ಮುಂಡಗೋಡ: ಇತ್ತೀಚಿಗಷ್ಟೆ ಲಕ್ಷಾಂತರ ರೂ. ಖರ್ಚು ಮಾಡಿ ಪಟ್ಟಣದ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿ ಮಹಾಲೆ ಮಿಲ್ ಹತ್ತಿರ ರಸ್ತೆ ಡಾಂಬರೀಕರಣ ಮಾಡಿದ್ದು ಮಳೆ ಆರಂಭದ ಮುನ್ನವೇ ಗುಂಡಿಗಳು ಬಿದ್ದಿದ್ದು ಲೋಕೋಪಯೋಗಿ ಇಲಾಖೆಯ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ.
ಲೋಕೋಪಯೋಗಿ ಇಲಾಖೆಯ 2019-20ನೇ ಸಾಲಿನ ಸುಮಾರು 14 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ ಹೊರವಲಯದ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯ ಮಹಾಲೆಮಿಲ್ ಹತ್ತಿರ ನಿರ್ಮಾಣ ಮಾಡಲಾಗಿರುವ 100 ಮೀಟರ್ ರಸ್ತೆ ಡಾಂಬರೀಕರಣ ಕಾಮಗಾರಿ ಇದಾಗಿದೆ. ಕಳೆದ ವರ್ಷ ಈ ಹದಗೆಟ್ಟ ರಸ್ತೆಯಲ್ಲಿಯೇ ಸಾವು-ನೋವುಗಳು ಸಂಭವಿಸಿದ್ದರಿಂದ ಕೂಡಲೇ ರಸ್ತೆ ದುರಸ್ತಿ ಮಾಡಿಸಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದ್ದರು.
ನಂತರ ಲೋಕೋಪಯೋಗಿ ಇಲಾಖೆಯವರು ಎಚ್ಚೆತ್ತುಕೊಂಡು ರಸ್ತೆಯನ್ನು ಅಗೆದು ತುರ್ತು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಕಳೆದ ಮೂರ್‍ನಾಲ್ಕು ತಿಂಗಳ ಹಿಂದೆ ಈ ಜಾಗದಲ್ಲಿ ಡಾಬರ್ ರಸ್ತೆ ಕಾಮಗಾರಿ ಸಂಪೂರ್ಣ ಮುಗಿದಿದೆ. ಆದರೆ ಮಳೆಗಾಲ ಪ್ರಾರಂಭವಾಗವ ಮುನ್ನವೇ ರಸ್ತೆ ಮಧ್ಯ ದೊಡ್ಡ-ದೊಡ್ಡ ಗುಂಡಿಗಳು ಬಿದ್ದಿವೆ. ಅದರಲ್ಲಿಯೂ ಕೋವಿಡ-19 ಪರಿಣಾಮ ಲಾಕ್‌ಡೌನ್‌ನಿಂದ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚಾರ ಮಾಡಿಲ್ಲ. ಒಂದೆರಡುಬಾರಿ ದೊಡ್ಡ ಮಳೆಯಾಗಿದೆ. ಅದಾಗಲೇ ಈ ಸ್ಥಳದಲ್ಲಿ ಗುಂಡಿಗಳು ಬಿದ್ದು ಬೈಕ್ ಸವಾರರಿಗೆ ಕಿರಿಕಿರಿ ಉಂಟಾಗಿದೆ.
ಇಂಥ ಕಳಪೆ ಗುಣಮಟ್ಟದ ರಸ್ತೆ ನಿರ್ಮಾಣದಿಂದ ಸರ್ಕಾರದ ಹಣ ಪೋಲು. ಇದರಿಂದ ಸರ್ಕಾರಕ್ಕೆ ಹಾಗೂ ಸಚಿವರಿಗೆ ಕೆಟ್ಟ ಹೆಸರು ಬರುತ್ತದೆ. ಮುಂದಿನ ದಿನದಲ್ಲಾದರೂ ಶಾಶ್ವತ ಗುಣಮಟ್ಟದ ರಸ್ತೆ ಆಗಬೇಕು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು.
– ಗುಡ್ಡಪ್ಪ ಕಾತೂರ ಮಂಡಗೋಡ ನ್ಯಾಯವಾದಿ
ರಸ್ತೆ ಕಾಮಗಾರಿ ಗುಣಮಟ್ಟದಾಗಿದೆ. ಒಂದು ಕಡೆ ಮಾತ್ರ ಗುಂಡಿ ಬಿದ್ದಿದೆ. ಹೀಗೇಕೆ ಆಗುತ್ತಿದೆ ಎಂಬುವುದು ಗೊತ್ತಿಲ್ಲ. ಆದಷ್ಟು ಬೇಗ ಗುಂಡಿ ಮುಚ್ಚಿಸುತ್ತೇವೆ. ಮುಂದೆಯೂ ಹೀಗೇ ಆದರೆ ಆ ಜಾಗವನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಮೇಲಧಿ ಕಾರಿ ಜೊತೆ ಚರ್ಚಿಸಿ ಮತ್ತೂಮ್ಮೆ ದುರಸ್ತಿ ಮಾಡುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ.-
ವಿ.ಎಂ.ಭಟ್ಟ ಪಿಡಬ್ಲ್ಯುಡಿ ಹೆಚ್ಚುವರಿ ಪ್ರಭಾರಿ ಎಇಇ
-ಮುನೇಶ ತಳವಾರ