Advertisement

ಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಇದೆಯಾ?

11:53 AM Sep 09, 2017 | |

ಅವರು ವೇದಿಕೆ ಏರುತ್ತಿರಲಿಲ್ಲ.  ಭಾಷಣ ಮಾಡಲು  ಒಪ್ಪುತ್ತಿರಲಿಲ್ಲ. ಪ್ರಶಸ್ತಿ  ಪ್ರದಾನ  ಸಮಾರಂಭಕ್ಕೆ  ಹೋಗುತ್ತಲೇ ಇರಲಿಲ್ಲ. ಯಾರಾದರೂ “ಸಾರ್‌, ಒಂದು ಅಭಿನಂದನಾ ಗ್ರಂಥ ತರೋಣ ಅಂತಿದೀವಿ’ ಅಂದರೆ- “ಇನ್ನೊಂದ್ಸಲ ಹಂಗಂದ್ರೆ ನಿನ್ನ ಕಾಲ್ಮುರಿತೀನಿ’ ಎಂದು ಬೈದು ಓಡಿಸುತ್ತಿದ್ದರು. ಆಕಸ್ಮಿಕವಾಗಿ ಬೆಂಗಳೂರಿಗೆ ಬಂದವರು, ಎರಡೇ  ದಿನಕ್ಕೆ ಸುಸ್ತಾಗಿ, “ಈ ಟ್ರಾಫಿಕ್ಕಲ್ಲಿ, ಈ ಗಿಜಿಬಿಜಿ ಮಧ್ಯೆ ನೀವೆಲ್ಲ ಹೆಂಗ್‌ ಬದುಕ್ತೀರಿ ಮಾರಾಯಾ’ ಎಂದು ಕಂಗಾಲಾಗಿ ಕೇಳುತ್ತಿದ್ದರು. ದೂರದ ಮೂಡಿಗೆರೆಯಲ್ಲಿ ಕೂತೇ ಕಥೆ, ಕಾದಂಬರಿ, ಅನುವಾದ, ಫೋಟೋಗ್ರಫಿ, ಚಿತ್ರಕಲೆಗೆ ಸಂಬಂಧಿಸಿದ ಒಂದೊಂದೇ ವಿಶಿಷ್ಟ ಕೃತಿಯನ್ನು ಹೊರತಂದು ಸಂಭ್ರಮವನ್ನು, ವಿಸ್ಮಯವನ್ನೂ ಏಕಕಾಲಕ್ಕೆ ಉಂಟು ಮಾಡುತ್ತಿದ್ದರು. ಅವರು ತೇಜಸ್ವಿ!

Advertisement

ನಿಜ ಅರ್ಥದಲ್ಲಿ ಕನ್ನಡಿಗರ ಪಾಲಿಗೆ ಸಾಂತಾಕ್ಲಾಸ್‌ನಂತೆ ಇದ್ದವರು ತೇಜಸ್ವಿ. ಸಾಂತಾಕ್ಲಾಸ್‌ ಕ್ರಿಸ್‌ಮಸ್‌ನಲ್ಲಿ ಉಡುಗೊರೆ ಕೊಡುತ್ತಾನಲ್ಲ; ಅದೇ ರೀತಿ ನಾಡ ಜನರಿಗೆ ಬಗೆಬಗೆಯ ಅಮೂಲ್ಯ ಕಾಣಿಕೆ ಕೊಟ್ಟವರು ತೇಜಸ್ವಿ. ಇದ್ದಿದ್ದರೆ ಅವರಿಗೆ 80 ವರ್ಷ ಆಗಿರುತ್ತಿತ್ತು. ಏರೋಪ್ಲೇನ್‌ ಚಿಟ್ಟೆ ಎಂಬ ಅಧ್ಯಾಯವಾಗಿ, ಕರ್ವಾಲೋ ಚರಿತ್ರೆಯ ಭಾಗವಾಗಿ, “ಗಯ್ಯಾಳಿಗಳು’ ಕಾದಂಬರಿಯ ಪ್ರಸಂಗವಾಗಿ, ಹಮ್ಮಿಂಗ್‌ ಬರ್ಡ್‌ ಹಕ್ಕಿಯ ಕಣ್ಣಿನ ಮಿಂಚಾಗಿ ಕ್ಷಣಕ್ಷಣವೂ ಕಾಡುತ್ತಾರೆ. ಆ ಮೂಲಕ- “ಲೋ ನಾನು ಎಲ್ಲೂ ಹೋಗಿಲ್ಲ ಕಣ್ಣಯ್ಯಾ , ನಿಮ್ಮೊಂದಿಗೇ ಇದೀನಲ್ರೋ  ಮಾರಾಯಾ’ ಎಂದು ಪಿಸುಗುಟ್ಟುತ್ತಾರೆ. ಆ ಮಹಾ ಚೇತನದ ಮಧುರ ಸ್ಮರಣೆಗೆ ಈ ವಿಶೇಷ ಸಂಚಿಕೆ…

ತೇಜಸ್ವಿ ಅಂದರೆ ಎಂದೂ ಬತ್ತದ ಪ್ರವಹಿಸುವ ನದಿಯಂತೆ. ಅವರ ವಿಚಾರಗಳು, ಆಲೋಚನೆಗಳು, ಕನಸುಗಳು ಎಲ್ಲರ ಮನಸ್ಸುಗಳಲ್ಲಿ ಹರಿಯುತ್ತಲೇ ಇವೆ. ತೇಜಸ್ವಿ ಇಲ್ಲೇ ಎಲ್ಲೋ ಕಾಡಿಗೆ ಹೋಗಿದ್ದಾರೆ ಅನ್ನೋ ಭಾವ ಇದೆ. ಸಾಹಿತಿ ಜಯಂತ ಕಾಯ್ಕಿಣಿ ಅವರು ಹಿಂದೊಮ್ಮೆ ನಡೆಸಿದ ಈ ವಿಶೇಷ ಸಂದರ್ಶನ ಇಂದಿನ ದಿನಮಾನಕ್ಕೂ ಪ್ರಸ್ತುತ. ಅದಕ್ಕೇ, ಮತ್ತೂಮ್ಮೆ ನಿಮ್ಮ ಮುಂದೆ. 

ಮಕ್ಕಳನ್ನ ನೋಡಿದಾಗ, ಕಾಲೇಜಿಗೆ ಹೋಗ್ತಾ ಇರುವಂತಹ ಹುಡುಗರನ್ನ ನೋಡಿದಾಗ ಅಥವಾ ಯುವಜನರನ್ನು ನೋಡಿದಾಗ ನಿಮಗೆ ಏನು ಅನ್ನಿಸುತ್ತೆ?
ಐ ಥಿಂಕ್‌ ದೆ ಹ್ಯಾವ್‌ ಗ್ರೇಟ್‌ ಫ್ಯೂಚರ್‌ ಅನ್ನಿಸುತ್ತೆ. ಒಂದೊಂದ್ಸಾರಿ. ಆದರೆ ಇವರು ಈ ಥರ ಮತೀಯವಾದದ ಹಿಂದೆ ಗಲಾಟೆ ಮಾಡ್ತಾ ಇರೋದನ್ನ ನೋಡಿದರೆ, ಒಂದೊಂದ್ಸಾರಿ ಇವರಿಗೆಲ್ಲಾ ಭವಿಷ್ಯ ಇದೆಯಾ? ಅನ್ನಿಸುತ್ತೆ. ಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಾದರೂ ಇದೆಯಾ ಈ ಪ್ರಪಂಚದಲ್ಲಿ!? ಅರ್ಥ ಏನಾದರೂ ಇದೆಯೇನ್ರಿ ಇವರಿಗೆ? ಗುಜರಾತ್‌ನಲ್ಲಿ ರೈಲುಗಾಡಿಯೊಳಕ್ಕೆ ಸಿಕ್ಕಿಹಾಕಿಸಿ ಸುಟ್ಟುಹಾಕಿದ್ದನ್ನು ಸಪೋರ್ಟ್‌ ಮಾಡೋನಲ್ಲ ನಾನು. ಆಮೇಲೆ ಮಾಡಿದ್ದನ್ನೂ ಸಪೋರ್ಟ್‌ ಮಾಡೋನಲ್ಲ ನಾನು. ಓವರಾಲ್‌ ಇವರೆಲ್ಲಾ ಒಂದೇ ಜಾತಿ! ಆ ಪರಮಹಂಸ ಅವರು ಇವರು ಎಲ್ಲಾ ಇದ್ದಾರಲ್ಲಪ್ಪ. ಮೊನ್ನೆ ಟೀವಿನಲ್ಲಿ ನೋಡ್ತಾ ಇದ್ದೆ, ಯಾರ್ಧು ಏನು ಅಂತ ನೋಡದೆ ನೋಡ್ತಿದ್ದೆ. ನೋಡಿದರೆ, ಯಾರೋ ಎಲ್ಲಾ ಈ ಒಸಾಮ ಬಿನ್‌ ಲಾಡೆನ್‌ ಕಡೆಯೋರನ್ನ ಹಿಡಕೊಂಡಿದಾರೆ ಅಂತ ಕಾಣುತ್ತೆ ಅಂದುಕೊಂಡು, ಕೊನೆಗೆ ನೋಡಿದರೆ, ಎಲ್ಲಾ ನಮ್ಮ ರಾಮಜನ್ಮಭೂಮಿ ಹೋರಾಟಗಾರರು! ಅಂದರೆ ಅರ್ಥ- ಎಲ್ಲಾ ಮೈಂಡ್‌ ಫ್ಲೋ, ಅವರ ಬೌದ್ಧಿಕತೆ, ಅವರ ರೂಪ… ಎಲ್ಲಾ ಒಂದೇ ತರದೋರು ಕಣ್ರೀ ಇವರು. ಇವರನ್ನೆಲ್ಲಾ ಮೆರೆಸ್ಕೊಂಡು… ಇವರು ರಾಜಕಾರಣವನ್ನು ನಿಯಂತ್ರಿಸುವಷ್ಟು, ಬಲವಾದ ಶಕ್ತಿಗಳಾಗ್ತಿರೋದನ್ನು ನೋಡಿದಾಗ, ಮುಂದೆ ಏನಪ್ಪ ನಮ್ಮ ಮಕ್ಕಳ ಭವಿಷ್ಯ ಅಂತ ಹೆದರಿಕೆ ಆಗುತ್ತೆ. ಯಾಕೆಂದರೆ, ಮುಲ್ಲಾಗಳು ಮತ್ತು ಮೌಲ್ವಿಗಳ ಕೈಗೆ ರಾಜಕೀಯ ಕೊಟ್ಟು ಆಗಿರುವಂತಹ ಅನಾಹುತವನ್ನು ನಾವು ಪಾಕಿಸ್ತಾನ ಮತ್ತು  ಆಫ‌^ನಿಸ್ತಾನದಲ್ಲಿ  ನೋಡ್ತಾ ಇದ್ದೀವಿ. ಮನುಷ್ಯ ಚರಿತ್ರೆಯಿಂದ ಏನಾದರೂ ಕಲಿತಾನೆ ಅನ್ನೋ ಹಾಗಿದ್ದರೆ, ಇವರನ್ನ ನಾವು ಯಾವ ರೀತಿ ನಡೆಸ್ಕೋಬೇಕು ಅನ್ನೋದನ್ನ ತಿಳೀಬೇಕಾಗುತ್ತೆ. ಯಾಕೆಂದರೆ, ಇವರು ಬೇರೆ ಹೆಸರು ಇಟ್ಟುಕೊಂಡಿರೋಬೌದು, ಅವರು ಬೇರೆ ಹೆಸರು ಇಟ್ಟುಕೊಂಡಿರೋಬೌದು. ಮಾಡ್ತಾ ಇರೋದು ಎಲ್ಲಾ ಒಂದೇನೆ! ಅವಕಾಶ ಸಿಕ್ಕರೆ, ಒಸಾಮಾ ಬಿನ್‌ ಲಾಡನ್‌ನಿಗಿಂತ ಕ್ರೂರಿಗಳಾಗೋದಿಕ್ಕೆ ನಮ್ಮವರು ಕೂಡ ಹೇಸೋದಿಲ್ಲ ಅಂತ ಚೆನ್ನಾಗಿ  ಗೊತ್ತಾಗುತ್ತೆ. ಕೊಲ್ಲೋದು, ಆ ಮನಸ್ಸು,  ಆ ಮನಸ್ಥಿತಿ ಇದೆಯಲ್ಲ, ಇಟ್ಸ್‌ ಆಲ್ವೇಸ್‌ ಸೇಮ್‌!  ಅಲ್ಲಿಗೆ ಕ್ರಿಯೇಟಿವಿಸಮ್‌ ಹೋದ ಹಾಗೇ ಲೆಕ್ಕ. ಇವರನ್ನ ನೆನಪಿಸ್ಕೊಂಡಾಗ ಮಾತ್ರ, ನಮ್ಮ ಯಂಗ್‌ಸ್ಟರ್ ಹ್ಯಾಗೆ ಈ ಚಾಲೆಂಜನ್ನು ಫೇಸ್‌ ಮಾಡ್ತಾರೆ ಅಂತ ಯೋಚನೆಯಾಗುತ್ತೆ, ಅಷ್ಟೆ.

ಸರ್‌, ಕನ್ನಡದ ಸಂದರ್ಭದಲ್ಲಿ, ಎಷ್ಟೊಂದು ಚಳುವಳಿಗಳ ಮುಂಚೂಣಿಯಲ್ಲಿ ನೀವು ನೇತಾರರಾಗಿ ಸಕ್ರಿಯರಾಗಿದ್ದವರು. ಸಕ್ರಿಯವಾಗಿ ಕೆಲಸ ಮಾಡಿದವರು. ಜಾತಿ ವಿನಾಶ ಚಳುವಳಿ ಇರಲಿ, ಸಾಹಿತ್ಯದಲ್ಲಿ ಹೊಸ ಸಿದ್ಧಾಂತದ ಚಳುವಳಿ ಇರಲಿ, ರೈತ ಚಳುವಳಿ ಇರಲಿ… ಈಗ ಈ ಹೊತ್ತಿನಲ್ಲಿ ಈ ಸಂದರ್ಭದಲ್ಲಿ ನಿಮ್ಮ ಮನಸ್ಸಿನಲ್ಲಿ ನಿಂತು ಪ್ರತಿಫ‌ಲಿಸಿದರೆ, ಈಗ ನಿಮಗೆ ಹೇಗೆ ಅನ್ನಿಸ್ತಾ ಇದೆ?
ನಾನು ಈ ಬಗ್ಗೆ ಮೊದಲೇ ಕೆಲವು ಸಂದರ್ಭಗಳಲ್ಲಿ ಹೇಳಿದ್ದೇನೆ. ಸೀ, ಸೋವಿಯತ್‌ ಯೂನಿಯನ್‌ ಕುಸಿದು ಬಿದ್ದ ಮೇಲೆ, ವಿ ಹ್ಯಾವ್‌ ಟು ಥಿಂಕ್‌ ಟ್ವೈಸ್‌. ನೌ! ಸೈದ್ದಾಂತಿಕತೆಯೇ ನಿರ್ಗಮಿಸ್ತಾ ಇದೆ. ಇಟ್‌ ಈಸ್‌ ನಾಟ್‌ ಎ ಪರ್ಟಿಕ್ಯುಲರ್‌ ಫಿಲಾಸಫಿ ದಟ್‌ ಈಸ್‌ ಲೂಸಿಂಗ್‌ ಇಟ್ಸ್‌ ವ್ಯಾಲಿಡಿಟಿ. ಬಟ್‌, ಫಿಲಾಸಫೈಸ್‌ ಮಾಡೋದಿದೆ ನೋಡಿ, ಸೈದ್ಧಾಂತಿಕತೆ ಇದು ಮನುಷ್ಯನ ಮನಸ್ಸನ್ನಾಗಲಿ ಅಥವಾ ವ್ಯಕ್ತಿತ್ವವನ್ನಾಗಲಿ ಅಥವಾ ನಡವಳಿಕೆಗಳನ್ನಾಗಲಿ… ಸಿದ್ದಾಂತ ಅಂದರೆ ಇನ್ನೇನಿಲ್ಲ. ಇವತ್ತಿನ ನಿನ್ನ ಕ್ರಿಯೆಯ ನೂರು ವರ್ಷದ ಆಚೆಗಿನ ಪರಿಣಾಮವನ್ನು ಎಕ್ಸ್‌ಪ್ಲೆ„ನ್‌ ಮಾಡುತ್ತೆ ಅದು. ಪಾಸ್ಟ್‌, ಪ್ರಸೆಂಟ್‌ ಅಂಡ್‌ ಫ್ಯೂಚರ್‌ ಈ ಮೂರನ್ನೂ… ಇಟ್‌ ವಿಲ್‌ ಟ್ರೈ ಟು ಎಕ್ಸ್‌ಪ್ಲೆ„ನ್‌. ದಟ್ಸ್‌ ವಾಟ್‌ ಮಾರ್ಕ್ಸಿಸಂ ಡಿಡ್‌. ಆದರೆ, ಮಾರ್ಕ್ಸಿಸಂ ಈಸ್‌ ಆಲ್‌ಮೋಸ್ಟ್‌ ನಥಿಂಗ್‌ ಬಟ್‌ ಅನ್ಯಾಲಿಸಿಸ್‌ ಆಫ್ ಹಿಸ್ಟರಿ. ಆದರೆ ಮಾರ್ಕ್ಸ್, ಅವನ ಮಾರ್ಕ್ಸ್ವಾದವನ್ನು ಹೇಳಿದ ನಂತರ ಬಂದು ಹೋದ ಚರಿತ್ರೆ, ಮಾರ್ಕ್ಸ್ವಾದದ ಲಿಮಿಟೇಷನ್ನುಗಳನ್ನು ಕ್ಲಿಯರ್‌ಕಟ್ಟಾಗಿ ತೋರಿಸಿಬಿಡು¤. ಇರಲಿ. ಈಗ ನಾವು ಮಾರ್ಕ್ಸ್ವಾದದ ಲಿಮಿಟೇಷನ್‌ ಬಗ್ಗೆ ಡಿಸ್ಕಸ್‌ ಮಾಡೋದಿಕ್ಕೆ ಹೋಗೋದು ಬೇಡ. ಆದರೆ, ಅದರ ಜೊತೆಗೇನೆ ಅದು ಏನು ತೋರಿಸ್ತು ಅಂತ ಹೇಳಿದರೆ, ಈ ರೀತಿಯ ಸಿದ್ಧಾಂತಗಳು ಮನುಷ್ಯನ ನಡವಳಿಕೆಗಳನ್ನ ಸಮರ್ಪಕವಾಗಿ ತೋರಿಸೋದಿಕ್ಕೆ ಸೋಲುತ್ತವೆ ಅನ್ನುವುದನ್ನು.

Advertisement

ಸರ್‌, ಗ್ಲೋಬಲೈಸೇಷನ್‌ ಅಂದ ತಕ್ಷಣ ನಮಗೆ ವಿಶ್ವಮಾನವ ಕಾನ್ಸೆಪ್ಟ್ ನೆನಪಾಗುತ್ತೆ.
ಗ್ಲೋಬಲೈಸೇಷನ್‌ ಅಂತ ಹೇಳಿಬಿಟ್ಟು, ನಾವು, ಸದ್ಯಕ್ಕೆ, ಕೆಲವು ವಿಚಾರಗಳಲ್ಲಿ ವೆಸ್ಟೆಡ್‌ ಇಂಟರೆಸ್ಟ್‌ ತರ ಮಾಡೋದಿಕ್ಕೆ ಗ್ಲೋಬಲೈಸೇಷನ್‌ ಅನ್ನೋ ಪದ ಉಪಯೋಗಿಸ್ತಾ ಇದ್ದಾರೆ. ಈಗ, ಅಗ್ರಿಕಲ್ಚರ್‌ ಕಮಾಡಿಟೀಸ್‌ನ ಬೆಲೆ ಇಳಿದಿದ್ದಕ್ಕೆ ಅಥವಾ ನಮ್ಮಲ್ಲಿ ಎಲ್ಲ ಲಂಚ ಹೊಡೆಯೋದಿಕ್ಕೆ, ಇನ್ನೆಫಿಷಿಯೆನ್ಸಿಗೆ, ಸುಳ್ಳು ಹೇಳ್ಳೋದಿಕ್ಕೆ, ಆಮೇಲೆ ಪಕ್ಷಾಂತರ  ಮಾಡಿಬಿಟ್ಟು ಸರ್ಕಾರಗಳನ್ನು ಬೀಳ್ಸೋದಿಕ್ಕೆ… ಎಲ್ಲವಕ್ಕೂ ಗ್ಲೋಬಲೈಸೇಷನ್ನೇ ಕಾರಣ ಅಂತ ಹೇಳಿದರೆ, ಅದಕ್ಕೇನಾದರೂ ಅರ್ಥ ಇದೆಯಾ? ಕಷ್ಟಪಟ್ಟು ಕೆಲಸ ಮಾಡ್ಕೊಂಡು ಈ ದೇಶ ಕಟ್ಟಬೇಕೇ ಹೊರತು ಅವರಿವರ ಮೇಲೆ ನಾವು, ಗ್ಲೋಬಲೈಸೇಷನ್‌ ಕಾರಣದಿಂದ ಅಲ್ಲಿ ರೈತ ಸತ್ತ ಅಂತ ಹೇಳ್ಳೋದು, ಗ್ಲೋಬಲೈಸೇಷನ್‌ ಕಾರಣದಿಂದ ನಮ್ಮ ಕಮಾಡಿಟೀಸ್‌ಗೆಲ್ಲ ರೇಟ್‌ ಬರೋಲ್ಲ ಅಂತ ಹೇಳ್ಳೋದು…

ಸರ್‌, ಒಂದು ಕಾಲದಲ್ಲಿ, ಆಧುನಿಕತೆ, ಇಂಡಸ್ಟ್ರೀಸ್‌ ವಿಷಯದಲ್ಲೂ ಇದೇ ರೀತಿ ತಾಪತ್ರಯ, ಯಾಕೆಂದರೆ, ಗ್ಲೋಬಲೈಸೇಷನ್‌ ಬೇಡ ಅಂದ ತಕ್ಷಣ ನಾವು…
ಹೌದು. ಮತ್ತೆ ಹಳೇದಕ್ಕೆ ಹೋಗಿ, ಗಿಳಿ ಪಂಚಾಂಗಕ್ಕೆ ಹೋಗಿ ಬೀಳ್ತೀವಿ!

ಯಾಕೆಂದರೆ, ಕೆಲವೊಂದು ಪದಗಳು, ಈ ಜನಾಂಗವನ್ನು ಸ್ವಲ್ಪ ಮಿಸ್‌ಲೀಡ್‌ ಮಾಡ್ತವೆ. ಯಾವುದಕ್ಕೂ ಗ್ಲೋಬಲೈಸೇಷನ್‌ ಅಂತ ಹೇಳ್ಳೋ ಪರಿಪಾಠ ಹೊಸದಾಗಿ ಬಂದಿದೆ. ಬಹುಶಃ ಉದ್ಯೋಕಾವಕಾಶ ಹೆಚ್ಚಾಗೊ ಕಡೆಗೆ ನಮ್ಮ..
ಹಾಗಂತ ಅಲ್ಲ. ಯೂ ಸೀ, ಇದನ್ನು ಸಮೀಕರಣಗೊಳಿಸಿಬಿಟ್ಟು, ವಾಟ್‌ ಎವರ್‌ ದಟ್‌ ಈಸ್‌ ಗ್ಲೋಬಲೈಸೇಷನ್‌, ಇಟ್‌ ಈಸ್‌ ಬ್ಯಾಡ್‌ ಅಂತ ಹೇಳಿ, ಒಂದು ತೀರ್ಮಾನ ತಗೊಂಡಾಗಿದೆ ನೋಡಿ, ಜನರಲೈಸ್‌ ಮಾಡಿ, ದಟ್‌ ಈಸ್‌ ಟೋಟಲಿ ರಾಂಗ್‌ ಅಂಡ್‌ ನಾಟ್‌ ನೆಸಸರಿ. ಈ ರೀತಿಯ ಜಾಗತೀಕರಣದಿಂದ ಯಾವುದಾದರೂ ಒಂದರಲ್ಲಿ ತೊಂದರೆ ಆಗಿದ್ದರೆ, ಇಡೀ ಜಾಗತೀಕರಣವನ್ನೇ ದೂಷಣೆ ಮಾಡಬಾರದು. 

ಸಿತಾರ್‌ ಕಲೀತಾ ಇದ್ದಿರಿ. ಈಗ ಅದು ಎಲ್ಲಿದೆ?
ಸಿತಾರ್‌ ಮನೇಲಿ ಇದೆ ಕಣ್ರೀ ಇನ್ನೂನು. ಅದು ಅವಾಗ ನನಗೆ ರವಿಶಂಕರ್‌ ಶಿಷ್ಯರು ರಾಮರಾವ್‌ ಕೃಷ್ಣಮೂರ್ತಿ ಅಂತ ಇದ್ದರು, ಅವರು ಕೊಟ್ಟಿದ್ದು . ಬಹಳ ಒಳ್ಳೆ ಸಿತಾರ್‌ ಇದೆ. ಈಗ ನೀವು ಫೋಟೋಗ್ರಫಿಯನ್ನೇ ತಗೊಳ್ಳಿ ಪ್ರಧಾನವಾಗಿ. ಯೂ ಸೀ, ಬೇಸಿಕ್‌ ಡಿಸಿಪ್ಲೀನ್‌, ಫ್ರೆàಮಿಂಗ್‌. ಕಥೆಯಲ್ಲಿ ಹೇಗೆ ಒಂದು ಚೌಕಟ್ಟನ್ನು ಮಾಡ್ತೀರೋ ಹಾಗೇನೆ ಕಾಂಪೋಸಿಷನ್‌ ಅಂಡ್‌ ಫ್ರೆàಮಿಂಗ್‌ ಅಂತ ಅನ್ನಿಸುತ್ತೆ ಫೋಟೋಗ್ರಫಿಯಲ್ಲಿ. ಸೆಕೆಂಡ್ಲಿ, ಫೋಟೋಗ್ರಾಫ‌ರ್‌ ಕೆನ್‌ನಾಟ್‌ ಬಿ ಎ ಹೀರೊ! ಬಿಕಾಸ್‌ ಯೂ ಹ್ಯಾವ್‌ ಟು ಬಿ ಬಿಹೈಂಡ್‌ ದಿ ಕ್ಯಾಮೆರ! ಐ ಥಿಂಕ್‌, ಇಫ್ ಯೂ ಆರ್‌ ಎ ಫೋಟೊಗ್ರಾಫ‌ರ್‌, ರೈಟಿಂಗಲ್ಲಿ ನೀವು ನಿಮ್ಮನ್ನು ಕೇಂದ್ರ ಮಾಡಿಕೊಳ್ಳೋದಿಲ್ಲ! ನವ್ಯರಿಗೂ ನಮಗೂ ಫ‌ಸ್ಟ್‌ ಡಿಫ‌ರೆನ್ಸ್‌ ಬಂದಿದ್ದೇ ಇಲ್ಲಿ. ರೈಟರ್‌ ಕೇಂದ್ರ ಆಗೋಕೆ ಸಾಧ್ಯ ಆಗಲಿಲ್ಲ. ಇವೆಲ್ಲಾ ಬೇರೆ ಬೇರೆ ವಲಯಗಳಿಂದ ಬರೋ ಡಿಸಿಪ್ಲೀನ್‌ಗಳು ಇವು.

ವಿಜ್ಞಾನವನ್ನು ದೂಷಣೆ ಮಾಡಿದ ಹಾಗೆ..
ಹಾ. ಯಾತಕ್ಕೆ ತೊಂದರೆ ಆಗಿದೆ, ಏನು ಅನ್ನೋದನ್ನು ಬಿಟ್ಟು, ಮನುಷ್ಯನೇ ಮಾಡಿಕೊಂಡಿರೋ ಅನಾಹುತವನ್ನು ಇವರು ಸರಿ ಮಾಡೋದಿಕ್ಕೆ ಆಗೋದಿಲ್ಲವೇನ್ರಿ? ಅದಕ್ಕೆ ಗ್ಲೋಬಲೈಸೇಷನ್ನೇ ತಪ್ಪು, ಇದು ಅಮೇರಿಕಾದವರ ಕುತಂತ್ರ, ಹಂಗೆ ಹಿಂಗೆ ಅಂತ ಹೇಳಿದರೆ ಪ್ರಯೋಜನ ಆಗಲ್ಲ. ಯಾಕೆಂದರೆ, ನೋಡಿ ನಮ್ಮಲ್ಲೂನು ಗ್ಲೋಬಲೈಸ್‌ ಮಾಡಬಾರದು ಅಂತ ಹೇಳಿಬಿಟ್ಟು, ನಮ್ಮ ಇಂಡಸ್ಟ್ರಿಯಲಿಸ್ಟ್‌ಗೆಲ್ಲ ಪ್ರೊಟೆಕ್ಷನ್‌ ಕೊಟ್ಟರು, ಹೌದಾ? ಐವತ್ತು ವರ್ಷ ಸ್ಕೂಟರ್‌ಗಳು, ಪ್ರೀಮಿಯರ್‌ ಪದ್ಮಿನಿ ಫಿಯೆಟ್‌ ಕಾರು, ಅಂಬಾಸಿಡರ್‌ ಕಾರು ಮೂರೋ ನಾಲ್ಕೋ ಇದ್ದುವು ಅಷ್ಟೆನೇನೆ. ಐವತ್ತು ವರ್ಷ ಇವರು ಮಾಡಿದ ಕೆಲಸ ಏನು? ಯಾವುದನ್ನೂ ಅಪ್‌ಡೇಟ್‌ ಮಾಡಲಿಲ್ಲ! ಸಪ್ಲೆ„ ಸಹಿತ ಸರಿಯಾಗಿರಲಿಲ್ಲ. ಪ್ರತಿಯೊಂದಕ್ಕೂ ಐವತ್ತು ಸಾವಿರ, ಅರವತ್ತು ಸಾವಿರ ಪ್ರೀಮಿಯಮ್‌ ರೇಟಿಗೆ ತಗೊಂಡ್ಹೊàಗಿ, ಬುಕ್‌  ಮಾಡಿ ಹದಿಮೂರು ವರ್ಷ ಆಗೋದು ನಿಮಗೆ ಒಂದು ಕಾರು-ಸ್ಕೂಟರ್‌ ಸಿಗೋದಿಕ್ಕೆ! ಗ್ಲೋಬಲೈಸೇಷನ್‌ ಬೇಡ ಅಂತ ನಿಮ್ಮವರಿಗೇ ಪ್ರೊಟೆಕ್ಟ್ ಮಾಡಿದರೆ, ನಿಮ್ಮವರು ಫಾರಿನ್ನರಿಗಿಂತ ವಸ್ಟಾìಗಿ ನಿಮ್ಮನ್ನು ಎಕ್ಸ್‌ಪ್ಲಾಯಿಟ್‌ ಮಾಡೋದಾದರೆ, ಏನು ಮಾಡ್ತೀರ ಯೋಚನೆ ಮಾಡಿ… ಸೀ ದಿಸ್‌ ಈಸ್‌ ದಿ ಪ್ರಾಬ್ಲೆಮ್‌! ಖುಲ್ಲಂ ಖುಲ್ಲಾ ಆಗಿ ನಾವು ಗ್ಲೋಬಲೈಸೇಷನ್‌ ಮಾಡ್ತೀವಿ. ನೀವು ಬರದೇ ಇದ್ದರೆ, ಮಾಡ್ರನ್‌ ಟೆಕ್ನಾಲಜಿ ಏನು ಬಂದಿದೆ ಆಟೋಮೊಬೈಲ್ಸ್‌ನಲ್ಲಿ ಅನ್ನೋದೆ ಗೊತ್ತಾಗ್ತಾ
 ಇರ್ಲಿಲ್ಲ ನಮಗೆ- ಖುಲ್ಲಂ ಖುಲ್ಲಾ ಆಗಿ ಈ ಥರ ಮಾತನಾಡೋದು ತಪ್ಪು.  

ಸರ್‌, ಕುವೆಂಪು ಅವರ ಕಾದಂಬರಿಗಳಲ್ಲಿ ಒಂದು “ವನಮೌನ’ ಇದೆ. ಅವರದೇ ಶಬ್ದ ಇದು, “ವನಮೌನ’. ಆಮೇಲೆ ನಿಮ್ಮ ಕೃತಿಗಳಲ್ಲಿ ಪ್ರಕೃತಿ, ನಿಸರ್ಗ ಬಂತು. ಈ ಎರಡೂ ನಿಸರ್ಗಗಳಲ್ಲಿ, ಏನೋ ಬದಲಾವಣೆ ಇದೆ ಅಂತ ನಮಗೆ ಅನ್ನಿಸ್ತಾ ಇದೆ. ಅಂದರೆ ನಿಮ್ಮ ಕಾಡಿನಲ್ಲಿ ಮನುಷ್ಯಲೋಕದ ಕೆಲ, ಈಚಿನ ಅಪಸ್ವರಗಳು ಕೇಳ್ತಿದ್ದೇವೆ. ನಿಮಗೆ ಏನನ್ನಿಸುತ್ತೆ ಸರ್‌?
ಅಪಸ್ವರ ಅಲ್ಲ. ಕಾಡಿನ ಬಗ್ಗೆ ಇರುವ ನಮ್ಮ ಆಟಿಟ್ಯೂಡ್‌ ಇದೆಯಲ್ಲ? ಅದರಲ್ಲಿ ಯೂ ಕೆನ್‌ ಸೀ ಎ ಲಾಟ್‌ ಆಫ್ ಡಿಫ‌ರೆನ್ಸ್‌! ಈಗ ಕಾರಂತರನ್ನ ತಗೊಂಡರೆ, ಕಾರಂತರಿಗೆ ಕಾಡು ಈಸ್‌ ಎ ಚಾಲೆಂಜ್‌ ಟು ಎ ಸಿವಿಲೈಸೇಷನ್‌. ಒಂದು ಕಾಲದಲ್ಲಿ ಹಾಗಿತ್ತು ಅನ್ನೋದನ್ನ ನಾವು ಮರೀಬಾರದು. ಬ್ರಿಟಿಷರು ನಮ್ಮ ದೇಶದಿಂದ ಹೋದಾಗ, ನಾಗರೀಕತೆ ಎಕ್ಸ್‌ಪ್ಯಾಂಡ್‌ ಆಗ್ತಾ ಇದ್ದಾಗ, ನಿಧಾನವಾಗಿ ಮನುಷ್ಯ ಕಾಡಿನ ಒಳಗೆ ಹೋಗಿ ಬದುಕಬೇಕಾಗಿ ಬರೋದು. ಸೋ ಇಟ್‌ ವಾಸ್‌ ಎ ರಿಯಲ್‌ ಚಾಲೆಂಜ್‌. “ಬೆಟ್ಟದ ಜೀವ’, “ಕುಡಿಯರ ಕೂಸು’ ಅಲ್ಲೆಲ್ಲ ನೋಡಿದರೆ ನಿಮಗೆ, ಕಾಡು ಹೇಗೆ ದೊಡ್ಡ ಸವಾಲಾಗಿ ಮನುಷ್ಯನಿಗೆ ಕಂಡಿದೆ ಅನ್ನೋದು ಗೊತ್ತಾಗುತ್ತೆ. ಕುವೆಂಪು ಅವರಲ್ಲಿ ಬಂದರೆ ಕಾಡು ತಾಯಿಯ ರೀತಿ ಬರುತ್ತೆ.. ಮನುಷ್ಯನನ್ನ ಸಂರಕ್ಷಿಸೋದು, ಮನುಷ್ಯನನ್ನ ಪೊರೆಯುವಂಥದ್ದು ಹಾಗೆ ಕಾಣಿಸಿಕೊಳ್ಳುತ್ತೆ. ನನ್ನ ಲೆವೆಲ್ಲಿಗೆ ಬರುವಷ್ಟು ಹೊತ್ತಿಗಾಗಲೆ, ನಾವೇ ಕಾಪಾಡಬೇಕಾದಂತಹ ಕಾಡುಗಳಾಗಿ ಪರಿವರ್ತನೆಯಾಗಿವೆ! ನಾವು ಬಡೆjಟ್‌ ಅಲಾಟ್‌ ಮಾಡಿ, ಅದನ್ನು ತಗೊಂಡ್ಹೊàಗಿ, ಹುಲಿಗಳನ್ನ ಅಥವಾ ಮತ್ತೂಂದು ಪ್ರಾಣಿಗಳನ್ನು ನಿರ್ನಾಮ ಆಗದ ಹಾಗೆ ತಡೆಯಬೇಕಾದಂಥ ಪರಿಸ್ಥಿತಿಗೆ ಬಂದು ಸಿಕಾØಕ್ಕೊಂಡಿದ್ದೀವಿ. ಕಾಡು- ಫಾರೆಸ್ಟ್‌ ಹ್ಯಾಸ್‌ ಬಿಕಮ್‌ ಆ್ಯನ್‌ ಓಪನ್‌ ಟ್ರೆಜರಿ! ಒಂದೊಂದು ಮರ ಆರಾರು ಏಳೇಳು ಲಕ್ಷ ರೂಪಾಯಿ ಬೆಲೆ ಬಾಳ್ತವೆ ಅಂದರೆ ನೀವು ಅರ್ಥ ಮಾಡಿಕೊಳ್ಳಿ ಅದನ್ನು. ಸೋ, ವಿ ಹ್ಯಾವ್‌ ಟು ಪ್ರೊಟೆಕ್ಟ್ ದೀಸ್‌ ಥಿಂಗ್ಸ್‌. ಯಾವಾಗ ಕಾಡನ್ನು ಇಫ್ ಯೂ ಸ್ಟಾರ್ಟ್‌ ಇಂಟರ್‌ಪ್ರಿಂಟಿಂಗ್‌ ಇನ್‌ ಟಮ್ಸ್‌ì ಆಫ್ ಮನಿ-ಒಂದೊಂದು ಮರಕ್ಕೆ  ಆರಾರು ಲಕ್ಷದ ಹಾಗೆ ಆದರೆ, ಸಾವಿರಾರು ಹೆಕ್ಟೇರು ಸಾಗುವಾನಿ ಕಾಡುಗಳನ್ನು ಕಳ್ಕೊಂಡಿದ್ದೀವಲ್ಲ, ಅವುಗಳು ಎಷ್ಟು ವ್ಯಾಲ್ಯೂಬಲ್‌ ಆಗಿರಬೌದು ಅಂತ ಯೋಚನೆ ಮಾಡಿ. ಅನ್‌ಇಮ್ಯಾಜಿನಬಲ್‌! ಯಾವಾಗ ನೀವು ಈ ತರ ಕಾಡನ್ನು ಇನ್‌ ಟಮ್ಸ್‌ì ಆಫ್ ಮನಿ ಮಾತಾಡೋದಿಕ್ಕೆ ಶುರು ಮಾಡ್ತೀವೋ…ಎಲ್ಲಾ ಚೆಂಬಲ್‌ ಕಣಿವೆ ಡಕಾಯಿತರಿಂದ ಹಿಡಿದು, ಪ್ರತಿಯೊಬ್ಬರೂನು ಅಲ್ಲಿಗೆ ನುಗ್ತಾರೆ! 

ಸರ್‌, ನೀವು ಜನಗಳ ಕೈಗೆ ಸಿಗೋಲ್ಲ. ಹಾಗೆ ಹೀಗೆ ಅಂತ ಒಂದು ದಂತಕತೆ ಥರ ಮಾಡಿಬಿಟ್ಟು ನಿಮ್ಮನ್ನ, ಮಾತಾಡಬೇಕು ಮಾತಾಡಬೇಕು ಅಂತ. ಬಹುಶಃ ನನಗನ್ನಿಸುತ್ತೆ, ನಿಮಗೆ ಮೌನವೇ ಒಂದು ಮಾತು….ಖಂಡಿತವಾಗಲೂ ಹೌದು…ನೀವು ನಿಮ್ಮ ಮೌನದಿಂದಲೇ ಏನನ್ನೋ ಹೇಳ್ತಾ ಇದ್ದೀರಿ ಅಂತ. ಈ ಮೌನವನ್ನು ನೀವು ಪಕ್ಷಿಗಳ ಫೋಟೋಗ್ರಫಿ ಹೊತ್ತಿನಲ್ಲಿ ಸಾಧಿಸಿಕೊಂಡಿರೋ ಹೇಗೆ?
ಹಾಗಲ್ಲ ಸಾರ್‌ ಅದು. ಯೂ ಸೀ, ಎಮರ್ಜೆನ್ಸಿ ಹೊತ್ತಿನಲ್ಲಿ ಜಯಪ್ರಕಾಶ್‌ ನಾರಾಯಣ್‌ರನ್ನು ತಗೊಂಡ್ಹೊàಗಿ ಜೈಲಿಗೆ ಹಾಕಿದ್ದರು. ಬಟ್‌ ಹಿಸ್‌ ಸೈಲೆನ್ಸ್‌ ಸ್ಟಾರ್ಟೆಡ್‌ ಟು ಸ್ಪೀಕ್‌! ಬಾಯಿ ಮುಚ್ಚಿಸಿಬಿಡಬಹುದು ಅಂತ ತಿಳ್ಕೊಳ್ಳೋದು ಬಹಳ ತಪ್ಪು. ಬಾಯಿ ಮುಚ್ಚಿದರೆ ಇನ್ನೂ ಭಯಂಕರ ಅನಾಹುತಗಳಿಗೆ ಸಿಕ್ಕಿಹಾಕ್ಕೋತೀವಿ ನಾವು! ಇನ್‌ ದಿ ಸೇಮ್‌ ವೇ, ಯೂ ಕೀಪ್‌ ಕ್ವೆ„ಟ್‌, ಇಟ್‌ ಮೀನ್ಸ್‌ ಸಮ್‌ಥಿಂಗ್‌. ಯೂ ಆರ್‌ ಡೂಯಿಂಗ್‌ ಸಮ್‌ಥಿಂಗ್‌ ಅಂತ. ಅಂದರೆ, ನಾವು ಮೌನದ ಭಾಷೆಯನ್ನು ಅರ್ಥ ಮಾಡಿಕೊಳ್ಳೋದನ್ನ ಕಲೀದೇ ಇದ್ರೆ, ಮಾತುಗಳನ್ನು ಅರ್ಥ ಮಾಡಿಕೊಳ್ಳೋ ಸೆನ್ಸಿಬಿಲಿಟಿ ಹೋಗಿಬಿಡುತ್ತೆ! ದಟ್‌ ಈಸ್‌ ವೆರಿ ಇಂಪಾರ್ಟೆಂಟ್‌. ಮಾತಾಡೋವಷ್ಟೇ, ಮಾತನಾಡದೇ ಇರುವುದೂ ಅಗತ್ಯ! ನಿಮ್ಮ ಮಾತಿಗೆ ಅರ್ಥ ಬರಬೇಕಾದರೆ, ನೀವು ಮಾತನಾಡದೇ ಇರೋದು ಅಗತ್ಯ! ಯೂ ಹ್ಯಾವ್‌ ಟು ಲಿಸನ್‌. ನಾಟ್‌ ಓನ್ಲಿ ಲಿಸನ್‌ ಟು ಯುವರ್‌ ಫೆಲೋ ಜಂಟಲ್‌ಮ್ಯಾನ್‌, ಬಟ್‌ ಟು ಮಿಸ್ಟೀರಿಯಸ್‌ ವಾಯ್ಸಸ್‌!

ಸರ್‌, ನೀವು ಬರ್ಡ್‌ ವಾಚಿಂಗ್‌ ಹೇಗೆ ಮಾಡ್ತೀರಿ ಹೇಳಿ. ಅದಕ್ಕೆ ಇನ್ನೇನು ವಿಶೇಷ ತಯಾರಿ ಬೇಕಾಗುತ್ತೆ?
ನಾನು ಸುಮಾರು ಮೂವತ್ತು ಮೂವತ್ತೈದು ವರ್ಷಗಳಿಂದ ಬರ್ಡ್‌ ವಾಚಿಂಗ್‌ ಮಾಡ್ತಿದ್ದೀನಿ. ಫ‌ಸ್ಟ್‌ ಆಫ್ ಆಲ್‌ ನೀವು ಹೇಗೆ ನಿಮ್ಮ ಎನ್‌ವಿರಾನ್‌ಮೆಂಟಲ್ಲಿ ಕರಗಿ ಹೋಗ್ತಿàರಾ ಅನ್ನೋದು ಬಹಳ ಇಂಪಾರ್ಟೆಂಟ್‌! ನಾನು ತೆಗಿªರೋವಂಥ ಒಂದು ಫೋಟೋನು ಈಗ  ನೀವು ಸದ್ಯಕ್ಕೆ, ಇಮ್ಮಿಡಿಯೇಟ್‌ ಆಗಿ ತೆಗೆಯೋಕೆ ಆಗಲ್ಲ. ಯಾಕೆ ಅಂತ ಹೇಳಿದರೆ, ಅದರ ಹಿಂದುಗಡೆ ನನಗೆ ಹಕ್ಕಿಗಳ ವರ್ತನೆಯ ನಾಲೆಡ್ಜ್ ಇದೆ ನೋಡಿ. ಇಪ್ಪತ್ತು ಇಪ್ಪತ್ತೈದು ವರ್ಷಗಳ ನಾಲೆಡ್ಜ್ ಇದೆಯಲ್ಲ ಅದು ಸಹಾಯ ಮಾಡುತ್ತೆ. ಅದೊಂದು ಹಠಯೋಗ ಇದ್ದ ಹಾಗೆ. ನೀವು ನಿಮ್ಮ ಕ್ಯಾಮೆರಾ, ನಿಮ್ಮ ಹೆಸರು, ಕುಲ, ಗೋತ್ರ ಅಲ್ಲಿ ಡಿಸಾಲ್‌Ì ಆಗಿ ಹೋಗಬೇಕು. ಕಾಡಿನಲ್ಲಿ ಎಲ್ಲಾದರೂ ಒಂದು ಕಡೆ ಸುಮ್ಮನೆ ಕೂತ್ಕೊಳ್ಳಿ. ಸುಮಾರು ಹೊತ್ತು ಕೂತ ಮೇಲೆ ನೋಡಿ. ನಿಮಗೆ ನಿಧಾನಕ್ಕೆ ಕಾಡು ಅಲೈವ್‌ ಆಗೋದು ಗೊತ್ತಾಗುತ್ತೆ. ಎಲ್ಲೋ ಗಿಳಿ ಕೂಗುತ್ತೆ, ಎಲೆ ಬೀಳುತ್ತೆ… ನೀವು ಒಂದು ಚೂರು ಶಬ್ದ ಮಾಡಿದರೆ ಅದೆಲ್ಲಾ ಸ್ತಬ್ಧವಾಗಿಬಿಡುತ್ತೆ! ಮತ್ತೆ ಸ್ಟಾಟಿಕ್‌ ಅಂಡ್‌ ಸೈಲೆಂಟ್‌ ಫಾರೆಸ್ಟ್‌ ಆಗಿರುತ್ತೆ.

ಸರ್‌, ನೀವು ಛಾಯಾಗ್ರಹಣದಲ್ಲಿ ಇಷ್ಟೊಂದು ಪರಿಣಿತಿ ಇಧ್ದೋರು ಮತ್ತು ಮನುಷ್ಯನಲ್ಲೂ, ಪ್ರಕೃತಿಯಲ್ಲೂ ಅಪಾರವಾದ ಆಸಕ್ತಿ ಇಧ್ದೋರು, ನಿಮಗೆ ಚಲನಚಿತ್ರ ಮಾಧ್ಯಮದಲ್ಲಿ ಯಾಕೆ ಅಂಥಾ ಆಸಕ್ತಿ ಬರಲಿಲ್ಲ?
ಅಲ್ಲ, ಎಷ್ಟೋ ಸಾರಿ ನಾನು ಅಂದ್ಕೋಂಡಿದ್ದೀನಿ. ಈಗಲೂ ಇಷ್ಟೆಲ್ಲಾ ಕಷ್ಟಪಟ್ಟು ಸ್ಟಿಲ್‌ ಪೋಟೋ ತೆಗೀತಾ ಇದ್ದೀನಲ್ಲ, ಇದನ್ನೇ ನಾನು ಒಂದು ಮೂವಿ ಕ್ಯಾಮೆರಾ ಉಪಯೋಗಿಸಿ ಫ‌ಸ್ಟ್‌ ಕ್ಲಾಸ್‌ ಮೂವಿಯನ್ನು ಮಾಡಿದರೆ! ಕೊನೆ ಪಕ್ಷ ಟೀವಿಗಳಿಗಾದರೂ ಕೊಡಬಹುದಲ್ಲ ಅಂತ. ಆದರೆ, ಮತ್ತೂಬ್ಬರ ಜೊತೆ ಕೆಲಸ ಮಾಡೋದು ಅಂದರೆ ನನಗೆ ವಿಪರೀತ ಕಷ್ಟ! ನನಗೆ ಸಾಧ್ಯವೇ ಇಲ್ಲದೇ ಇರೋ ವಿಷಯ ಅದು. ಹಾಗಾಗೇನೆ ನಾನು ಚಲನಚಿತ್ರ ಮಾಧ್ಯಮಕ್ಕೆ ಕಾಲಿಡಲಿಲ್ಲ. ನೀವೇನಾದರೂ ಮುಂದುವರೆ ಯೋದಾದರೆ ಮುಂದುವರೀರಿ.

ಸರ್‌, ಆಮೇಲೆ ಬಿರಿಯಾನಿ ಕರಿಯಪ್ಪನ ಸುದ್ದಿ ಏನು? ಅವನು ನಿಮಗೆ ಎಲ್ಲಿ ಸಿಕ್ಕಿದ? ಅದೇನೋ ಒಂದು ಇನ್ಸಿಡೆಂಟ್‌ ಎಲ್ಲ ಹೇಳ್ತಾರೆ.
ಒಂದು ದಿನ ಬಂದ. “ಏನು’ ಅಂತ ಕೇಳಿದರೆ, “ಅಲ್ಲ, ನೀವು ಹಿಂಗ ಮಾಡೋದು? ಆ ಹಾವುಗೊಲ್ಲರ ಯಂಗ್ಟನ ಹೆಂಡ್ತೀನ ನಾನು ಇಟ್ಟುಕೊಂಡಿದೀನಿ ಅಂತ ಬರೆದಿದ್ದೀರಂತೆ!’ ಹಂಗೆ ಹಿಂಗೆ ಅಂತ ಕೇಳ್ದ . 
ನಾನು- “ಹಾಗೆ ನಿನ್ನ ಬಗ್ಗೆ ಬರೆಯೋಕೆ ಕಾರಣ ಇಲ್ಲಪ್ಪ’ ಅಂದೆ. “ಅಲ್ಲ ನಾವು ಬಿಡಿ, ಗಂಡಸರು ಕೆಸರು ಕಂಡಲ್ಲಿ ತುಳಿತೀವಿ, ನೀರು ಕಂಡಲ್ಲಿ  ತೊಳಿತೀವಿ! ಆದರೆ ನಾನು ಯಾವ ಜಾತಿ? ಅವನು ಯಾವ ಜಾತಿ? ನೀವು ನನ್ನ ಇಂಥವನು ಅಂತ ತಿಳ್ಕೊಂಡಿದ್ದೀರಾ ಅಂತ ಗೊತ್ತಾಗ್ತಿಲ್ಲ’ ಅಂತ ಅಂದ. ಅಂದರೆ ಅವನ ಅರ್ಥ ಏನು ಅಂದರೆ, ಅವನು ಸ್ವಲ್ಪ ಲೈಂಗಿಕ ಅಶಿಸ್ತಿನ ಮನುಷ್ಯ ಆದರೂನು ಪರವಾಗಿಲ್ಲ. ಆದರೆ ಜಾತೀನ ಬಿಟ್ಟುಬಿಟ್ಟು ಹೀಗೆ ಮಾಡಿದಾರೆ ಅನ್ನೋದು ಅವನ ಕಷ್ಟ. ಆಮೇಲೆ “ಅಲ್ಲಯ್ಯ, ಯಾರು ನಿನಗೆ ಹೇಳಿದ್ರು?’ ಅಂತ ಕೇಳೆª. ಅವನು ಆಲ್ದೂರಲ್ಲಿ ಬಸ್ಸಿಗೆ ಕಾಯ್ತಾ ನಿಂತಿದ್ದನಂತೆ. ಕಾಲೇಜು ಹುಡುಗರಿಗೆ ಕರ್ವಾಲೊ ಇತ್ತಲ್ಲ, ಅದರಲ್ಲಿ ಕರಿಯಪ್ಪನ ಪಾತ್ರ ಒಂದು ಬರುತ್ತೆ. ಅವ್ರು ಇವನಿಗೆ ಚಾಡಿ ಹೇಳಿಕೊಟ್ಟರಂತೆ. ಅವನಿಗೆ ಓದುಬರಹ ಬರೋಲ್ಲ. “ಅಲ್ಲ ಕಣಯ್ಯ, ನಿನಗೆ ಓದು ಬರಹ ಬರೋದಿಲ್ಲ. ನಿನಗೆ ಮಾನನಷ್ಟ ಆಗೊ ಹಾಗೆ  ಬರೆದಿದ್ದಾನೆ ಅಂತ ಯಾರೊ ಹೇಳಿದ್ದನ್ನು ಕೇಳ್ಕೊಂಡು ಬಂದಿದ್ದೀಯಲ್ಲ, ನಾನು ಖಂಡಿತ ಹಾಗೆ ಬರೆದಿಲ್ಲಪ್ಪ ಅದರಲ್ಲಿ. ಅಕಸ್ಮಾತ್‌ ಬರೆದಿದ್ದರೂ ತಿದ್ತೀನಿ’ ಅಂತ ಹೇಳಿದೆ. ಅವನು ಯಂಗ್ಟನನ್ನೂ ಕರ್ಕೊಂಡು ಬಂದು…ಇದೆಲ್ಲಾ ಡಿಸ್ಕಷನ್‌ ಅವನ ಹೆಂಡತಿ  ಬಗ್ಗೆ ಅವನ ಎದುರಿಗೇನೆ! ಅಂದರೆ ನಾನು ಬರೆದ ಪಾತ್ರಗಳೇ ನನ್ನ  ಎದುರಿಗೆ ಬಂದು ಜಗಳ ಆಡೋದಿಕ್ಕೆ ಶುರು ಮಾಡಿದ್ದುವು!, “ಹೀಗೇನಾ ನೀವು ಬರೆಯೋದು….’ ಅಂತ.  ಇಟ್‌ ವಾಸ್‌ ಎ ಸ್ಟ್ರೇಂಜ್‌ ಇನ್ಸಿಡೆಂಟ್‌! (ಸೌಜನ್ಯ- ಈ ಟೀವಿ ವಾಹಿನಿಯ “ನಮಸ್ಕಾರ’ ಕಾರ್ಯಕ್ರಮಕ್ಕಾಗಿ ಹಿರಿಯ ಸಾಹಿತಿ ಜಯಂತ ಕಾಯ್ಕಿಣಿ ಅವರು ನಡೆಸಿದ ಸಂದರ್ಶನವನ್ನು ಒಳಗೊಂಡಿದ್ದ  “ಹೊಸ ವಿಚಾರಗಳು’ ಎಂಬ ಪುಸ್ತಕದಿಂದ…)

Advertisement

Udayavani is now on Telegram. Click here to join our channel and stay updated with the latest news.

Next