ಬೆಂಗಳೂರು: ಖ್ಯಾತ ಚಿತ್ರಕಲಾವಿದ ಬಿ.ಕೆ.ಎಸ್.ವರ್ಮಾ(74ವರ್ಷ) ಅವರು ಸೋಮವಾರ (ಫೆ.06) ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇವರ ಕಲಾಕೃತಿಗಳು ವಿಶ್ವಮಟ್ಟದಲ್ಲಿ ಮನ್ನಣೆ ಗಳಿಸಿದ್ದವು. ಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸ್ (ಬಿಕೆಎಸ್) ಅವರು ಒಮ್ಮೆ ಮೈಸೂರು ಅರಮನೆಯಲ್ಲಿ ರವಿವರ್ಮ ಅವರ ಪೇಂಟಿಂಗ್ಸ್ ಗಳನ್ನು ವೀಕ್ಷಿಸುತ್ತಲೇ ಸ್ಫೂರ್ತಿಗೊಂಡಿದ್ದರು. ಹೀಗೆ ತಮ್ಮ ಹೆಸರಿನ ಜೊತೆ ವರ್ಮಾ ಅವರ ಹೆಸರನ್ನು ಸೇರಿಸಿಕೊಂಡಿದ್ದರು.
ಆ ದಿನಗಳಲ್ಲಿ ಬ್ಲೇಡ್ ನಿಂದ, ಉಗುರಿನಿಂದ, ಎಂಬಾಸಿಂಗ್, ಥ್ರೆಡ್ ಪೇಂಟಿಂಗ್ ಮಾಡಿ ಹಣಗಳಿಸುತ್ತಿದ್ದರು. ತಮ್ಮ ಎರಡೂ ಕೈಗಳ ಬೆರಳುಗಳನ್ನು ಉಪಯೋಗಿಸಿ ಸುಂದರವಾದ ಚಿತ್ರಗಳನ್ನು ರಚಿಸುವ ಪರಿ ಅನನ್ಯ. ಎರಡೇ ನಿಮಿಷಗಳಲ್ಲಿ ಸುಂದರವಾದ ಚಿತ್ರ ಬಿಡಿಸುವ ಕಲಾವಿದರಲ್ಲಿ ಮುಖ್ಯರಾಗಿದ್ದಾರೆ.
ಬಿಕೆಎಸ್ ಕಲೆಯನ್ನು ಮೇರುನಟ ಡಾ.ರಾಜ್ ಕುಮಾರ್, ರಜನಿಕಾಂತ್, ಅಂತಾರಾಷ್ಟ್ರೀಯ ಸುಪ್ರಸಿದ್ಧ ಕಲಾವಿದ ಡಾ.ರೋರಿಕ್ ಮತ್ತು ದೇವಿಕಾರಾಣಿ ದಂಪತಿ ಮೆಚ್ಚಿದ್ದರು.
ಡಾ.ಜಯಲಕ್ಷ್ಮಮ್ಮ ಮತ್ತು ಸಂಗೀತ ಶಾಸ್ತ್ರಜ್ಞ ಪಂ.ಕೃಷ್ಣಚಾರ್ ದಂಪತಿ ಪುತ್ರ ಬಿಕೆಎಸ್. ಕೇವಲ 2ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದ ಇವರು ಚಿಕ್ಕಂದಿನಲ್ಲೇ ಹಟವಾದಿಯಾಗಿದ್ದರು. ನಂತರ ಬಿಕೆಎಸ್ ಎ.ಎನ್.ಸುಬ್ಬರಾವ್ ಕಲಾಮಂದಿರದಲ್ಲಿ ಚಿತ್ರಕಲಾಭ್ಯಾಸ ಮಾಡಿದ್ದರು.
ಬಿಕೆಎಸ್ ಗೆ ಬೆಂಗಳೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಲಲಿತಕಲಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ, ಅಮೆರಿಕ, ಸಿಂಗಪುರ, ಕುವೈಟ್ ಸೇರಿದಂತೆ ಹಲವು ದೇಶಗಳಲ್ಲಿ ತಮ್ಮ ಚಿತ್ರಕಲೆಯನ್ನು ಪ್ರದರ್ಶಿಸಿದ್ದರು.