ತಿರುವನಂತಪುರಂ: ಗುರುವಾಯೂರಲ್ಲಿ ಈಡೇರದ ಕೆ.ಜೆ.ಯೇಸುದಾಸ್ ಅವರ ಆಸೆ ತಿರುವನಂತಪುರದಲ್ಲಿ ಫಲಿಸಿದೆ. ಕ್ರೈಸ್ತ ಧರ್ಮದಲ್ಲಿ ಹುಟ್ಟಿದವರು ಎಂಬ ಕಾರಣಕ್ಕೆ ಗುರುವಾಯಪ್ಪನ್ ದೇಗುಲ ಪ್ರವೇಶ ಅವಕಾಶ ಪಡೆಯದೇ ಹತಾಶರಾಗಿದ್ದ ಖ್ಯಾತ ಗಾಯಕ ಯೇಸುದಾಸ್ ಅವರಿಗೆ ಈಗ ಅನಂತ ಪದ್ಮನಾಭನ ದರ್ಶನ ಭಾಗ್ಯ ಒಲಿದುಬಂದಿದೆ.
ತಮಗೆ ಹಿಂದೂ ಧರ್ಮದಲ್ಲಿ ನಂಬಿಕೆಯಿದ್ದು, ಅನಂತ ಪದ್ಮನಾಭನ ದರ್ಶನಕ್ಕೆ ಅವಕಾಶ ಕಲ್ಪಿಸಿ ಎಂದು ಕೋರಿ ಯೇಸುದಾಸ್ ಅವರು ಬರೆದಿದ್ದ ಅರ್ಜಿಗೆ ದೇವಾಲಯದ ದೇವಸ್ವಂ ಸಮಿತಿಯು ಹಸಿರು ನಿಶಾನೆ ತೋರಿದೆ. ದೇವಾಲಯದ ಪ್ರಧಾನ ಅರ್ಚಕರು (ತಂತ್ರಿ), ಮುಖ್ಯ ಅರ್ಚಕರು (ಪೆರಿಯ ನಂಬಿ), ಕಾರ್ಯಕಾರಿ ಅಧಿಕಾರಿ ಹಾಗೂ ಇತರೆ ಸದಸ್ಯರಿರುವ ಸಮಿತಿಯ ಸಭೆ ಮಂಗಳವಾರ ನಡೆದಿದ್ದು, ಯೇಸುದಾಸ್ ಅವರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ, “ಸಮಿತಿಯ ನಿರ್ಧಾರ ವನ್ನು ಆದಷ್ಟು ಬೇಗ ಅವರಿಗೆ ತಲುಪಿಸಲಿದ್ದೇವೆ ಎಂದು ಕಾರ್ಯಕಾರಿ ಅಧಿಕಾರಿ ವಿ.ರತೀಶನ್ ಹೇಳಿದ್ದಾರೆ.
ಅರ್ಜಿ ಸಲ್ಲಿಸಿದರೆ ಅವಕಾಶ: ಇಲ್ಲೂ ಹಿಂದೂಗಳಿಗೆ ಮಾತ್ರ ದೇಗುಲದೊಳಕ್ಕೆ ಪ್ರವೇಶವಿದೆ. ಹೀಗಾಗಿ, ಇತರ ಧರ್ಮೀಯರು ಅನಂತನ ದರ್ಶನ ಪಡೆಯಲು ನಿರ್ಬಂಧ ಹೇರಲಾಗಿದೆ. ಆದರೆ, ಈಗ ಯೇಸುದಾಸ್‌ರಂತೆ ಉಳಿದ ವರು ಹಿಂದೂ ಧರ್ಮದ ಮೇಲೆ ನಂಬಿಕೆ ಇದೆ ಎಂದು ಬರೆದುಕೊಟ್ಟರೆ ಪ್ರವೇಶ ನೀಡುತ್ತೇವೆ ಎಂದಿದ್ದಾರೆ.
ಗುರುವಾಯೂರಲ್ಲಿ ಸಿಗದ ಅವಕಾಶ: ಕ್ರೈಸ್ತರಾದ ಯೇಸುದಾಸ್ ಅವರು ಈ ಹಿಂದೆ ತ್ರಿಶೂರ್‌ನ ಗುರು ವಾಯೂರು ದೇವಾಲಯಕ್ಕೆ ಹಾಗೂ ಮಳಪ್ಪುರಂನ ಕಡಂಪುಳ ದೇವಸ್ಥಾನಕ್ಕೆ ಭೇಟಿ ನೀಡಲು ಯತ್ನಿಸಿದ್ದರು. ಆದರೆ, ಅನುಮತಿ ಕೊಟ್ಟಿರಲಿಲ್ಲ. ಕೊಲ್ಲೂರಿಗೆ ಪ್ರತಿವರ್ಷ
ತಮ್ಮ ಹುಟ್ಟಿದ ದಿನದಂದು ಭೇಟಿ ನೀಡುತ್ತಿರುತ್ತಾರೆ.