Advertisement

ಕಾಡಿನ ಕಾಡುವ ಸಂತ

12:07 PM Sep 16, 2017 | |

ಶಾಲೆಯ ಪಾಠಗಳಲ್ಲಿದ್ದ ತೇಜಸ್ವಿಯವರ ಲೇಖನಗಳಿಂದ ನನ್ನ ಓದು ಶುರುವಾಯ್ತು. ಅದನ್ನು ಓದಿದ ನಂತರ ಆ ಲೇಖನವನ್ನು ಯಾವ ಪುಸ್ತಕದಿಂದ ಆಯ್ದುಕೊಂಡಿದ್ದು ಎಂದು ಲೈಬ್ರರಿ ತಡಕಾಡುವಂತೆ ಮಾಡಿದ್ದು ಅವರ ಬರಹಕ್ಕಿರುವ ಶಕ್ತಿ. ಆ ಶಕ್ತಿಯೇ ನನ್ನನ್ನು ಅಂಡಮಾನ್‌ವರೆಗೂ ಕರೆದುಕೊಂಡಿದ್ದು ಹೋಯ್ತು. “ಅಲೆಮಾರಿಯ ಅಂಡಮಾನ್‌’ ಪುಸ್ತಕ ಓದಿ, ಟಿಪ್ಪಣಿ ಮಾಡಿಕೊಂಡು, ಅದರಲ್ಲಿ ತೇಜಸ್ವಿಯವರು ಹೇಳಿದ ವಿಷಯಗಳನ್ನೆಲ್ಲ ತಲೆಯಲ್ಲಿಟ್ಟುಕೊಂಡು ಅಂಡಮಾನಿನಲ್ಲಿ ನಾನೂ ಅಲೆಮಾರಿಯಂತೆ ಅಲೆದಿದ್ದೇನೆ. ಅವರೂ ಇಲ್ಲೆಲ್ಲ ಓಡಾಡಿದ್ದರು, ಇದನ್ನು ನೋಡಿದಾಗ ತೇಜಸ್ವಿ ಮನಸ್ಸಿನಲ್ಲಿ ಯಾವ ಯೋಚನೆ ಬಂದಿರಬಹುದು ಎಂದೆಲ್ಲ ರೋಮಾಂಚನಗೊಂಡಿದ್ದೇನೆ. 

Advertisement

ಮಲೆನಾಡು, ಕೃಷಿ, ಪರಿಸರ, ಸಾಮಾಜಿಕ ಕಳಕಳಿ…ಹೀಗೆ ತೇಜಸ್ವಿಯವರ ಪುಸ್ತಕದ ಯಾವ ಸಂಗತಿಯೂ ಅಸಹಜ, ಉತ್ಪ್ರೇಕ್ಷೆ ಅನ್ನಿಸುವುದಿಲ್ಲ. ಮಂದಣ್ಣ, ಪ್ಯಾರ, ಕರಿಯಪ್ಪನಂಥ ಸಾಮಾನ್ಯರನ್ನೂ ಅಸಾಮಾನ್ಯರಂತೆ ತೋರಿಸಿದ್ದಾರೆ. ಅವರ ಒಂದು ಪುಸ್ತಕವನ್ನು ಯಾರಿಗಾದರೂ ಕೊಟ್ಟು ನೋಡಿ, ಇವರು ಬೇರೆ ಯಾವ್ಯಾವ ಪುಸ್ತಕ ಬರೆದಿದ್ದಾರೆ ಅಂತ ಪ್ರಶ್ನೆ ಬರೋದು ಸಹಜ. ಓದುಗರನ್ನು ಹಿಡಿದಿಟ್ಟುಕೊಳ್ಳಬಲ್ಲ ಶಕ್ತಿ ಅವರ ಬರಹಕ್ಕಿದೆ. ಮಹಾಪಲಾಯನ, ಕಾಡಿನಕಥೆಗಳಂಥ ಪುಸ್ತಕಗಳು ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ. ನರಭಕ್ಷಕ ಹುಲಿಯನ್ನು ಕಣ್ಮುಂದೆಯೇ ಓಡಾಡಿಸಿ ಬಿಡುತ್ತಾರೆ ಅವರು.  


ಮಧುಚಂದ್ರ ಎಚ್‌.ಬಿ. 
(ಅಂಡಮಾನಿಗೆ ಹೋಗಿ ಬಂದವರು)

“ಹಕ್ಕಿಪುಕ್ಕ’ ಪುಸ್ತಕವನ್ನೇ ಪ್ರೇರಣೆಯಾಗಿರಿಸಿಕೊಂಡೆ

ಐಟಿ ಪ್ರಪಂಚಕ್ಕೆ ಇಳಿದ ಮೇಲೆ ಕನ್ನಡ ಸಾಹಿತ್ಯದ ಓದು ಮರೆತೇ ಹೋದಂತಾಗಿತ್ತು. ಹಾಗಾಗಬಾರದು ಅಂತನ್ನಿಸಿ, ಒಂದಷ್ಟು ಪುಸ್ತಕಗಳನ್ನು ಕೊಳ್ಳೋಣವೆಂದು ಸ್ವಪ್ನ ಬುಕ್‌ ಸ್ಟಾಲ್‌ಗೆ ಹೋದೆ. ಆಗ ಕಣ್ಣಿಗೆ ಬಿದ್ದದ್ದೇ ತೇಜಸ್ವಿಯವರ “ಜುಗಾರಿ ಕ್ರಾಸ್‌’. ಓದೇ ಮರೆತು ಹೋಗಿದ್ದವನು ಒಂದಾದ ಮೇಲೊಂದರಂತೆ ತೇಜಸ್ವಿಯವರ ಎಲ್ಲ ಪುಸ್ತಕಗಳನ್ನು ಓದುತ್ತಾ ಹೋದೆ. ಅದರಲ್ಲಿ ಜಾಸ್ತಿ ಇಷ್ಟವಾಗಿದ್ದು ಅವರು ಹಕ್ಕಿಗಳ ಬಗ್ಗೆ ಬರೆಯುತ್ತಿದ್ದ ಪುಸ್ತಕಗಳು. ಹಾಗೇ ಹಕ್ಕಿಗಳ ಬಗ್ಗೆಯೂ ಆಸಕ್ತಿ ಬೆಳೆಯುತ್ತಾ ಹೋಯ್ತು. ಈಗ ನಾನೊಬ್ಬ ಬರ್ಡ್‌ ಫೋಟೊಗ್ರಾಫ‌ರ್‌ ಅಂತ ಕರೆಸಿಕೊಳ್ಳುತ್ತಿರುವುದಕ್ಕೆ ಪರೋಕ್ಷವಾಗಿ ತೇಜಸ್ವಿಯವರೇ ಕಾರಣ. 

Advertisement

ಮುಂದೆ ತೇಜಸ್ವಿಯವರ “ಹಕ್ಕಿಪುಕ್ಕ’ ಪುಸ್ತಕವನ್ನೇ ಪ್ರೇರಣೆಯಾಗಿರಿಸಿಕೊಂಡು “ಹಕ್ಕಿಪುಕ್ಕ.ಕಾಂ’ ಪ್ರಾರಂಭಿಸಿದೆವು. ಭಾರತದ ಸುಮಾರು 500 ಪಕ್ಷಿ ಪ್ರಭೇದಗಳ ಬಗ್ಗೆ ಇದರಲ್ಲಿ ಮಾಹಿತಿ ಸಿಗುತ್ತದೆ. ಈಗ ಬರೀ ಮಾಹಿತಿ ಹಾಗೂ ಅಪರೂಪದ ಫೋಟೊಗಳಿವೆ.  ಮುಂದೆ ಹಕ್ಕಿಗಳ ಕೂಗುಗಳ ಆಡಿಯೋಗಳನ್ನು ಕೂಡ ಅಪ್ಲೋಡ್‌ ಮಾಡುವ ತಯಾರಿ ನಡೆಯುತ್ತಿದೆ. ಹಾಗೆಯೇ ವಿಸ್ಮಯ ಪ್ರತಿಷ್ಠಾನದ ಜೊತೆ ಕೈಗೂಡಿಸಿದ್ದೇವೆ. ನಮ್ಮ ಸ್ನೇಹಿತರ ಬಳಗಕ್ಕೂ ತೇಜಸ್ವಿಯವರ ಪುಸ್ತಕಗಳನ್ನು ಓದುವ ಗೀಳು ಹತ್ತಿಸಿದ್ದೇವೆ. ತೇಜಸ್ವಿಯವರು ಬಹುಬೇಗ ತಮ್ಮ ಓದುಗರನ್ನು ಆವರಿಸಿಕೊಳ್ಳುತ್ತಾರೆ. ಆಮೇಲೆ ಓದು ನಿಲ್ಲಿಸುವ ಮಾತೇ ಇಲ್ಲ.  


ದೀಪಕ್‌, ಹಕ್ಕಿಪುಕ್ಕ.ಕಾಂ  ಸಾಫ್ಟ್ವೇರ್‌ ಎಂಜಿನಿಯರ್‌

ಮತ್ತೆ ಮತ್ತೆ ತೇಜಸ್ವಿ ಸಾಕ್ಷ್ಯಚಿತ್ರ
ನಾನು ಪೂರ್ಣಚಂದ್ರ ತೇಜಸ್ವಿಯವರ ದೊಡ್ಡ ಅಭಿಮಾನಿ. ಶಾಲೆ-ಕಾಲೇಜು ದಿನಗಳಲ್ಲಿಯೇ ಅವರ ಪುಸ್ತಕಗಳನ್ನು ಓದುತ್ತಿದ್ದೆ. ನಾನು ಓದಿರುವುದು ಎಂಕಾಂ ಪದವಿಯನ್ನಾದರೂ ಸಾಹಿತ್ಯದ ಒಲವು ಹಿಡಿಸಿದ್ದು ತೇಜಸ್ವಿಯವರೇ. ಅವರಿಂದ  ಪ್ರೇರಣೆ  ಪಡೆದು  ಸಿನಿಮಾ    ಮೇಕಿಂಗ್‌ ಕಡೆ ಬಂದೆ. ತೇಜಸ್ವಿಯವರನ್ನು ಹೆಚ್ಚೆಚ್ಚು ಜನರಿಗೆ ಪರಿಚಯಿಸುವ ಕೆಲಸ ಆಗುತ್ತಿಲ್ಲ. ಆ ನಿಟ್ಟಿನಲ್ಲಿ ನಡೆದ ಕಿರುಪ್ರಯತ್ನವೇ 2.30 ಗಂಟೆಯ “ಮತ್ತೆ ಮತ್ತೆ ತೇಜಸ್ವಿ’ ಸಾಕ್ಷ್ಯಚಿತ್ರ. ಜೆ.ಕೆ. ಮೂವೀಸ್‌ ಸಂಸ್ಥೆಯ ಬ್ಯಾನರ್‌ನಲ್ಲಿ ಜರಗನಹಳ್ಳಿ ಕಾಂತರಾಜು ಅವರು ಅದನ್ನು ನಿರ್ಮಿಸಿದರು. 2013ರ ಜೂನ್‌ನಲ್ಲಿ ಡಾಕ್ಯುಮೆಂಟರಿ ಬಿಡುಗಡೆಯಾಯಿತು. ಇದರಲ್ಲಿ ತೇಜಸ್ವಿಯವರ ಬದುಕು, ಬರಹ, ಪರಿಸರ ಆಸಕ್ತಿ, ಸಾಹಿತ್ಯ, ಚಿತ್ರಕಲೆ, ಹೋರಾಟ, ಫೋಟೊಗ್ರಫಿ, ಬೇಟೆ, ಮೀನುಶಿಕಾರಿ, ಕೃಷಿ…ಹೀಗೆ ಅವರ ಹತ್ತು ಹಲವು ಆಸಕ್ತಿಗಳ, ಬದುಕಿನ ವಿವಿಧ ಮಗ್ಗುಲುಗಳನ್ನು ಪರಿಚಯಿಸಿದ್ದೇವೆ. ಜೊತೆಗೆ ಮಲೆನಾಡಿನ ಪರಿಸರದ ವೈಶಿಷ್ಟéಗಳನ್ನು ಸೆರೆ ಹಿಡಿಯಲಾಗಿದೆ. 

ತಂಡದಲ್ಲಿದ್ದವರೆಲ್ಲರೂ ತೇಜಸ್ವಿ ಅಭಿಮಾನಿಗಳೇ. ಇದು ನಮ್ಮ ತಂಡದ ಒಂದು ಸಣ್ಣ ಪ್ರಯತ್ನವಷ್ಟೇ. ಮುಂದೆ ಅವರ “ಜುಗಾರಿ ಕ್ರಾಸ್‌’ ಮತ್ತು “ನಿಗೂಢ ಮನುಷ್ಯರು’ ಪುಸ್ತಕಗಳನ್ನು ಸಿನಿಮಾ ಮಾಡಬೇಕೆಂಬ ಆಸೆಯಿದೆ. ನನಗೆ ರಂಗಭೂಮಿ, ಕಲೆ-ಸಾಹಿತ್ಯದ ಬಗ್ಗೆ ಇದ್ದ ಭಯ ಹೋಗಲಾಡಿಸಿ, ಅದನ್ನೇ ಅಪ್ಪಿಕೊಳ್ಳುವಂತೆ ಮಾಡಿದವರು ತೇಜಸ್ವಿಯವರೆಂದರೆ ತಪ್ಪಿಲ್ಲ. ಅವರು ಎಲ್ಲರಂತೆ ಬದುಕಿದವರಲ್ಲ. ಅವರ ಎಲ್ಲಾ ಯೋಚನೆಗಳು ಔಟ್‌ ಆಫ್ ದಿ ಬಾಕ್ಸ್‌ ಥಿಂಕಿಂಗ್‌ಗಳೇ. ಅದಕ್ಕೆ ಅವರೆಂದರೆ ತುಂಬಾ ಇಷ್ಟ.  


ಪರಮೇಶ್ವರ್‌ 

Advertisement

Udayavani is now on Telegram. Click here to join our channel and stay updated with the latest news.

Next