Advertisement

ಮಳೆಗಾಲಕ್ಕೆ ಗಂಜಿ ಊಟವೇ ಬೆಸ್ಟ್‌

07:57 PM Aug 06, 2019 | mahesh |

ಕಾಸರಗೋಡು: ಮಳೆಗಾಲದಲ್ಲಿ ಆರೋಗ್ಯ ಚೆನ್ನಾಗಿರಲು ಕರಾವಳಿಯ ಜನ ವಿವಿಧ ರೀತಿಯ ಆಹಾರ ಕ್ರಮವನ್ನು ಅನುಸರಿಸುತ್ತಿದ್ದರು. ಇಂತಹ ಪರಂಪರಾಗತ ಆಹಾರ ಕ್ರಮವನ್ನು ನೆನಪಿಸುವ ಉದ್ದೇಶದಿಂದಲೇ ಇಲ್ಲೊಂದು ಕಡೆ ಗಂಜಿ ಮೇಳ ಆಯೋಜಿಸಲಾಗಿದೆ.

Advertisement

ಕಾಸರಗೋಡಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಈ ಮೇಳ ಗಮನ ಸೆಳೆಯುತ್ತಿದೆ.  ಕುಟುಂಬಶ್ರೀ ಜಿಲ್ಲಾ ಮಿಷನ್‌ ನೇತೃತ್ವದಲ್ಲಿ “ಅಮೃತಂ ಔಷಧ ಗಂಜಿ ಮೇಳ’ ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮ ಸೋಮವಾರ ಆರಂಭಗೊಂಡಿದ್ದು, ಆ.13 ವರೆಗೆ ನಡೆಯಲಿದೆ.

ಗಂಜಿ ಮೇಳದಲ್ಲಿ ಏನಿದೆ?
ಔಷಧ ಸತ್ವಗಳನ್ನೊಳಗೊಂಡ ಔಷಧ ಗಂಜಿ, ಜೀರಿಗೆ ಗಂಜಿ, ತರಿಯಕ್ಕಿ ಗಂಜಿ, ಹಾಲುಗಂಜಿ, ಗೋ  ಗಂಜಿ, ತುಪ್ಪ ಗಂಜಿ ಸಹಿತ 8 ವಿಧದ ಗಂಜಿಗಳು ಇಲ್ಲಿ ಸಾಂಪ್ರಾಯಿಕ ಶೈಲಿಯಲ್ಲಿ ಸಿದ್ಧಗೊಳ್ಳುತ್ತಿವೆ. ಆರೋಗ್ಯ ಸಂರಕ್ಷಣೆ, ಪ್ರತಿರೋಧ ಶಕ್ತಿಹೆಚ್ಚಳ, ಜೀರ್ಣ ಶಕ್ತಿ ಇತ್ಯಾದಿಗಳಿಗೆ ಔಷಧ ಗಂಜಿ ರಾಮಬಾಣ ಎಂದು ಮೇಳದ ಪದಾ ಧಿಕಾರಿಗಳು ತಿಳಿಸಿದ್ದಾರೆ. ಜ್ವರ, ಮಲಬದ್ಧತೆ, ಕ್ಷೀಣ ಪರಿಹಾರಕ್ಕೆ ಜೀರಿಗೆ ಗಂಜಿ ಉತ್ತಮವಾಗಿದೆ. ದೈಹಿಕ ಶಕ್ತಿ ವರ್ಧನೆ ಇತ್ಯಾದಿಗಳಿಗೆ ಹಾಲುಗಂಜಿ ಪೂರಕವಾಗಿದೆ. ಸಿಹಿಮೂತ್ರರೋಗ ನಿಯಂತ್ರಣ, ವಾತರೋಗ ಶಮನ ಇತ್ಯಾದಿಗಳಿಗೆ ಗೋ  ಗಂಜಿ ಒಳ್ಳೆಯ ಔಷಧ. ಸಣಕಲು ದೇಹ ನಿವಾರಣೆ, ಶಕ್ತಿ ವರ್ಧನೆ ಇತ್ಯಾದಿಗಳಿಗೆ ಪೋಷಣೆ ನೀಡಬಲ್ಲ ಗಂಜಿಗಳೂ ಮೇಳದಲ್ಲಿವೆ ಎಂದು ಪದಾ ಧಿಕಾರಿಗಳು ಹೇಳಿದರು.

40 ರೂ.ಗೆ ಗಂಜಿ
40 ರೂ. ಬೆಲೆಯಿರುವ ಗಂಜಿ ಸೇವೆನೆ ಪೂರಕವಾದ ಚಟ್ನಿ, ಸೊಪ್ಪಿನ ಪಲ್ಯಗಳೂ ಜತೆಗಿವೆ. ಉಣ್ಣುವುದಕ್ಕೆ ಹಲಸಿನ ಎಲೆಯಿಂದ ತಯಾರಿಸಿದ ಗ್ರಾಮೀಣ ಶೈಲಿಯ ಸರಳ ಚಮಚ ಗಮನ ಸೆಳೆಯುತ್ತದೆ.

ಗಂಜಿ ಮೇಳದ ಚಪ್ಪರದಲ್ಲೇ ಔಷಧ ಗಂಜಿ ತಯಾರಿಸ ಬಹುದಾದ ಕಿಟ್‌, ಕುಟುಂಬಶ್ರೀ ಘಟಕಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವೂ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next