Advertisement

ನಿಸಾರ್ ಅಹಮದ್ ಓದುಗರು ಮತ್ತು ಕಾವ್ಯದ ನಡುವಿನ ಜನಪ್ರಿಯ ಕೊಂಡಿ: ಎಚ್ ಎಸ್ ವಿ

08:19 AM May 04, 2020 | Nagendra Trasi |

ಮಣಿಪಾಲ: ಕೆಎಸ್ ನಿಸಾರ್ ಅಹಮದ್ ಕನ್ನಡದ ಮುಖ್ಯ ಕವಿಗಳಲ್ಲಿ ಒಬ್ಬರು. ಅವರ ಸಾಧನೆ ಕಾವ್ಯದಲ್ಲಿ, ನಾಟಕದಲ್ಲಿ ಮತ್ತು ಅನುವಾದದಲ್ಲಿ ವ್ಯಕ್ತವಾಗಿದ್ದನ್ನು ಗಮನಿಸಬೇಕು. ಸ್ವಂತ ನಾಟಕಗಳನ್ನು ಬರೆಯದಿದ್ದರು ಕೂಡಾ ನಿಸಾರ್ ಶೇಕ್ಸ್ ಪಿಯರ್ ನಾಟಕಗಳನ್ನು ಅನುವಾದ ಮಾಡಿದ್ದಾರೆ.

Advertisement

ನವ್ಯ ಗದ್ಯ ಕಾವ್ಯ ಮತ್ತು ಮನೋಹರವಾದ ಗೀತೆ ಎರಡು ರೀತಿ ಕವಿತೆಗಳನ್ನು ನಿಸಾರ್ ಬರೆದಿದ್ದಾರೆ.. ಅವರ ನಿತ್ಯೋತ್ಸವ ಎಲ್ಲರೂ ಕೇಳಿರುವ ಹಾಡಾಗಿದೆ. ಅದು ಕನ್ನಡದ ಮೊಟ್ಟ ಮೊದಲ ಸುಗಮ ಸಂಗೀತದ ಧ್ವನಿ ಸುರುಳಿಯಾಗಿದೆ. ತುಂಬಾ ಒಳ್ಳೆಯ ಹಾಡು ಮತ್ತು ಕವಿತೆಗಳನ್ನು ಬರೆದ ಹೆಗ್ಗಳಿಕೆ ಅವರದ್ದಾಗಿದೆ.

ಮಾಸ್ತಿ ಬಗ್ಗೆಯೂ ತುಂಬಾ ಒಳ್ಳೆಯ ಕವಿತೆ ಬರೆದಿದ್ದರು. ನಿಸಾರ್ ಅಹಮದ್ ಓದುಗರು ಮತ್ತು ಕಾವ್ಯದ ನಡುವೆ ಒಂದು ಕೊಂಡಿಯಾಗಿದ್ದರು. ಯಾಕೆಂದರೆ ನಿಸಾರ್ ಅಹಮದ್ ಅವರ ಪದ್ಯಗಳಿಂದ ಜನ ಮತ್ತೆ ಕವನದ ಕಡೆ ಹೊರಳಿದ್ದರು. ಕವಿತೆ ನಮಗಲ್ಲಪ್ಪಾ ಅದು ತುಂಬಾ ಸೀರಿಯಸ್ ಅಂತ ಹೇಳಿ ಕವಿತೆಗಳಿಂದ ಜನ ವಿಮುಖವಾಗಿದ್ದರು. ನಿಸಾರ್ ಪದ್ಯ ಬರೆಯಲು ಶುರು ಮಾಡಿದ ಮೇಲೆ ಜನ ಕವಿತೆ ಓದಲು ಶುರು ಮಾಡಿದ್ದರು. ಅದು ಸರಳವಾಗಿ ಮತ್ತು ಸುಂದರವಾಗಿ ಹೇಳುತ್ತಿದ್ದರಿಂದ ಜನರಿಗೆ ಅರ್ಥವಾಗುತ್ತಿತ್ತು. ಕವಿತೆ ಮತ್ತು ಓದುಗರ ನಡುವೆ ಸುವರ್ಣ ಸೇತುವೆಯಾಗಿದ್ದರು.

ನಮ್ಮ ಸಮಾಜದಲ್ಲಿ ಬಹಳ ಅಗತ್ಯವಾದಂತಹ ಹಿಂದೂ ಮತ್ತು ಮುಸ್ಲಿಂ ಸಂಸ್ಕೃತಿ ನಡುವೆ ಕೂಡ ಒಂದು ಸಾಂಸ್ಕೃತಿಕ ಕೊಂಡಿಯಾಗಿದ್ದರು. ಹಿಂದೂ, ಮುಸ್ಲಿಂರ ನಡುವಿನ ಪ್ರೀತಿ, ವಿಶ್ವಾಸಗಳನ್ನು ಸ್ಥಾಪನೆ ಮಾಡಲಿಕ್ಕೆ ತಮ್ಮ ಕವಿತೆಗಳ ಮೂಲಕ ಪ್ರಯತ್ನ ಪಟ್ಟವರು ನಿಸಾರ್.

ನನಗೆ ಒಂಥರಾ ಮೇಷ್ಟ್ರು ಇದ್ದಾಗೆ ಅವರು…ಯಾಕೆಂದರೆ ನಾನು ಪಿಯುಸಿ ಓದುತ್ತಿರಬೇಕಾದರೆ ಅದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ನಾನು ವಿಜ್ಞಾನದ ವಿದ್ಯಾರ್ಥಿಯಾಗಿದ್ದೆ, ಅವರು ಭೂವಿಜ್ಞಾನದ ಪ್ರೊಫೆಸರ್ ಆಗಿದ್ದರು. ಆಗ ನಾನು ಪದ್ಯ ಬರೆಯುತ್ತಿದ್ದ ವಿಷಯವನ್ನು ಪತ್ತೆ ಹಚ್ಚಿದ್ದರು. ಹೀಗೆ ನನ್ನ ಹತ್ತಿರ ಕರೆದು ವಿಚಾರಿಸುತ್ತಿದ್ದರು, ಪದ್ಯಗಳನ್ನು ಓದುತ್ತಿದ್ದರು. ಪದ್ಯಗಳನ್ನು ತಿದ್ದುತ್ತಿದ್ದರು. ಆ ಕಾಲದಲ್ಲಿ ಹೆಸರಾದ ಕವಿಯೊಬ್ಬರು ನನ್ನಂತಹವನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದು ನನಗೆ ಹೆಮ್ಮೆಯ ವಿಚಾರವಾಗಿತ್ತು.ಕಾಲೇಜು ಜೀವನ ಮುಗಿದ ಬಳಿಕವೂ ನನ್ನ ಮತ್ತು ನಿಸಾರ್ ಅಹಮದ್ ಅವರ ಬಾಂಧವ್ಯ ಅದೇ ರೀತಿ ಮುಂದುವರಿದಿತ್ತು, ದಿನಕ್ಕೆ ಒಮ್ಮೆಯಾದರೂ ಭೇಟಿಯಾಗಿ ಮಾತನಾಡುತ್ತಿದ್ದೇವು. ಅವರೊಂದಿಗೆ ಕಳೆದ ಕಾಲ ಎಂದೆಂದಿಗೂ ಸ್ಮರಣೀಯ.

Advertisement

ಎಚ್.ಎಸ್. ವೆಂಕಟೇಶ್ ಮೂರ್ತಿ
ಹಿರಿಯ ಕವಿ, ಸಾಹಿತಿ

(ನಿರೂಪಣೆ: ನಾಗೇಂದ್ರ ತ್ರಾಸಿ)

Advertisement

Udayavani is now on Telegram. Click here to join our channel and stay updated with the latest news.

Next