ಮೈಸೂರು: ನಗರದಲ್ಲಿ ರಸ್ತೆ ಅಭಿವೃದ್ಧಿ ಹೆಸರಲ್ಲಿ ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ಆರೋಪಿಸಿ ಕೆ.ಆರ್.ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪಾದಯಾತ್ರೆ ನಡೆಸಿದರು.
ಮಾಜಿ ಸಚಿವ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ನಗರದ ಗನ್‌ಹೌಸ್ ಸಮೀಪದ ಜೆಎಸ್‌ಎಸ್ ಮಹಾವಿದ್ಯಾಪೀಠ ವೃತ್ತದಿಂದ ಪಾದಯಾತ್ರೆ ಆರಂಭಿಸಿದ ಬಿಜೆಪಿ ಕಾರ್ಯಕರ್ತರು ಅಪಘಾತ ವಲಯವಿದೆ ಎಚ್ಚರಿಕೆ, ಬಾವಿ ಇದೆ ಎಚ್ಚರಿಕೆ, ಮೃತ್ಯುಕೂಪವಿದೆ ಎಚ್ಚರಿಕೆ, ಕಾಮಗಾರಿ ಹಣದಲ್ಲಿ ಕೆಲಸ ಮಾಡಿದ್ದೆಷ್ಟು? ನುಂಗಿದ್ದೆಷ್ಟು? ಎಂಬಿತ್ಯಾದಿ ಘೋಷಣಾ ಫಲಕಗಳನ್ನು ಹಿಡಿದು ಸಾಗುವ ಮೂಲಕ ರಾಜ್ಯ ಸರ್ಕಾರವ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಯಾವುದೇ ಕಾಮಗಾರಿಗಳು ನಿಗದಿತ ರೀತಿಯಲ್ಲಿ ನಡೆಯದೆ ಕಾಮಗಾರಿಗಾಗಿ ಬಿಡುಗಡೆಯಾದ ಹಣವೆಲ್ಲಾ ಗುಳುಂ ಮಾಡಲಾಗುತ್ತಿದೆ. ಅದರಂತೆ ನಗರದಲ್ಲಿ ನಡೆದಿರುವ ರಸ್ತೆ ಕಾಮಗಾರಿಗಳು ಅತ್ಯಂತ ಕಳಪೆಯಾಗಿದ್ದು, ಈಗಾಗಲೇ ಕೆಲವೆಡೆ ರಸ್ತೆಗಳಲ್ಲಿ ಬಾರೀ ಹೊಂಡ-ಗುಂಡಿಗಳು ಬಿದ್ದಿವೆ.
ಮಳೆನೀರು ಸರಿಯಾದ ರೀತಿಯಲ್ಲಿ ಹರಿಯಲು ಸ್ಥಳವಿಲ್ಲದ ಪರಿಣಾಮ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹಲವು ಬಡಾವಣೆಗಳ ಜನರು ತೊಂದರೆ ಅನುಭವಿಸುವಂತಾಗಿತ್ತು. ಹೀಗಾಗಿ ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ರಾಜಕಾಲುವೆ ಪುನರ್ ನಿರ್ಮಿಸಬೇಕು ಹಾಗೂ ಮಳೆಯಿಂದ ತೊಂದರೆ ಅನುಭವಿಸಿರುವ ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾಜೀವ್, ಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಮ.ವಿ.ರಾಂಪ್ರಸಾದ್, ಶಿವಕುಮಾರ್, ಪಣೀಶ್ ಮತ್ತಿತರರಿದ್ದರು.