Advertisement

ಪಿಒಪಿ ಗಣೇಶ ಮೂರ್ತಿ ಕಡ್ಡಾಯ ನಿಷೇಧ

04:23 PM Jun 16, 2017 | Team Udayavani |

ಹುಬ್ಬಳ್ಳಿ: ಈ ವರ್ಷದಿಂದ ಅವಳಿನಗರದಲ್ಲಿ ಪ್ಲಾಸ್ಟರ್‌ ಆಫ್ ಪ್ಯಾರಿಸ್‌(ಪಿಒಪಿ) ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು. ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪನೆ ನಿಟ್ಟಿನಲ್ಲಿ ಗಣೇಶ ಮೂರ್ತಿ ತಯಾರಕರು, ಪ್ರತಿಷ್ಠಾಪನೆ ಮಾಡುವವರು ಹಾಗೂ ವಿವಿಧ ಸಂಘ- ಸಂಸ್ಥೆಗಳಿಗೆ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. 

Advertisement

ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಡ್ಡಾಯ ನಿಷೇಧಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಈಗಾಗಲೇ ಜಿಲ್ಲಾಡಳಿತ ಮಾಡಿಕೊಂಡಿದ್ದು, ಸಾರ್ವಜನಿಕರು, ಮೂರ್ತಿ ತಯಾರಕರು, ಸಂಘ-ಸಂಸ್ಥೆಗಳು ಇದಕ್ಕೆ ಸಹಕಾರ ನೀಡಬೇಕು ಎಂದರು. ಕಳೆದ ವರ್ಷ ಸಮಯಾವಕಾಶ ಇಲ್ಲದ ಕಾರಣ ಪಿಒಪಿ ಪ್ರತಿಷ್ಠಾಪನೆಗೆ ಹಾಗೂ ಮಾರಾಟಕ್ಕೆ ಅಲ್ಪ ವಿನಾಯಿತಿ ನೀಡಲಾಗಿತ್ತು.

ಆದರೆ ಈ ಬಾರಿ ಯಾವುದೇ ಕಾರಣಕ್ಕೂ ಅವಕಾಶವೇ ಇಲ್ಲ. ಒಂದು ವೇಳೆ ಪ್ರತಿಷ್ಠಾಪನೆ ಹಾಗೂ ಮಾರಾಟ ಮಾಡಿದ್ದೇ ಆದಲ್ಲಿ ಕಾನೂನು ಕ್ರಮ ಖಂಡಿತ ಎಂದು ಎಚ್ಚರಿಸಿದರು. ಡಿಸಿಪಿ ರೇಣುಕಾ ಸುಕುಮಾರ ಮಾತನಾಡಿ, ಪಿಒಪಿ ಗಣೇಶ ಪ್ರತಿಷ್ಠಾಪನೆ ಮಾಡುವುದು, ಡಿಜೆ ಹಚ್ಚಿ ಹುಚ್ಚೆದ್ದು ಕುಣಿಯುವುದು ಇದು ಆ ದೇವರಿಗೆ ಮಾಡುವ ಅಪಮಾನ.

ಈ ಬಾರಿ ನಡೆಯುವ ಗಣೇಶ ಹಬ್ಬದಲ್ಲಿ ಇಷ್ಟೇ ಎತ್ತರದ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು, ಇಷ್ಟೇ ಡಿಜೇಬಲ್‌ನ ಸಿಸ್ಟಮ್‌ ಹಚ್ಚಬೇಕು ಎಂಬುದರ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ನೀಡಲಾಗುವುದು ಎಂದರು. ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಮಾತನಾಡಿ, ಅವಳಿನಗರದ ಗಣೇಶ  ಹಬ್ಬಕ್ಕೆ ತನ್ನದೆಯಾದ ಘನತೆ ಇದೆ.

ಯಾವುದೇ ಕಾರಣಕ್ಕೂ ಅದನ್ನು ಹಾಳು ಮಾಡುವುದು ಬೇಡ. ಪಿಒಪಿ ಗಣೇಶ ಮೂರ್ತಿಗಳನ್ನು ತ್ಯಜಿಸುವ ಮೂಲಕ ಲೋಕಮಾನ್ಯ ತಿಲಕರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯೋಣ ಎಂದರು. ಪಾಲಿಕೆ ವಿರೋಧ ಪಕ್ಷದ ನಾಯಕ ಸುಭಾಸ ಶಿಂಧೆ ಮಾತನಾಡಿ, ಗಣೇಶ ವಿಸರ್ಜನೆ 5, 7, 9, 11 ದಿನಗಳ ಬದಲಾಗಿ, 6, 8, 10, 12 ದಿನಗಳಿಗೆ ಆಗುತ್ತಿರುವುದು ವಿಷಾದನೀಯ.

Advertisement

ನಮ್ಮ ಹಬ್ಬಗಳನ್ನು ನಾವೇ ನಮ್ಮ ಕೈಯಾರೇ ಹಾಳು ಮಾಡುತ್ತಿದ್ದು ಇದು ಆಗದಂತೆ ಎಲ್ಲರೂ ಎಚ್ಚೆತ್ತುಕೊಳ್ಳುವುದು ಅವಶ್ಯ. ಡಿಜೆ ಹಚ್ಚುವುದಕ್ಕೆ ಪೈಪೋಟಿಗಿಳಿಯುವ ಬದಲು ಉತ್ತಮ ಕಾರ್ಯಗಳಿಗೆ ಪೈಪೋಟಿ ಮಾಡುವ ಮೂಲಕ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವಂತಾಗಬೇಕು ಎಂದರು. 

ಮೂರ್ತಿ ಕಲಾಕಾರರ ಸಂಘದ ಅಧ್ಯಕ್ಷ ಗಣೇಶ ಬಿ.ಪೊಣಾರಕರ ಮಾತನಾಡಿ, ಗಣೇಶ ಮೂರ್ತಿ ನಿರ್ಮಿಸಬೇಕಾದರೆ ಮಣ್ಣಿನ ಸಮಸ್ಯೆ, ಅದನ್ನು ತಂದಿಟ್ಟುಕೊಳ್ಳಲು ಜಾಗದ ಸಮಸ್ಯೆ ಸೇರಿದಂತೆ ಕಲಾವಿದರಿಗೆ ಹಲವಾರು ಸಮಸ್ಯೆಗಳಿದ್ದು ಆ ಕುರಿತು ಗಮನ ನೀಡಬೇಕು. ಪಿಒಪಿ ಗಣೇಶ ಮೂರ್ತಿ ನಿಷೇಧಕ್ಕೆ ನಮ್ಮ ಬೆಂಬಲವಿದೆ.

ಅದರೊಂದಿಗೆ ಹುಲ್ಲು ಹಾಗೂ ಕಬ್ಬಿಣ ಬಳಸಿ ಮಾಡುವ ಮೂರ್ತಿಗಳನ್ನು ನಿಷೇಧಿಸಬೇಕು. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಧಾರವಾಡ ಸುಭಾಸ ರಸ್ತೆ ಮಂಡಳದ ಮುಖ್ಯಸ್ಥ ಅಶೋಕ ಅಮ್ಮಿನಗಡ ಮಾತನಾಡಿ, ಧಾರವಾಡ ಸುಭಾಸ ರಸ್ತೆಯಲ್ಲಿ ಹಲವಾರು ವರ್ಷಗಳಿಂದ ಗಣೇಶ ಪ್ರತಿಷ್ಠಾಪಿಸಲಾಗುತ್ತಿದ್ದು ಕಳೆದ ವರ್ಷದಿಂದ ಮಣ್ಣಿನ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

ಪ್ರತಿಷ್ಠಾಪನೆ ಜಾಗದಲ್ಲೇ ಗಣೇಶ ವಿಸರ್ಜನೆ ಮಾಡುವ ಮೂಲಕ, ಅದರಿಂದ ಬಂದ ಮಣ್ಣು ಬಳಸಿ ಭಕ್ತರಿಗೆ ತುಳಸಿ ಸಸಿ ನೀಡಲಾಗಿದೆ. ಎಲ್ಲರೂ ಅದೇ ರೀತಿ ಮಾಡಿದ್ದಲ್ಲಿ ಪರಿಸರ ರಕ್ಷಣೆ, ನೀರಿನ ರಕ್ಷಣೆ ಮಾಡಬಹುದು ಎಂದರು. ಕಲಾವಿದ ಬಾಲಕೃಷ್ಣ, ಮಂಜುನಾಥ ಹಿರೇಮಠ ಮಾತನಾಡಿ, ಕೊಲ್ಲಾಪುರದಲ್ಲಿ ಗಣೇಶ ಮೂರ್ತಿ ತಯಾರಕರಿಗೆ ಜಾಗ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. 

ಅದೇ ರೀತಿ ಇಲ್ಲಿಯೂ ಮೂರ್ತಿ ತಯಾರಿಕೆಗೆ ಜಾಗ ನೀಡುವ ಮೂಲಕ ಪ್ರೋತ್ಸಾಹಿಸಬೇಕು. ಮಣ್ಣಿನ ಗಣೇಶ ಮೂರ್ತಿ ಆದಲ್ಲಿ 5 ಅಡಿಗಿಂತ ಹೆಚ್ಚಿನ ಎತ್ತರ ಮಾಡಲು ಸಾಧ್ಯವಿಲ್ಲ. ಇದನ್ನು ಕಟ್ಟುನಿಟ್ಟು ಮಾಡಿ ಎಂದು ಒತ್ತಾಯಿಸಿದರು. ಮಹಾಪೌರ ಡಿ.ಕೆ.ಚವ್ಹಾಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಅವಳಿನಗರದ ಜನರೆಲ್ಲರೂ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಹಬ್ಬ ಆಚರಿಸಬೇಕು.

ಪಾಲಿಕೆ ಉದ್ಯಾನವನದಲ್ಲಿ ಅಥವಾ ಸಿಎ ಸೈಟ್‌ಗಳಲ್ಲಿ ಗಣೇಶ ಮೂರ್ತಿ ನಿರ್ಮಾಣಕ್ಕೆ ಮೂರು ತಿಂಗಳ ಅವಕಾಶ ಮಾಡಿಕೊಡಬೇಕು ಎಂದರು. ಮಹಾಮಂಡಳದ ಉಪಾಧ್ಯಕ್ಷ ಪಾಲಿಕೆ ಸದಸ್ಯ ಅಲ್ತಾಫ್ ಕಿತ್ತೂರ, ಡಿ.ಗೋವಿಂದರಾವ್‌ ಇನ್ನಿತರರು ಮಾತನಾಡಿದರು.

ಬಾವಿ ಅಭಿವೃದ್ಧಿ ಮಾದರಿ ನಿರ್ಮಾಣ: ಗಣೇಶನ ಮೂರ್ತಿ ವಿಸರ್ಜನೆಗೆ ಹೊಸೂರನಲ್ಲಿ ನೂತನವಾಗಿ ಆರಂಭಿಸಿರುವ ಬಾವಿ ಹಾಗೂ ಅದರ ಸುತ್ತಮುತ್ತ ಅಭಿವೃದ್ಧಿ ಪಡಿಸುವ ಕುರಿತು ಮಾಯಾ ಖೋಡೆ, ವಿಶ್ವನಾಥ ಹಿತ್ತಾಳೆ ಎಂಬುವರು ಮಾದರಿ ನಿರ್ಮಿಸಿ ಪ್ರದರ್ಶನಕ್ಕೆ ಇರಿಸಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next