Advertisement
ವಿಕಸಿತ ಭಾರತ ಸಂಕಲ್ಪಯಾತ್ರೆ ಅನ್ವಯ ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳ ಜತೆಗೆ ಪ್ರಧಾನಿ ಮೋದಿ ವರ್ಚುವಲ್ ಸಂವಾದ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಸರ್ಕಾರದ ಯೋಜನೆಗಳಿಂದ ಹೊರಗುಳಿದವರನ್ನು ತಲುಪುವುದು ಮತ್ತು ಯೋಜನೆಗಳ ಫಲಾನುಭವಿಗಳ ಅನುಭವಗಳನ್ನು ಕೇಳಿ ಕಲಿಯುವುದು ಈ ಯಾತ್ರೆಯ ಉದ್ದೇಶ. ಈ ಹಿಂದಿನ ಸರ್ಕಾರಗಳು ತಮ್ಮನ್ನು ತಾವು ಪ್ರಜೆಗಳ ಅಪ್ಪ ಎಂದು ಅಂದುಕೊಂಡು ಆಡಳಿತ ನಡೆಸಿದ್ದವು ಅದನ್ನು ಜನರು ಕಂಡಿದ್ದಾರೆ. ಆದರೆ, ನಮ್ಮ ಸರ್ಕಾರ ಜನರನ್ನು ದೇವರೆಂದೇ ಭಾವಿಸುತ್ತಿದೆ. ಅದಕ್ಕೆ ಜನರ ಈ ಬೆಂಬಲವೇ ಸಾಕ್ಷಿ ಎಂದು ಮೋದಿ ಹೇಳಿದ್ದಾರೆ.
ಜಮ್ಮು-ಕಾಶ್ಮೀರದ ರಂಗಪುರ ಗ್ರಾಮದ ಸರಪಂಚ್ ಬಲ್‌ವೀರ್ ಕೌರ್ ಎಂಬ ಮಹಿಳೆಯೊಂದಿಗೆ ಪ್ರಧಾನಿ ಸಂವಾದ ನಡೆಸಿದ್ದು, ಈ ವೇಳೆ ಕೆಲ ವಿನೋದದ ಮಾತುಗಳನ್ನಾಡಿ ನಗೆ ಚಟಾಕಿ ಹಾರಿಸಿದ್ದಾರೆ. ಕಿಸಾನ್ ಕ್ರೆಡಿಟ್ ಕಾರ್ಡ್ ಬಳಸಿ ಟ್ರ್ಯಾಕ್ಟರ್ ಖರೀದಿಸಿದ್ದರ ಬಗ್ಗೆ ಕೌರ್ ಹೇಳಿದರು. ಈ ವೇಳೆ ಮೋದಿ ನಿಮ್ಮ ಬಳಿ ಟ್ರ್ಯಾಕ್ಟರ್ ಇದೆ, ನನ್ನ ಬಳಿ ಬೈಸಿಕಲ್ ಕೂಡ ಇಲ್ಲ ಎಂದಿದ್ದಾರೆ. ಇದೇ ವೇಳೆ ಕೌರ್‌ರನ್ನು ನೂಕಿ ಕುರ್ಚಿಯಲ್ಲಿ ಕೂರಲು ಮಹಿಳೆಯೊಬ್ಬರು ಯತ್ನಿಸುತ್ತಿರುವುದನ್ನು ಗಮನಿಸಿದ ಪ್ರಧಾನಿ, ನಿಮ್ಮ ಕುರ್ಚಿ ಭದ್ರಪಡಿಸಿ ಇಲ್ಲದಿದ್ದರೆ ನಿಮ್ಮ ಪಕ್ಕದ ಮಹಿಳೆ ಸರಪಂಚ್ ಆಗಿಬಿಡುತ್ತಾರೆಂದು ಹಾಸ್ಯ ಮಾಡಿದ್ದಾರೆ.