ಶ್ರೀರಂಗಪಟ್ಟಣ: ವಿಶ್ವ ಪ್ರಸಿದ್ಧಿ ಪ್ರವಾಸಿ ತಾಣ ಕೆಆರ್‌ಎಸ್ ಬೃಂದಾವನ, ರಂಗನತಿಟ್ಟು ಪಕ್ಷಿಧಾಮ, ಶ್ರೀರಂಗಪಟ್ಟಣ – ಮೈಸೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಕೊಣ್ಣನ್ನೂರು -ಪಶ್ಚಿಮವಾಹಿನಿ ಹೆದ್ದಾರಿಯಲ್ಲಿ ಗುಂಡಿ ಮುಚ್ಚಿದ್ದ ಡಾಂಬರು ಒಂದೇ ದಿನಕ್ಕೆ ಕಿತ್ತು ಬಂದಿದೆ.
ದಶಕಗಳ ಹಿಂದೆ ರಸ್ತೆ ಕಾಮಗಾರಿ ನಡೆದಿತ್ತು. ಅಂದಿನಿಂದಲೂ ಇಲ್ಲಿವರೆಗೂ ರಸ್ತೆ ಎಷ್ಟೇ ಹಾಳಾದರೂ ಬರಿ ಗುಂಡಿ ಮುಚ್ಚಿ ತೇಪೆ ಹಚ್ಚಿ ಕೈತೊಳೆದುಕೊಳ್ಳುತ್ತಾರೆಯೇ ಹೊರತು ಹೊಸದಾಗಿ ರಸ್ತೆಗೆ ಡಾಂಬರು ಹಾಕಿ ಗುಣಮಟ್ಟದ ಕಾಮಗಾರಿ ಬಗ್ಗೆ ಯಾರೂ ಯೋಚನೆ, ಯೋಜನೆ ರೂಪಿಸುತ್ತಿಲ್ಲ. ರಸ್ತೆಯಲ್ಲಿ ರಸ್ತೆಗಿಂತ ಗುಂಡಿಗಳೇ ಹೆಚ್ಚು ಬಿದ್ದಿವೆ. ರಸ್ತೆಯಲ್ಲಿ ವಾಹನ ಸಂಚಾರ ಹರಸಾಹಸವೇ ಸರಿ. ದ್ವಿಚಕ್ರ ವಾಹನ ಸವಾರರಿಗಂತೂ ನರಕ ಯಾತನೆಯಾಗಿದೆ. ಪಶ್ಚಿಮವಾಹಿನಿ ಬಳಿ ಇರುವ ರೈಲ್ವೇ ಅಂಡರ್ ಬ್ರಿಡ್ಜ್ ಬಳಿ ತುಂಬಾ ಗುಂಡಿಗಳು ಬಿದ್ದು ಹದಗೆಟ್ಟಿದೆ. ಹಾಗೆಯೇ ಅಲ್ಲಿಂದ ಮುಂದೆ ಹೋದರೆ ರಂಗನತಿಟ್ಟು ಮುಖ್ಯ ದ್ವಾರದ ಬಳಿ, ಪಾಲಹಳ್ಳಿ ಗ್ರಾಮದ ಪ್ರಾರಂಭದಿಂದ ಪಂಪ್ ಹೌಸ್‌ವರೆಗೂ ನೂರಾರು ಯಮರೂಪಿ ಗುಂಡಿಗಳು ಬಿದ್ದಿವೆ.
ಮೈಸೂರು, ಕೆಆರ್ ಎಸ್ ಹಾಗೂ ಶ್ರೀರಂಗಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಪಂಪ್ ಹೌಸ್ ಬಳಿಯೂ ಅನೇಕ ಗುಂಡಿಗಳು ಸವಾರರಿಗೆ ಅಪಾಯ ತರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಈಗಾಗಲೇ ದಸರಾ ಉತ್ಸವದ ಸಿದ್ಧತಾ ಕಾರ್ಯ ಆರಂಭಿಸಲಾಗಿದೆ. ಸಹಸ್ರಾರು ಪ್ರವಾಸಿಗರೂ ಇಲ್ಲಿನ ಪ್ರವಾಸ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಪ್ರತಿ ವರ್ಷ ಲೋಕೋಪಯೋಗಿ ಇಲಾಖೆ ರಸ್ತೆ ಕಾಮಗಾರಿ ನಡೆಸದೆ ಗುಂಡಿಗಳಿಗೆ ತೇಪೆ ಹಾಕಿ ಮುಚ್ಚುವ ಕಾಮಗಾರಿ ನಡೆಸುತ್ತಲೇ ಬಂದಿದೆ. ಗುಂಡಿ ಮುಚ್ಚಿದ ಪಕ್ಕದಲ್ಲೇ ಮತ್ತೂಂದು ಗುಂಡಿ ಬಿದ್ದು ಅದಿನ್ನು ಅಗಲವಾಗಿ ರಸ್ತೆ ಸಂಪೂರ್ಣ ಗುಂಡಿಮಯವಾಗುತ್ತಿದೆ.
ರಸ್ತೆ ಅಪಘಾತ: ಗುಂಡಿ ಬಿದ್ದ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿದ್ದು ಗುಂಡಿ ತಪ್ಪಿಸಲು ಹೋಗಿ ಅಫಘಾತ ಸಂಭವಿಸುತ್ತಿವೆ. ಕೆಲ ಅಧಿಕಾರಿಗಳ ಮಾಹಿತಿ ಪ್ರಕಾರ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಹಸ್ರಾರು ವಾಹನಗಳು ಓಡಾಡುತ್ತಿವೆ. ಆದ್ದರಿಂದ ತರಾತುರಿಯಲ್ಲಿ ಅಧಿಕಾರಿಗಳು ಕಳಪೆ ಕಾಮಗಾರಿ ಮಾಡಿ ದಸರಾಗೆ ನೀಡುವ ಅನುದಾನದಲ್ಲಿನ ಬಿಲ್ ಪಡೆಯಲು ದಸರೆ ವೇಳೆಯಲ್ಲಿ ಕಾಮಗಾರಿ ನಡೆಸುತ್ತಿರುವ ಆರೋಪಗಳೂ ಕೇಳಿ ಬರುತ್ತಿವೆ. ದೇಶ ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಶ್ರೀರಂಗಪಟ್ಟಣ, ರಂಗನತಿಟ್ಟು ಪಕ್ಷಿಧಾಮ, ಮೈಸೂರು ಹಾಗೂ ಕೆಆರ್‌ಎಸ್ ಬೃಂದಾವನಕ್ಕೆ ಇದೇ ರಸ್ತೆಯನ್ನೇ ಅವಲಂಬಿಸಿದ್ದರು. ಗುಣಮಟ್ಟದ ರಸ್ತೆ ಕಾಮಗಾರಿ ಸಂಬಂಧಿಸಿದ ಇಲಾಖೆ ಮೀನಮೇಷ ಎಣಿಸುತ್ತಿದೆ. ಯಾವಾಗ ಗುಣಮಟ್ಟದ ರಸ್ತೆ ಮಾಡುವರೋ ಕಾದು ನೋಡಬೇಕಿದೆ.