ಬೆಂಗಳೂರು: ಗೃಹ ಸಚಿವರು ನೆಗೆಟಿವ್ ಆಗಿ ಆ ಹೇಳಿಕೆ ಕೊಟ್ಟಿದ್ದಲ್ಲ. ಮಹಿಳೆಯರ ಬಗ್ಗೆ ಕಾಳಜಿಯಿಂದ ಹೇಳಿಕೆ ಕೊಟ್ಟಿದ್ದಾರೆ. ಆ ಸಮಯದಲ್ಲಿ ಮಹಿಳೆಯರು ಅಲ್ಲಿಗೆ ಹೋಗಬಾರದು ಎನ್ನುವ ಹೇಳಿಕೆ ಬೇರೆ ಅರ್ಥದಲ್ಲಿ ಭಾವಿಸಬಾರದು ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರು ಜಾಗ್ರತೆಯಿಂದ ಇರಬೇಕೆಂಬ ಹಿನ್ನೆಲೆಯಲ್ಲಿ ಹೇಳಿಕೆ ಕೊಟ್ಟಿದ್ದಾರೆ. ರಾತ್ರಿ 12 ಆದರೂ ಹೆಣ್ಣು ಮಕ್ಕಳು ಓಡಾಡಬೇಕು. ಹಾಗೆ ಓಡಾಡ್ತಿದರೆ ಈ ತರಹ ತೊಂದರೆಗೆ ಸಿಲುಕಿಕೊಳ್ಳುವವರಿಗೆ ಧೈರ್ಯ ಬರುತ್ತದೆ. ಹೆಣ್ಣುಮಕ್ಕಳನ್ನು ಓಡಾಡಬಾರದೆಂದು ನಿರ್ಬಂಧಿಸಲು ಆಗದು. ಪುರುಷರ ನೋಡುವ ದೃಷ್ಟಿ ಬದಲಾಗಬೇಕು ಎಂದರು.
ಹಗಲಿನ ಹೊತ್ತಲ್ಲಿ ಜನರೂ ಓಡಾಡುತ್ತಿದ್ದಾರೆ. ಸಾರ್ವಜನಿಕರು, ಅಕ್ಕಪಕ್ಕದ ಜನ ಗಮನಿಸ್ತಾರೆ. ರಾತ್ರಿ ಹೊತ್ತಲ್ಲಿ ಇಂಥವು ನಡೆದರೆ ಯಾರಿಗೂ ಕಾಣುವುದಿಲ್ಲ. ರಾತ್ರಿ ಹೊತ್ತು ಸರಿ ಅಂತ ಕಾಮುಕರು ಯೋಚನೆ ಮಾಡುತ್ತಾರೆ. ಸುರಕ್ಷತೆ ಎನ್ನುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ರಾತ್ರಿ ಹೊತ್ತು ಹೆಣ್ಣುಮಕ್ಕಳು ಓಡಾಡಬಾರದು ಎಂದಲ್ಲ, ಅವರ ಕೆಲಸಗಳಿದ್ದಾಗ ನಿಭಾಯಿಸಬೇಕಾಗುತ್ತದೆ. ಆದರೆ ಜಾಗ್ರತೆ ವಹಿಸಬೇಕಾಗುತ್ತದೆ. ಕೆಲವು ಜಾಗಗಳಲ್ಲಿ ಯಾರಿರುತ್ತಾರೆ, ಯಾರಿರಲ್ಲ ಎಂದು ನಮಗೆ ಗೊತ್ತಾಗುತ್ತದೆ. ಅಂಥಹ ಕಡೆಗಳಲ್ಲಿ ಪೊಲೀಸರೂ ಓಡಾಟ ಮಾಡಬೇಕಾಗುತ್ತದೆ. ಪೊಲೀಸರ ಗಸ್ತು ಇಲ್ಲದಿದ್ದಿದ್ದು ತಪ್ಪಾಗಿದೆ ಎಂದು ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಇದನ್ನೂ ಓದಿ:ಸುತ್ತಾಟಕ್ಕೆ ಸೀಮಿತವಾದ ಗೃಹ ಸಚಿವರ ಮೈಸೂರು ಭೇಟಿ: ಕನಿಷ್ಠ ಸಭೆಯನ್ನೂ ನಡೆಸದ ಸಚಿವರು!
ನಮ್ಮ ಸರ್ಕಾರ, ಪೊಲೀಸ್ ಇಲಾಖೆ ದಕ್ಷತೆಯಿಂದ ಕೆಲಸ ಮಾಡುತ್ತಿದೆ. ಅಪರಾಧಿಗಳು ಖಂಡಿತಾ ಸಿಕ್ಕಿಹಾಕಿಕೊಳ್ಳುತ್ತಾರೆ. ದುರ್ದೈವವೆಂದರೆ ಹೆಣ್ಣು ಮಕ್ಕಳ ವಿಚಾರದಲ್ಲಿ ಅತ್ಯಾಚಾರಗಳು ಮರುಕಳಿಸುತ್ತಿದೆ. ಕಠಿಣ ಕಾನೂನುಗಳಾಗಿವೆ, ಇನ್ನೂ ಸ್ವಲ್ಪ ಹೆಚ್ಚಿನ ಕಠಿಣ ಕಾನೂನುಗಳು ಬರಬೇಕಿದೆ, ಆಗ ಮಾತ್ರ ಕಾಮುಕರು ಎಚ್ಚೆತ್ತುಕೊಳ್ಳುತ್ತಾರೆ ಎಂದರು.
ಕಿಡಿಗೇಡಿಗಳ ಬಂಧನವಾಗದಿರುವುದು ಸರ್ಕಾರದ ವೈಫಲ್ಯವೆಂದು ಹೇಳಕ್ಕಾಗದು. ಪೊಲೀಸ್ ಇಲಾಖೆ ವೈಫಲ್ಯವೆಂದು ಹೇಳಲಾಗದು. ತಪ್ಪು ಮಾಡಿದವರು ಬುದ್ಧಿವಂತಿಕೆಯಿಂದ ತಲೆ ತಪ್ಪಿಸಿಕೊಂಡಿದ್ದಾರೆ. ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದೆ ಎಂದು ಶಾಸಕಿ ಪೂರ್ಣಿಮಾ ಹೇಳಿದರು.