ಬೆಂಗಳೂರು: ಬೊಮ್ಮನಹಳ್ಳಿ ವಾರ್ಡ್‌ನ ದೇವರಚಿಕ್ಕನಹಳ್ಳಿಯಲ್ಲಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸುವ ಅಡುಗೆ ಕೋಣೆಯಲ್ಲಿ ಕಳಪೆ ಗುಣಮಟ್ಟದ ಅಕ್ಕಿ, ತೆಂಗಿನ ಕಾಯಿ ಮತ್ತು ತರಕಾರಿಗಳನ್ನು ಬಳಸಲಾಗುತ್ತಿದೆ ಎಂದು ಬೊಮ್ಮನಹಳ್ಳಿಯ ಪಾಲಿಕೆ ಸದಸ್ಯ ರಾಮಮೋಹನ್ ರಾಜ್ ಆರೋಪಿಸಿದ್ದಾರೆ.
ದೇವರಚಿಕ್ಕನಹಳ್ಳಿಯಲ್ಲಿರುವ ಇಂದಿರಾ ಕ್ಯಾಂಟೀನ್‌ನಿಂದ ಆರು ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಮಾಡಲಾಗುತ್ತಿದೆ. ಕೊಳೆತ ವಸ್ತುಗಳಿಂದಲೇ ತಯಾರಾಗುತ್ತಿರುವ ಆಹಾರವನ್ನು ನೂರಾರು ಜನರಿಗೆ ನೀಡಲಾಗುತ್ತಿದೆ. ಈ ಆಹಾರ ವಿಷಕ್ಕಿಂತ ಅಪಾಯಕಾರಿ. ಈ ರೀತಿ ಮಾಡುತ್ತಿರುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇಂದಿರಾ ಕ್ಯಾಂಟೀನ್‌ನಲ್ಲಿ ಕಳಪೆ ಗುಣಮಟ್ಟದ ಆಹಾರ ತಯಾರಿಸುತ್ತಿದ್ದ ಬಗ್ಗೆ ಶನಿವಾರ (ಜೂ.29) ಪೌರಕಾರ್ಮಿಕರು ಮಹಿತಿ ನೀಡಿದ್ದರು. ಸ್ಥಳಕ್ಕೆ ದಿಢೀರ್ ಭೇಟಿ ನೀಡಿದಾಗ ಕಳಪೆ ಆಹಾರ ಪರ್ದಾಥಗಳನ್ನು ಬಳಸುತ್ತಿರುವುದು ಪತ್ತೆಯಾಗಿದೆ. 400 ರೂ. ನೀಡಿ ಖರೀದಿಸಿದ 25 ಕೆ.ಜಿ ಅಕ್ಕಿ, ಹಳದಿ ಮತ್ತು ಹಸಿರು ಬಣ್ಣಕ್ಕೆ ತಿರುಗಿದೆ. ವಾರದ ಹಿಂದೆಯೇ ಅಲ್ಲಿದ್ದ ತರಕಾರಿಗಳು ಕೊಳೆತಿದ್ದವು ಎಂದು ದೂರಿದರು.
ಸಾಮಾನ್ಯ ಸಭೆಯಲ್ಲೂ ಚರ್ಚೆ: ಜೂ.28ರಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ಇಂದಿರಾ ಕ್ಯಾಂಟೀನ್‌ನಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಶಾಸಕ ಮುನಿರತ್ನ ಅವರು ಆರೋಪಿಸಿದ್ದರು. ಇಂದಿರಾ ಕ್ಯಾಂಟೀನ್‌ಗಳಿಗೆ ನಿತ್ಯ ನೂರು ಜನರೂ ಭೇಟಿ ನೀಡುತ್ತಿಲ್ಲ. ಇದಕ್ಕೆ ಇಲ್ಲಿ ಸಿಗುವ ಕಳಪೆ ಆಹಾರವೇ ಕಾರಣ.
ಬಿಬಿಎಂಪಿ ಇಂದಿರಾಕ್ಯಾಂಟೀನ್ ನಿರ್ವಾಹಣೆಯ ಜವಾಬ್ದಾರಿಯನ್ನು ಚೆಫ್ಟಾಕ್ ಮತ್ತು ರಿವಾರ್ಡ್ ಸಂಸ್ಥೆಗಳಿಗೆ ನೀಡಿಲಾಗಿದೆ. ಈ ಕಂಪನಿಗಳು ಸರ್ಮಪಕವಾಗಿ ಕೆಲಸ ಮಾಡುತ್ತಿಲ್ಲ ಮತ್ತು ಕಳಪೆ ಗುಣಮಟ್ಟದ ಆಹಾರ ನೀಡುತ್ತಿವೆ. ಆಗಸ್ಟ್‌ನಲ್ಲಿ ಇವುಗಳ ಟೆಂಡರ್ ಮುಗಿಯಲಿದ್ದು, ಬೇರೆಯ ಕಂಪನಿಗೆ ಜವಾಬ್ದಾರಿ ನೀಡಬೇಕು ಎಂದು ಒತ್ತಾಯಿಸಿದ್ದರು.
ಕಳಪೆ ಗುಣಮಮಟ್ಟದಿಂದ ಕೂಡಿತ್ತು ಎಂದು ಹೇಳಲಾಗಿರುವ ತರಕಾರಿ ಮತ್ತು ಅಕ್ಕಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು.
-ಸರ್ಫಾಜ್ ಖಾನ್, ಬಿಬಿಎಂಪಿ ಜಂಟಿ ಆಯುಕ್ತ