ಇದು ಊರಕೋಳಿಗಾತ್ರದ ಬದನೆಕಾಯಿ ಬಣ್ಣದಿಂದ ಕೂಡಿರುತ್ತದೆ. ಇದು ರೇಲ್ ಕುಟುಂಬಕ್ಕೆ ಸೇರಿದ ಸುಂದರ ಹಕ್ಕಿ. ಪರ್ಫಿರಿಯೋ, ಪಾರ್ಫಿರಿಯೋ ಎಂಬುದು ಇದರ ವೈಜಾnನಿಕ ಹೆಸರು. ಬಿಳಿ ಎದೆ ಹುಂಡಕೋಳಿಗಿಂತ ಗಾತ್ರದಲ್ಲಿ ದೊಡ್ಡದು. ಚುಂಚು ಕೆಂಪು, ಉದ್ದವಾದ ಕೆಂಪನೆ ಕಾಲು. ಕಾಲಲ್ಲಿ ಉದ್ದವಾದ ನಾಲ್ಕು ಬೆರಳು ಹಿಂಬದಿಯ ಬೆರಳು ಚಿಕ್ಕದು. ಕಾಲ್ಬೆರಳಿನಲ್ಲಿ ಉದ್ದ ಉಗುರಿನಿಂದ ಕೂಡಿರುತ್ತದೆ.
ಜಾಲಪಾದ ಇಲ್ಲ ಇದಕ್ಕೆ. ಹಣೆಯಲ್ಲಿ ಎದ್ದು ಕಾಣುವ ಕೆಂಪು ನಾಮವೇ ಗುರುತಿಸಲು ನೆರವಾಗುವುದು. ಕಮಲ , ಕವಳೆ ಎಲೆಗಳು ತುಂಬಿದ ನೀರಿನ ಹೊಂಡ, ಕೆಸರು ತುಂಬಿದ ಕೊಳಗಳ ಹತ್ತಿರ ಜೋಡಿಯಾಗಿ ಇಲ್ಲವೆ ಗುಂಪಿನಲ್ಲಿ ನೀಲಿನಾಮದ ಹಕ್ಕಿ ಕಾಣಸಿಗುತ್ತದೆ. ಕೆಲವೊಮ್ಮ ಕಮಲದ ದೊಡ್ಡ ಎಲೆಗಳ ಮೇಲೆ ಇವು ನಡೆದಾಡುವುದೂ ಉಂಟು. ಬಾತುಗಳಂತೆ ನೀರಿನಲ್ಲಿ ಈಜುವುದು. ಕೆಲವೊಮ್ಮ ನೀರಿನ ಮೇಲ್ಮೆ„ಯಲ್ಲಿ ಬಾತುಗಳ ಹಾಗೆಯೇ ನೀರು ಚಿಮ್ಮಿಸುತ್ತಾ ಹಾರುತ್ತದೆ. ಹಾರುತ್ತಲೇ ಕವಳೆ ಎಳೆ ಚಿಗುರನ್ನೂ, ಕಮಲದ ಎಳೆ ದಂಟನ್ನು ಸೀಳಿ ಅದರ ಮಧ್ಯದ ತಿರುಳನ್ನು ತಿಂದುಬಿಡುತ್ತದೆ. ಕೆಸರು ತುಂಬಿದ ಕೊಳಗಳ ಹತ್ತಿರ ಮೆಲ್ಲಗೆ ಹೆಜ್ಜೆ ಇಡುತ್ತಾ , ಹೆಜ್ಜೆಗೊಮ್ಮೆ ತನ್ನ ಚಿಕ್ಕ ಬಾಲದ ಪುಕ್ಕವನ್ನು ಮೇಲ್ಮುಖವಾಗಿ ಮಾಡುತ್ತಾ ಓಡಾಡುತ್ತಿರುತ್ತದೆ. ಸ್ವಲ್ಪ ಗಾಬರಿಯಾದಾಗ ಸ್ವಲ್ಪ ದೂರ ನಡೆದಂತೆ ಮಾಡಿ ಹಾರಿಬಿಡುವುದು ಇದರ ಸ್ವಭಾವ. ಇದರ ಬೆನ್ನು ಎದೆ ನೇರಳೆ ಬಣ್ಣದಿಂದ ಕೂಡಿದ್ದು, ಕಾಲು ಕೊಕ್ಕರೆ ಕಾಲನ್ನು ಹೋಲುತ್ತದೆ.
ಬೆರಳುಗಳು ಇದರ ಕಾಲಿನ ಅರ್ಧದಷ್ಟು ಉದ್ದ ಇರುವುದು ವಿಶೇಷ. ಇದು ಹೆಜ್ಜೆಗೊಮ್ಮೆ ಬಾಲ ಕುಣಿಸುವಾಗ ಅದರ ಅಡಿಯ ಬಿಳಿಬಣ್ಣ ಎದ್ದು ಕಾಣುತ್ತದೆ. ಭತ್ತ , ಜೌಗು, ಸಸ್ಯದ ಕಾಂಡ, ಕೀಟ, ಬಸವನ ಹುಳು, ಏಡಿ, ಶಂಕದ ಹುಳುಗಳನ್ನು ಸಹ ತಿನ್ನುತ್ತದೆ ಈ ನಾಮದ ಕೋಳಿ. ಇದು ಕೊಕ್ಕ, ಕೊಕ್ಕ, ಕೇಕೇ ಎಂದು ಗಡುಸಾಗಿ ಕೂಗುತ್ತದೆ. ಪ್ರಣಯದ ಸಮಯದಲ್ಲಿ ಗಂಡು ಕಾದಾಡಿ ತನ್ನ ಪೌರುಷ ಪ್ರದರ್ಶಿಸುತ್ತದೆ. ಗೆದ್ದ ಕೋಳಿಯನ್ನು ಹೆಣ್ಣು ವರಿಸುತ್ತದೆ. ಕಾಳಗದಲ್ಲಿ ಗೆದ್ದ ಗಂಡು, ತನ್ನ ಕೊಕ್ಕಿನಲ್ಲಿ ಜಲ ಸಸ್ಯ ಹಿಡಿದು ಹೆಣ್ಣಿನ ಮುಂದೆ ತನ್ನ ಪ್ರಣಯ ಯಾಚನೆ ಮಾಡುತ್ತದೆ. ಜೊಂಡು ಸಸ್ಯದ ಮಧ್ಯದಲ್ಲಿ ಅಡಗಿದ್ದು ದಿನದಲ್ಲಿ ಇಂಥ ಸಮಯ ಅನ್ನದೇ ಕೂಗುತ್ತಲೇ ಇರುತ್ತದೆ. ಅದರಲ್ಲೂ ಮೋಡ ಆವರಿಸಿದಾಗು ಕೂಗಾಟ ಹೆಚ್ಚು. ಸಂತಾನಾಭಿವೃದ್ಧಿ ಸಮಯದಲ್ಲಿ ಗದ್ದಲು ಇನ್ನೂ ಹೆಚ್ಚು. ಗ್ರಾಮಾಂತರ ಪ್ರದೇಶಗಳಲ್ಲಿ ಇದರ ಮಾಂಸ ತುಂಬ ರುಚಿ ಎಂದು ಇದನ್ನು ಬೇಟೆಯಾಡಿ ತಿನ್ನುವುದುಂಟು. ಹಾಗಾಗಿ ಇದನ್ನು ಸಂರಕ್ಷಿಸಬೇಕಾದ ಅನಿವಾರ್ಯತೆ ಇದೆ.
ಜೂನ್‌ನಿಂದ ಸೆಪ್ಟೆಂಬರ್ ಇದು ಮರಿಮಾಡುವ ಸಮಯ. ಒತ್ತೂತ್ತಾಗಿ ಬೆಳೆದ ಜಲ ಸಸ್ಯಗಳ ಮೇಲೆ ಜೊಂಡು ಮತ್ತು ಹುಲ್ಲಿನಿಂದ ಮೆತ್ತನೆಯ ಗೂಡು ಮಾಡುವುದು. ಆ ಮೆತ್ತನೆಯ ಹಾಸಿನಲ್ಲಿ 5 ರಿಂದ 12ಮೊಟ್ಟೆ ಇಡುತ್ತದೆ. ಕೆನೆ ಕೆಂಪು ಹಳದಿ ಮಿಶ್ರಿತ ಮೊಟ್ಟೆಯ ಮೇಲೆ ಕೆಂಗೆಂಪು ಚುಕ್ಕೆ ಮತ್ತು ಕಲೆಗಳಿರುತ್ತವೆ. ಮರಿ ಚಿಕ್ಕದಾಗಿರುವಾಗ ಕಪ್ಪೋಕಪ್ಪು. ಆಗ ತಂದೆ ತಾಯಿಯ ಜೊತೆ ಇದ್ದು ತನ್ನ ಆಹಾರ ದಕ್ಕಿಸಿಕೊಳ್ಳುತ್ತದೆ. ಇದು ದೊಡ್ಡದಾದಾಗ ನೇರಳೆ ಬಣ್ಣ ಮತ್ತು ಕೆಂಪು ಚುಂಚು ಹಣೆಯಲ್ಲಿ ನಾಮ ಮೂಡುತ್ತದೆ. ಈಜಾಡುವ ಹಕ್ಕಿಯಲ್ಲದಿದ್ದರೂ, ಕೆರೆ ಜೊಂಡಿನ ಹತ್ತಿರವೇ ಇದರ ವಾಸ.