ರಾಯಚೂರು: ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ಗುರುವಾರ ವಿಜೃಂಭಣೆಯಿಂದ ಜರುಗುತ್ತಿದೆ. ಬೆಳಗ್ಗೆಯಿಂದಲೇ ಶ್ರೀಮಠದಲ್ಲಿ ವಿಶೇಷ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ರಾಯರ ಮೂಲಬೃಂದಾವನಕ್ಕೆ ಅಭಿಷೇಕ ನೆರವೇರಿಸಿ ವಿಶೇಷ ಅಲಂಕಾರ ಮಾಡಲಾಯಿತು.
ತಮಿಳುನಾಡಿನ ಶ್ರೀ ಕ್ಷೇತ್ರ ಶ್ರೀರಂಗಂನ ಶ್ರೀರಂಗನಾಥ ದೇವಸ್ಥಾನ ಹಾಗೂ ಆಂಧ್ರಪ್ರದೇಶದ ಅಹೋಬಲ ನರಸಿಂಹಸ್ವಾಮಿ ದೇವಸ್ಥಾನದಿಂದ ಮಂತ್ರಾಲಯಕ್ಕೆ ಆಗಮಿಸಿದ ಶೇಷ ವಸ್ತ್ರವನ್ನು ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಡಳಿತ ಅಧಿಕಾರಿಗಳು, ಸಿಬ್ಬಂದಿಗಳು ಸ್ವಾಗತಿಸಿದರು. ಶ್ರೀ ಮಠದ ಆವರಣದಿಂದ ಸಕಲ ವಾಧ್ಯಗಳ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶೇಷ ವಸ್ತ್ರವನ್ನು ಸ್ವೀಕರಿಸಿ ರಾಯರಿಗೆ ಸಮರ್ಪಿಸಿದರು.
ಇದನ್ನೂ ಓದಿ:Mangaluru: ತಮಿಳುನಾಡಿಗೆ ನೀರು… ರಾಜ್ಯ ಸರಕಾರದಿಂದ ರೈತರಿಗೆ ಅನ್ಯಾಯ: ಕಟೀಲ್ ಆರೋಪ
ಈ ವೇಳೆ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ಶ್ರೀರಂಗಂ-ಅಹೋಬಲ ಕ್ಷೇತ್ರದಿಂದ ತಂದ ಶೇಷ ವಸ್ತ್ರಗಳನ್ನು ಗುರುರಾಯರಿಗೆ ಸಮರ್ಪಿಸಲಾಗಿದೆ. ಎಲ್ಲ ಪುಣ್ಯಕ್ಷೇತ್ರಗಳ ಫಲ ಮಂತ್ರಾಲಯಕ್ಕೆ ಬಂದಿದೆ. ಅಹೋಬಲ ಕ್ಷೇತ್ರದ ನರಸಿಂಹಸ್ವಾಮಿ ಹಾಗೂ ಶ್ರೀರಂಗಂ ಕ್ಷೇತ್ರದೊಂದಿಗೆ ಶ್ರೀ ಮಠ ಅವಿನಾಭಾವ ಸಂಬಂಧ ಹೊಂದಿದೆ ಎಂದರು.