ಹಾಸನ: ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣಪತಿ ಮೂರ್ತಿಗಳ ನಿರ್ಮಾಣ, ಮಾರಾಟದ ಮೇಲೆ ಸರ್ಕಾರ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಮಣ್ಣಿನಿಂದ ನಿರ್ಮಾಣ ಮಾಡಿದ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನಷ್ಟೇ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ಭರದಿಂದ ಸಾಗಿದೆ.
ಗೌರಿ – ಗಣೇಶ ಹಬ್ಬದ ಮುನ್ನಾ ದಿನ ಮಾರುಕಟ್ಟೆಯಲ್ಲಿ ಗಣಪತಿ ಖರೀದಿಯ ವ್ಯಾಪರ ಭರದಿಂದ ಸಾಗಿತ್ತು. ಹಾಸನ ನಗರದ ಮಹಾವೀರ ವೃತ್ತ, ದೊಡ್ಡ ಬಸ್ತಿ ರಸ್ತೆ, ಕಟ್ಟಿನಕೆರೆ ಮಾರುಕಟ್ಟೆ, ಕಸ್ತೂರಬಾ ರಸ್ತೆ ಸೇರಿ ವಿವಿಧೆಡೆ ಗಣೇಶ ಮೂರ್ತಿಗಳ ಮಾರಾಟ ನಡೆಯುತ್ತಿದ್ದು, ಮಹಾವೀರ ಸರ್ಕಲ್‌ನ ಆಸುಪಾಸಿನಲ್ಲಿ ಗಣಪತಿ ಮೂರ್ತಿಗಳ ಮಾರಾಟ ಜೋರಾಗಿತ್ತು. ಒಂದು ವಾರದಿಂದಲೂ ನಡೆಯು ತ್ತಿದೆ ಯಾದರೂ, ಗಣೇಶ ಪ್ರತಿಷ್ಠಾಪನೆಯ ಮುನ್ನಾ ದಿನವಾದ ಭಾನುವಾರ ಭಕ್ತರು ಗಣೇಶ ಮೂರ್ತಿಗಳನ್ನು ಖರೀದಿಸಿದರು. ವ್ಯಾಪಾರಿಗಳ ಬಳಿ ಎಲ್ಲೂ ಪಿಒಪಿ ಗಣೇಶ ಮೂರ್ತಿಗಳು ಕಂಡು ಬರಲಿಲ್ಲ.
ಪಿಒಪಿ ಮೂರ್ತಿಗಳ ಮಾರಾಟ ಇಲ್ಲ: ಸರ್ಕಾರವು ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳ ತಯಾರಿಕೆ ಮಾರಾಟ, ವಿಸರ್ಜನೆ ನಿಷೇಧಿಸಿದೆ. ಆದೇಶ ಉಲ್ಲಂ ಸಿದರೆ ಕಾನೂನು ಕ್ರಮ ಜಾರಿ ಯಾಗುವ ಅರಿವು ಮೂಡಿದೆ. ಹಾಗಾಗಿ ಯಾರೂ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡು ತ್ತಿಲ್ಲ ಎಂದು ವ್ಯಾಪಾರಿಗಳು ಸ್ಪಷ್ಟಪಡಿಸಿದರು. ಬಣ್ಣ ರಹಿತ ಗಣೇಶನಿಗೆ ಬೇಡಿಕೆ: ಪರಿಸರಸ್ನೇಹಿ ಬಣ್ಣವನ್ನು ಬಳಸಿ ಮಣ್ಣಿನಿಂದ ಗಣೇಶ ಮೂರ್ತಿಗಳನ್ನು ನಿರ್ಮಾಣ ಮಾಡಲಾಗಿದೆ. ಈ ವರ್ಷ ಬಣ್ಣ ರಹಿತವಾದ ಗಣೇಶ ಮೂರ್ತಿಗಳನ್ನೂ ಕೆಲವು ಗ್ರಾಹಕರು ಬಯಸಿ ಖರೀದಿಸುತ್ತಿದ್ದಾರೆ ಎಂದು ವ್ಯಾಪಾರಿಗಳು ಮಾಹಿತಿ ನೀಡಿದರು.
ಮುಂಗಡ ಬುಕ್ಕಿಂಗ್: ತಮಗೆ ಇಷ್ಟವಾದ, ಆಕರ್ಷಕ ಗಣೇಶ ಮೂರ್ತಿಗಳಿಗಾಗಿ ಕೆಲವರು ವ್ಯಾಪಾರಿಗಳಿಗೆ ಮುಂಗಡ ಪಾವತಿಸಿದ್ದು, ಅಂತಹವರು ವ್ಯಾಪಾರಿಗಳಿಂದ ನೇರವಾಗಿ ಗಣೇಶ ಮೂರ್ತಿಗಳನ್ನು ಖರೀದಿಸಿ ಕೊಂಡೊಯ್ದರೆ, ಇನ್ನು ಕೆಲವರು ಚೌಕಾಸಿ ಮಾಡಿ ಗಣೇಶ ಮೂರ್ತಿಗಳನ್ನು ಖರೀದಿ ಮಾಡಿದರು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಗಣೇಶ ಮೂರ್ತಿಗಳ ದರ ತುಸು ಹೆಚ್ಚಾಗಿದೆ. ಆದರೂ, ಭಕ್ತರು ಬೆಲೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ಉತ್ಸಾಹದಿಂದ ಗಣೇಶಮೂರ್ತಿಗಳನ್ನು ಖರೀದಿಸಿ ಕೊಂಡೊಯ್ಯುತ್ತಿದ್ದರು.
– ಎನ್.ನಂಜುಂಡೇಗೌಡ