌದ್ಧ ಧರ್ಮ ಸೇರಿದರು. ಆದರೆ, ಇಂದು ಹಿಂದೂ ಧರ್ಮದ ಪ್ರತಿಪಾದಕರೇ ಅಂಬೇಡ್ಕರ್‌ ಜಯಂತಿ ಆಚರಿಸುತ್ತಿಲ್ಲವೇ. ಇದು ರಾಜಕೀಯವಲ್ಲವೇ ಎಂದು ಪ್ರಶ್ನಿಸಿದರು.

ಇದಕ್ಕೆ ತಿರುಗೇಟು ನೀಡಿದ ಬಿಜೆಪಿಯ ಅರವಿಂದ ಲಿಂಬಾವಳಿ, ಅಂಬೇಡ್ಕರ್‌ ಅವರನ್ನು ಚುನಾವಣೆಗೆ ನಿಲ್ಲಿಸಿ ಸೋಲಿಸಿದ್ದು ಕಾಂಗ್ರೆಸ್‌. ದೆಹಲಿಯಲ್ಲಿ ಅವರ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡದೆ ಮುಂಬೈನಲ್ಲಿ ನಡೆಯುವಂತೆ ನೋಡಿಕೊಂಡು ಅವಮಾನ ಮಾಡಿದ್ದು ಕಾಂಗ್ರೆಸ್‌. ಆದರೆ, ಕಾಂಗ್ರೆಸ್‌ ಅವರ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಈ ಕುರಿತ ಚರ್ಚೆ ದಿಕ್ಕುತಪ್ಪುತ್ತಿರುವುದನ್ನು ಗಮನಿಸಿದ ಸ್ಪೀಕರ್‌ ಕೆ.ಬಿ.ಕೋಳಿವಾಡ, ವೀರಶೈವ ಮಹಾಸಭಾ ನಡೆಸುತ್ತಿರುವ ಸಮಾರಂಭಕ್ಕೂ, ಈ ಸದನಕ್ಕೂ ಸಂಬಂಧವಿಲ್ಲ. ಹೀಗಾಗಿ ಇಲ್ಲಿ ಆ ಕುರಿತು ಚರ್ಚಿಸುವುದು ಅಪ್ರಸ್ತುತ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ಬಸವಣ್ಣನ ಬಗ್ಗೆ ಅರಿವಾಗಿದೆ. ಕೂಡಲಸಂಗಮವನ್ನು ನಿರ್ಲಕ್ಷಿಸಿದ್ದರಿಂದ ಬಸವಣ್ಣನವರಿಗೆ ಸಿಟ್ಟು ಬರಬಾರದು ಎಂಬ ಕಾರಣಕ್ಕೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣ ಭಾವಚಿತ್ರ ಅಳವಡಿಸಲು ಸೂಚಿಸಿದ್ದಾರೆ.
– ಲಕ್ಷ್ಮ ಸವದಿ, ಬಿಜೆಪಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next