Advertisement

ಜನಪರ ಹೋರಾಟಗಾರ ಕಾಮ್ರೇಡ್‌ ಎ. ಶಾಂತಾರಾಮ ಪೈ ಜನ್ಮಶತಾಬ್ದಿ

07:08 PM Nov 07, 2021 | Team Udayavani |

ಕಾಮ್ರೇಡ್‌ ಎ. ಶಾಂತಾರಾಮ ಪೈ ಅವರದು ಅವಿಶ್ರಾಂತ ದುಡಿಮೆಯ, ಕಷ್ಟ ಸಹಿಷ್ಣುತೆಗಳ ಹೋರಾಟ, ತ್ಯಾಗಗಳ ಜೀವನ. ಶ್ರೀ ಅಳಿಕೆ ವಾಮನ ಪೈ – ಶ್ರೀಮತಿ ಕಲ್ಯಾಣಿ ಪೈ ದಂಪತಿಯ ಕೊನೆಯ ಪುತ್ರನಾಗಿ 1921ರ ಮೇ 22ರಂದು ಶಾಂತಾರಾಮ ಪೈ ಅವರು ಜನಿಸಿದರು. 1943ರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಮ್ಯುನಿಸ್ಟ್‌ ಪಕ್ಷದ ಹಾಗೂ ಕಾರ್ಮಿಕ ಸಂಘಗಳ ನಾಯಕರಾಗಿ ದುಡಿದು ಮಂಗಳೂರು ನಗರಸಭೆಯಲ್ಲಿ ದಶಕಗಳಿಗೂ ಹೆಚ್ಚು ಕಾಲ ನಗರಸಭಾ ಸದಸ್ಯರಾಗಿ, ವಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸಿದ್ದರು. ಯಾವುದೇ ಸಮಸ್ಯೆ ಎದುರಾದರೂ ಅದನ್ನು ನಗುಮುಖದಿಂದಲೇ ಸ್ವೀಕರಿಸಿ, ಪರಿಹರಿಸುತ್ತಿದ್ದರು. ವಿರೋಧಿಗಳನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಸಾಮರಸ್ಯವನ್ನು ಕಾಯ್ದುಕೊಂಡು ಎಲ್ಲರ ಪ್ರೀತಿ ಗೌರವಗಳಿಗೆ ಪಾತ್ರರಾಗಿದ್ದರು.

Advertisement

ಚಿಕ್ಕಂದಿನಿಂದಲೇ ಶಾಂತಾರಾಮ ಪೈ ಅವರ ವಿಶಿಷ್ಟ ವ್ಯಕ್ತಿತ್ವ – ಸು#ರದ್ರೂಪಿಯಾಗಿ ಒಳ್ಳೆಯ ಗುಣ ನಡತೆಯ ಈ ಬಾಲಕ ಎಲ್ಲರಿಗೂ ಅಚ್ಚುಮೆಚ್ಚು. ಶ್ರೀನಿವಾಸ ಪಾಠಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಗಣಪತಿ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ಮತ್ತು ಸೈಂಟ್‌ ಅಲೋಸಿಯಸ್‌ ಕಾಲೇಜಿನಲ್ಲಿ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವಾಗ ಸ್ವಾತಂತ್ರ್ಯಹೋರಾಟಗಾರ ಹಾಗೂ ಹಿರಿಯ ಕಮ್ಯುನಿಸ್ಟ್‌ ನಾಯಕ ಕಾಮ್ರೇಡ್‌ ಬಿ.ವಿ. ಕಕ್ಕಿಲ್ಲಾಯ ಹಾಗೂ ಮಣಿಪಾಲದ ರೂವಾರಿ ಕೆ.ಕೆ. ಪೈ ಅವರು ಸಹಪಾಠಿಗಳಾಗಿದ್ದರು ಮಾತ್ರವಲ್ಲದೆ ಶಾಂತಾರಾಮ ಪೈ ಅವರ ಒಡನಾಡಿಗಳಾಗಿದ್ದರು.

1938-39ರಲ್ಲಿ ಉದ್ಯೋಗವನ್ನು ಅರಸಿಕೊಂಡು ಮುಂಬ ಯಿಗೆ ಪ್ರಯಾಣ ಬೆಳೆಸಿದ ಶಾಂತಾರಾಮ ಪೈ ಅವರಿಗೆ ಅಲ್ಲಿ ದ.ಕ. ಜಿಲ್ಲೆಯವರಾದ ಹಿರಿಯ ಕಮ್ಯುನಿಸ್ಟ್‌ ನಾಯಕ ಎಸ್‌.ವಿ. ಘಾಟೆ ಅವರ ಪರಿಚಯವಾಯಿತು. ದೇಶದ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ದೇಶದ ದುಡಿಯುವ ಜೀವನವನ್ನು ಕಂಡ ಪೈ ಅವರು, ಮುಂಬಯಿಯಲ್ಲಿ ತೆರೆಮರೆಯಲ್ಲಿ ಸಕ್ರಿ ಯವಾಗಿದ್ದ ಕಮ್ಯುನಿಸ್ಟ್‌ ಪಕ್ಷವನ್ನು ಸೇರಿದರು. ಹಾಗೂ ಪಕ್ಷದ ಕೇಂದ್ರ ಸಮಿತಿ ಕಾರ್ಯಾಲಯದಲ್ಲಿ ದುಡಿಯುವ ಅವಕಾಶ ಪಡೆದರು. ಅವರನ್ನು “ಬಚ್ಚಾ’ ಎಂಬ ಗುಪ್ತ ನಾಮ ದಿಂದ ಕರೆಯಲಾಗುತ್ತಿತ್ತು. ತನ್ನ ಕಾರ್ಯ ಕೌಶಲದಿಂದಾಗಿ ತಮ್ಮ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆ ಮತ್ತು ಜಾಗರೂಕತೆಯಿಂದ ನಿರ್ವಹಿಸುತ್ತಿದ್ದರು.

ಇದನ್ನೂ ಓದಿ:2026ರಲ್ಲಿ ಚಂದ್ರನಲ್ಲಿ ರೋವರ್‌; ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ, ನಾಸಾದಿಂದ ಹೊಸ ಯೋಜನೆ

1942ರಲ್ಲಿ ಪಕ್ಷದ ಮೇಲಿನ ಪ್ರತಿಬಂಧ ತೆಗೆದು ಹಾಕಿದಾಗ ಪೈ ಅವರನ್ನು ಕೇಂದ್ರ ಸಮಿತಿ ದ.ಕ. ಜಿಲ್ಲೆಗೆ ಕಳುಹಿಸಿತು. ಅನಂತರ 25 ವರ್ಷಗಳಲ್ಲಿ ಅವರು ಜಿಲ್ಲೆಯ ದುಡಿಯುವ ವರ್ಗದ ಏಳಿಗೆಗಾಗಿ ಅಹರ್ನಿಶಿ ಶ್ರಮಿಸಿದರು. ಕಮ್ಯುನಿಸ್ಟ್‌ ಚಳವಳಿ, ಕಾರ್ಮಿಕ ಹೋರಾಟ, ಸಾಮಾಜಿಕ ಜೀವನದ ಚರಿತ್ರೆಯಲ್ಲಿ ಶಾಂತಾರಾಮ ಪೈಯವರ ಹೆಸರು ಹಾಸುಹೊಕ್ಕಾಗಿದೆ. ಆರಂಭದಲ್ಲಿ ಬೀಡಿ, ನೇಕಾರ, ಪ್ರಸ್‌, ಹಂಚಿನ ಕೆಲಸಗಾರ ಸಂಘಟನೆಗಳು ಇದ್ದವು. ಅಸಂಘಟಿತರಾಗಿದ್ದ ಉಳಿದ ಕೈಗಾರಿಕೆಗಳನ್ನು ಬಿ.ವಿ. ಕಕ್ಕಿಲ್ಲಾಯ, ಸಿಂಪ್ಸನ್‌ ಸೋನ್ಸ್‌, ಲಿಂಗಪ್ಪ ಸುವರ್ಣ, ಮೋನಪ್ಪ ಶೆಟ್ಟಿ, ಶಿವಶಂಕರ ರಾವ್‌, ನಾರಾಯಣ ಮೂರ್ತಿ ಈ ಎಲ್ಲ ಸಂಗಾತಿಗಳನ್ನು ಕೂಡಿಕೊಂಡು ಶಾಂತಾ ರಾಮ ಪೈ ಅವರು ಗೇರುಬೀಜ, ಮುನ್ಸಿಪಲ್‌, ಅಡಿಕೆ, ಕಾಫಿ ಕೆಲಸಗಾರರ ಸಂಘಟನೆಯಲ್ಲೂ ಹೋರಾಟ ಗಳಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.

Advertisement

1944-1946 ಕಾಲಘಟ್ಟದಲ್ಲಿ ಶಾಂತಾ ರಾಮ ಪೈ ಅವರ ರಾಜಕೀಯ ಜೀವನ ಅತ್ಯಂತ ಕಷ್ಟಕರವಾಗಿತ್ತು. ಆದರೂ ಅವರು ನಗರದಲ್ಲೇ ಇದ್ದು ರಹಸ್ಯವಾಗಿ ಚಳವಳಿಯ ನಾಯಕತ್ವ ನಿಭಾಯಿಸುತ್ತಿದ್ದರು. 1952ರಲ್ಲಿ ಬಂದರು ಕೆಲಸಗಾರರ ಮುಷ್ಕರ, 1953ರಲ್ಲಿ ಹಂಚಿನ ಕೆಲಸಗಾರರ ಹೋರಾಟ, 1954ರಲ್ಲಿ ಗೇರುಬೀಜ ಕೆಲಸಗಾರರ ಅಪ್ರತಿಮ ಚಳವಳಿ, ಶಾಂತಾರಾಮ ಪೈ ಅವರು ನಡೆಸಿದ ಆಮರಣ ಉಪವಾಸ, 4ನೇ ದಿನಕ್ಕೆ ಮುಂದುವರಿದಾಗ ಕೊನೆಗೆ ಜಿಲ್ಲಾಧಿಕಾರಿಗಳೇ ಸ್ವತಃ ಬಂದು ಈ ಉಪವಾಸದ ನಿಲುಗಡೆಗಾಗಿ ಸೂತ್ರವನ್ನು ಮುಂದಿಡಬೇಕಾಯಿತು. ಸಾರ್ವಜನಿಕ ನಾಯಕರಾಗಿ ಜಿಲ್ಲೆಯಲ್ಲೇ ಪ್ರಖ್ಯಾತರಾದರು.

ನಗರಸಭಾ ಸದಸ್ಯರಾಗಿ, ರಾಜ್ಯ ಕಾರ್ಮಿಕ ಸಲಹಾ ಸಮಿತಿ ಇಎನ್‌ಐ ಸಲಹಾ ಸಮಿತಿ ಸದಸ್ಯರಾಗಿ ಎಸ್‌.ಕೆ.ಟಿ.ಯು.ಸಿ. ಅಧ್ಯಕ್ಷರಾಗಿ, ಭಾರತ ಕಮ್ಯುನಿಸ್ಟ್‌ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ, ಪಕ್ಷದ ರಾಜ್ಯಮಂಡಳಿ ಸದಸ್ಯರಾಗಿ, ಎಐಟಿಯುಸಿ ಯ ಕೇಂದ್ರ ಸಮಿತಿಯ ಸದಸ್ಯರಾಗಿದ್ದ ಪೈ ಅವರು ಕಾರ್ಮಿಕರ ಹೋರಾಟದ ನಡುವೆ ಹೃದಯಾಘಾತಕ್ಕೊಳಗಾಗಿ (2-7-1967)ರಂದು ನಿಧನ ಹೊಂದಿದರು.

ಅವರ ಜೀವನ ಮತ್ತು ಹೋರಾಟಗಳ ಬಗ್ಗೆ “ನಗುಮುಖದ ಹೋರಾಟಗಾರ ಎ. ಶಾಂತಾರಾಮ ಪೈ’ ಎಂಬ ಪುಸ್ತಕವನ್ನು ಹೊರತರಲಾಗಿದ್ದು ಅದು ಈಗಾಗಲೇ ಕೊಂಕಣಿ ಭಾಷೆಗೆ ಅನುವಾದಗೊಂಡಿದೆ. ಅದರ ಇಂಗ್ಲಿಷ್‌ ಆವೃತ್ತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಅವರ ಹೆಸರಿನ “ಕಾಮ್ರೇಡ್‌ ಎ. ಶಾಂತಾರಾಮ ಪೈ ಸ್ಮಾರಕ ಭವನ’ ಬಂಟ್ವಾಳದ ಬೈಪಾಸಿನಲ್ಲಿದ್ದು ಲಕ್ಷಾಂತರ ಕಾರ್ಮಿಕರನ್ನು ಜಾಗೃತಿಗೊಳಿಸುವ ಕೇಂದ್ರವಾಗಿ ಕಾರ್ಯಾಚರಿಸುತ್ತಿದೆ.

ಕಾಮ್ರೇಡ್‌ ಎ. ಶಾಂತಾರಾಮ ಪೈ ಅವರ ಜನ್ಮಶ ತಾಬ್ದಿಯ ಸಂದರ್ಭದಲ್ಲಿ ನವೆಂಬರ್‌ 7ರಂದು ಮಂಗ ಳೂರಿನಲ್ಲಿ ನಡೆಯುತ್ತಿರುವ ಜನ್ಮ ಶತಾಬ್ದ ಕಾರ್ಯ ಕ್ರಮದಲ್ಲಿ ಅವರು ಕಾರ್ಮಿಕರ ಪರವಾಗಿ ನಡೆಸಿದ ಹೋರಾಟವನ್ನು ಸ್ಮರಿಸುವ ಕಾರ್ಯವಾಗಲಿದೆ. ಈ ಮೂಲಕ ಇಂತಹ ಮಹಾನ್‌ ಕಾರ್ಮಿಕ ನೇತಾರನನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸಿಕೊಡುವ ಕಾರ್ಯ ವಾಗಲಿದ್ದು ನಿಜಕ್ಕೂ ಅರ್ಥಪೂರ್ಣ ಕಾರ್ಯಕ್ರಮ.

– ವಿ. ಕುಕ್ಯಾನ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next