Advertisement

ಕೆರೆ, ಕಲ್ಯಾಣಿಗಳಲ್ಲಿ ಪಿಒಪಿ ಗಣಪನಿಗೆ ನಿರ್ಬಂಧ

02:30 PM Aug 10, 2017 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೆರೆಗಳಲ್ಲಿ ಈ ವರ್ಷದಿಂದ ರಾಸಾಯನಿಕ ಮಿಶ್ರಿತ ಪ್ಲಾಸ್ಟರ್‌ ಆಫ್ ಪ್ಯಾರೀಸ್‌ (ಪಿಒಪಿ)
ಗಣೇಶ ಮೂರ್ತಿಗಳ ವಿಸರ್ಜನೆಯನ್ನು ನಿರ್ಬಂಧಿಸಲಾಗಿದೆ. ಹೌದು, ರಾಸಾಯನಿಕ ಮಿಶ್ರಿತ ಗಣಪನ ಮೂರ್ತಿಗಳ ವಿಸರ್ಜನೆಯಿಂದ ಬಿಬಿಎಂಪಿ ವ್ಯಾಪ್ತಿಯ ಜಲಮೂಲಗಳು ಕಲುಷಿತಗೊಳ್ಳುತ್ತಿದ್ದು ಆದನ್ನು ತಪ್ಪಿಸಲು ಪಾಲಿಕೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಈ
ತೀರ್ಮಾನ ಕೈಗೊಂಡಿವೆ. ಹೀಗಾಗಿ, ಸಾರ್ವಜನಿಕವಾಗಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡುವವರು ಪರಿಸರ ಸ್ನೇಹಿ ಮೂರ್ತಿಗಳನ್ನು ಮಾತ್ರ ಖರೀದಿಸುವುದು ಒಳ್ಳೆಯದು. ಇಲ್ಲದಿದ್ದರೆ ಗಣಪನ ವಿಸರ್ಜನೆ ಕಷ್ಟವಾಗಲಿದೆ. ಕೆರೆಗಳಲ್ಲಿ ಮೂರ್ತಿಗಳ ವಿಸರ್ಜನೆಗೆ ಅವಕಾಶ ಕಲ್ಪಿಸಿರುವ ಜಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಿದ್ದು, ಪಿಒಪಿ ಗಣೇಶ ಮೂರ್ತಿಗಳ ವಿಸರ್ಜನೆ
ಕಂಡುಬಂದಲ್ಲಿ ಕೂಡಲೆ ಕ್ರಮ ಕೈಗೊಳ್ಳಲಾಗುತ್ತದೆ. ಈ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಪಾಲಿಕೆ
ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪ್ರತ್ಯೇಕ ಸಿಬ್ಬಂದಿಯನ್ನೂ ನಿಯೋಜಿಸಲಾಗುತ್ತಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಳೆದ ವರ್ಷವೇ ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಆದರೆ, ಗಣೇಶ ಮೂರ್ತಿ ವ್ಯಾಪಾರಿಗಳು ಈಗಾಗಲೇ ಸಾಕಷ್ಟು ಮೂರ್ತಿಗಳನ್ನು ಸಂಗ್ರಹಿಸಿರುವುದ ಕಾರಣ ತೊಂದರೆಯಾಗುತ್ತದೆ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈ ಬಾರಿಯೂ ನಗರಕ್ಕೆ ಸಾವಿರಾರು ಸಂಖ್ಯೆಯ ಪಿಒಪಿ ಮೂರ್ತಿಗಳು ಬಂದಿರುವ ಹಿನ್ನೆಲೆಯಲ್ಲಿ ವಿಸರ್ಜನೆಗೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸುವುದು ಹಾಗೂ ರಾಸಾಯನಿಕ ಹಾಗೂ ಬಣ್ಣ ಮಿಶ್ರಿತ ಗಣೇಶ ಮೂರ್ತಿಗಳಿಂದ ಆಗುವ ಪರಿಣಾಮಗಳ ಕುರಿತು ಬಿಬಿಎಂಪಿ ವತಿಯಿಂದ ಈಗಾಗಲೇ ಶಾಲಾ-ಕಾಲೇಜುಗಳ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗಿದೆ. ಇದರೊಂದಿಗೆ ನಗರದ ವಿವಿಧ ವಾರ್ಡ್‌ಗಳ ನಾಗರಿಕ ಕ್ಷೇಮಾಭಿವೃದ್ಧಿ ಸಂಸ್ಥೆಗಳೊಂದಿಗೆ ಸಭೆ ನಡೆಸಿ, ಪರಿಸರ ಸ್ನೇಹಿ ಗಣೇಶನನ್ನೇ ಪೂಜಿಸುವಂತೆ ಮನವಿ ಮಾಡಲಾಗಿದೆ. ಕಳೆದ ಒಂದು ವರ್ಷದಿಂದ ಗಣೇಶ ಮೂರ್ತಿ ತಯಾರಕರು ಹಾಗೂ ವ್ಯಾಪಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೆ, ಇದರಿಂದ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ನಗರದ ಕೆರೆ ಹಾಗೂ ಕಲ್ಯಾಣಿಗಳಲ್ಲಿ ವಿಸರ್ಜನೆಗೆ ಅವಕಾಶ ನೀಡದರಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಕೆಲವೊಂದು ವಾರ್ಡ್‌ಗಳಲ್ಲಿ ಸ್ಥಳೀಯ ಪಾಲಿಕೆ ಸದಸ್ಯರು ತಮ್ಮ ವ್ಯಾಪ್ತಿಯ ಕೆರೆ ಹಾಗೂ ಕಲ್ಯಾಣಗಳ ಬಳಿ
“ಪಿಒಪಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶವಿಲ್ಲ’ ಎಂಬ ಫ‌ಲಕಗಳನ್ನೂ ಅಳವಡಿಸಿದ್ದಾರೆ. ಉಳಿದ ಕಡೆ ಪಾಲಿಕೆಯಿಂದ
ಇಂತಹ ಜಾಗೃತಿ ಫ‌ಲಕಗಳನ್ನು ಅಳವಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಮೊಬೈಲ್‌ ಟ್ಯಾಂಕರ್‌ ನಿಯೋಜನೆ: ಬಿಬಿಎಂಪಿಯಿಂದ ಗುರುತಿಸುವ ಕೆರೆ ಹಾಗೂ ಕಲ್ಯಾಣಿಗಳ ಬಳಿ ಬಹಳಷ್ಟು ಜನಜಂಗುಳಿ ಇರುವುದರಿಂದ ಜನರಿಗೆ ಅನುಕೂಲ ಕಲ್ಪಿಸಲು ಸಣ್ಣ ಗಾತ್ರದ ಗಣೇಶ ಮೂರ್ತಿಗಳ ವಿಸರ್ಜನೆಗೆ ಮೊಬೈಲ್‌ ಟ್ಯಾಂಕ್‌ಗಳ ವ್ಯವಸ್ಥೆ ಮಾಡಲಾಗುವುದು. ಪ್ರತಿ ವಾರ್ಡ್‌ನಲ್ಲಿ ಇರಿಸುವ ಗಣೇಶ ಮೂರ್ತಿಗಳ ಸಂಖ್ಯೆಗೆ ಅನುಗುಣವಾಗಿ ಟ್ಯಾಂಕರ್‌ ನಿಯೋಜಿಸಲಾಗುವುದು. ಇದರೊಂದಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ಟ್ಯಾಂಕರ್‌ಗಳು ಲಭ್ಯವಾಗಲಿವೆ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Advertisement

ಸಭೆಗೆ ಅಧಿಕಾರಿಗಳ ಗೈರು: ನಗರಕ್ಕೆ ಈಗಾಗಲೇ ಗಣೇಶ ಮೂರ್ತಿಗಳನ್ನು ತರಿಸಿರುವವರ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳು, ವಿಸರ್ಜನೆ, ಜಾಗೃತಿ ಕಾರ್ಯಕ್ರಮಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ನೇತೃತ್ವದಲ್ಲಿ ಬುಧವಾರ ಸಭೆ ಕರೆಯಲಾಗಿತ್ತು. ಆದರೆ, ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಜಾರಿಗೊಳಿಸಬೇಕಾದ ಬಿಬಿಎಂಪಿ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳೇ ಸಭೆಗೆ ಗೈರಾಗಿದ್ದರು ಎಂದು ಮಂಡಳಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಸಿಸಿಟಿವಿ ಕ್ಯಾಮೆರಾ ಅಳವಡಿಕೆ: ಸಾರ್ವಜನಿಕರ ಭದ್ರತೆ ದೃಷ್ಟಿಯಿಂದ ಪಾಲಿಕೆಯಿಂದ ಗಣೇಶ ಮೂರ್ತಿ ವಿಸರ್ಜನೆಗೆ ಗುರುತಿಸುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಕೆರೆ ಹಾಗೂ ಕಲ್ಯಾಣಿಗಳ ಬಳಿ ಸಾವಿರಾರು ಜನರು ಸೇರುವ ಕಾರಣ, ಭದ್ರತೆ ದೃಷ್ಟಿಯಿಂದ ಸಿಸಿಟಿವಿ ಜತೆಗೆ, ಅಲ್ಲೇ ಒಂದು ನಿರ್ವಹಣಾ ಕೊಠಡಿ ಸ್ಥಾಪಿಸಲು ಹಾಗೂ ಮಹಿಳೆಯರು ತರುವ ಮೂರ್ತಿಗಳನ್ನು ಸ್ವೀಕರಿಸಲು ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next