ಬೆಂಗಳೂರು: ಕೋವಿಡ್ 19 ಸಂಕಷ್ಟದ ನಡುವೆ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ಕಳಪೆ ಬೀಜದ ಹಾವಳಿ ಹೆಚ್ಚಾಗಿದ್ದು ಇದು ಕೃಷಿ ಇಲಾಖೆಗೂ ತಲೆ ನೋವಾಗಿದೆ. ಹೀಗಾಗಿ ಕಳಪೆ ಬೀಜ ಮಾರಾಟಗಾರರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲು ಕೃಷಿ ಇಲಾಖೆ ನಿರತವಾಗಿದೆ. ರಾಜ್ಯದಲ್ಲಿ ಮುಂಗಾರು ಆರಂಭಕ್ಕೂ ಮುಂಚೆಯೇ ಉತ್ತಮ ಮಳೆಯಾಗಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ಚುರುಕಿನಿಂದ ಕೈಗೊಂಡಿದ್ದಾರೆ.
ಈ ವೇಳೆ ಅಗತ್ಯ ಬಿತ್ತನೆ ಬೀಜ ಖರೀದಿಸುತ್ತಿದ್ದು ಕಳಪೆ ಬೀಜ ಮಾರಾಟಗಾರರ ಹಾವಳಿ ಹೆಚ್ಚಾಗಿದ್ದು, ರೈತರ ಜೊತೆಗೆ ಕೃಷಿ ಇಲಾಖೆಗೂ ದೊಡ್ಡ ತಲೆನೋವಾಗಿದೆ. ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಕಳಪೆ ಬೀಜದ ಹಾವಳಿ ಹೆಚ್ಚಾಗಿದ್ದು, ಮುಸುಕಿನ ಜೋಳ, ಹತ್ತಿ, ಸೂರ್ಯಕಾಂತಿ ಹಾಗೂ ಸೋಯಾಬೀನ್ ಕಳಪೆ ಬೀಜ ಮಾರಾಟಗಾರರ ಹಾವಳಿ ಹೆಚ್ಚಾಗಿದ್ದು, ಹಾವೇರಿ, ಬಳ್ಳಾರಿ, ಧಾರವಾಡ, ಯಾದಗಿರಿ, ಬಾಗಲಕೋಟೆ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಕಳಪೆ ಬೀಜ ಮಾರಾಟಗಾರರನ್ನು ಪತ್ತೆ ಹಚ್ಚಿರುವ ಕೃಷಿ ಇಲಾಖೆ,
ಜಾಗೃತ ಕೋಶ ಅಗತ್ಯ ವಸ್ತು ಕಾಯ್ದೆ 1955(10) ಹಾಗೂ ಬೀಜ ನಿಯಂತ್ರಣ ಆದೇಶ 1983ರ ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ 14 ಜನ ಕಳಪೆ ಬೀಜ ಮಾರಾಟಗಾರರು ಹಾಗೂ ಖುಲ್ಲಾ ಬೀಜ ಮಾರಾಟ ಮಾಡುತ್ತಿದ್ದ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿದೆ. ಕೃಷಿ ಇಲಾಖೆ ಅತಿ ಹೆಚ್ಚು ಅಂದರೆ, 9894 ಕ್ವಿಂಟಲ್ ಮುಸುಕಿನ ಜೋಳದ ಕಳಪೆ ಬೀಜ ವಶಕ್ಕೆ ಪಡೆದಿದೆ. 288 ಕ್ವಿಂಟಲ್ ಸೂರ್ಯಕಾಂತಿ, 56.21 ಕ್ವಿಂಟಲ್ ಹತ್ತಿ ಬೀಜ ವಶಪಡಿಸಿಕೊಂಡಿದ್ದು, ಸುಮಾರು 13.02 ಕೋಟಿ ರೂ. ಮೌಲ್ಯದ ಕಳಪೆ ಬೀಜ ವಶಪಡಿಸಿಕೊಂಡಿದೆ. ಕಳಪೆ ಬೀಜ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿದೆ.
ಕಳಪೆ ಸೋಯಾ ಹಂಚಿಕೆ ಸ್ಥಗಿತ: ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ, ಕಲಬುರಗಿ, ಬೀದರ, ಬಾಗಲಕೋಟೆ ಜಿಲ್ಲೆಗಳಲ್ಲಿ ಹೆಚ್ಚಿನ ಸೋಯಾಬೀನ್ ಬಿತ್ತನೆ ಮಾಡಲಾಗುತ್ತದೆ. ಈ ಬಾರಿ ಕಳಪೆ ಬೀಜ ಸರಬರಾಜು ಮಾಡಿದ್ದು, ರೈತರು ಬಿತ್ತನೆ ಮಾಡಿದ ಸಾವಿರಾರು ಎಕರೆ ಸೋಯಾಬೀನ್ ಬೀಜ ಮೊಳಕೆಯೊಡೆಯದಿದ್ದರಿಂದ ಕೃಷಿ ಇಲಾಖೆಯೇ ಸೋಯಾಬೀನ್ ಬೀಜ ರೈತರಿಗೆ ಸರಬರಾಜು ಮಾಡದೇ ವಾಪಸ್ ಕಳುಹಿಸಿದೆ. ರಾಜ್ಯದಲ್ಲಿ 1.5 ಲಕ್ಷ ಕ್ವಿಂಟಲ್ ಸೋಯಾಬೀನ್ ಬೇಡಿಕೆ ಇತ್ತು. ಈಗಾಗಲೇ ಕೃಷಿ ಇಲಾಖೆ 1.04 ಲಕ್ಷ ಕ್ವಿಂಟಲ್ ಬಿತ್ತನೆ ಬೀಜ ಹಂಚಿಕೆ ಮಾಡಿದ್ದು, ರೈತರು ವಾತಾವರಣ ನೋಡಿಕೊಂಡು ಸೋಯಾಬೀನ್ ಬೆಳೆಯುವಂತೆ ಕೃಷಿ ಸಚಿವರೇ ಮನವಿ ಮಾಡಿಕೊಂಡಿದ್ದಾರೆ.
ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಪ್ರಕರಣ ಕೋರ್ಟ್‌ನಲ್ಲಿ ತೀರ್ಮಾನ ಆಗುತ್ತದೆ. ಇಲಾಖೆ ಜಾಗೃತ ದಳದ ಮೂಲ ಕ ಕಳಪೆ ಬೀಜ ಮಾರಾಟ ಮಾಡುವವರ ವಿರುದ್ಧ ಕಾರ್ಯಾಚರಣೆ ನಿರಂತರವಾಗಿದೆ.
-ಅನೂಪ್ ಕೆ. ಜಿ. ಅಪರ ನಿರ್ದೇಶಕರು, ಕೃಷಿ ಇಲಾಖೆ
ಕಳಪೆ ಬಿತ್ತನೆ ಬೀಜ ಮಾರಾಟ ಮಾಡಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ ರೈತರಿಗೆ ಆಗಿರುವ ಸಂಪೂರ್ಣ ಬೆಳೆ ನಷ್ಟದ ಪರಿಹಾರವನ್ನು ಕಳಪೆ ಬೀಜ ಮಾರಾಟ ಮಾಡಿರುವ ಕಂಪನಿಯಿಂದ ರೈತರಿಗೆ ಕೊಡಿಸಬೇಕು.
-ಮುತ್ತಪ್ಪ ಕೋಮಾರ್, ರೈತ ಮುಖಂಡ
* ಶಂಕರ ಪಾಗೋಜಿ