Advertisement

ಹಳ್ಳ ಹಿದ್ದೋಯ್ತು ರಸ್ತೆ ತೇಪೆ ಕಾಮಗಾರಿ

12:02 PM Nov 20, 2019 | Team Udayavani |

ಹುಬ್ಬಳ್ಳಿ: ಮಳೆಯಿಂದ ಹದಗೆಟ್ಟಿದ್ದ ನಗರದ ರಸ್ತೆಗಳ ಕಾಮಗಾರಿ ಆರಂಭಗೊಂಡಿದ್ದರಿಂದ ಧೂಳಿನ ರಸ್ತೆಗಳಿಗೆ ಮುಕ್ತಿ ಸಿಕ್ಕಿತು ಎಂದು ಸಮಾಧಾನ ಪಟ್ಟುಕೊಂಡಿದ್ದ ಜನರು ಕಳಪೆ ಕಾಮಗಾರಿಯಿಂದಾಗಿ ಮತ್ತೆ ಆತಂಕಕ್ಕೀಡಾಗಿದ್ದಾರೆ.

Advertisement

ಒಂದೆಡೆ ರಸ್ತೆಗೆ ಹಾಕಿದ ಡಾಂಬರ್‌ ಎರಡನೇ ದಿನಕ್ಕೆ ಕಿತ್ತುಕೊಂಡು ಹೋಗುತ್ತಿದ್ದರೆ, ಇನ್ನೊಂದೆಡೆ ರಸ್ತೆಗೆ ಹಾಕಲಾದ ಖಡಿ ರಸ್ತೆಯ ತುಂಬೆಲ್ಲ ಹರಡಿ ಸಂಚಾರವನ್ನು ದುಸ್ತರವಾಗಿಸಿದೆ.

ಒಟ್ಟಿನಲ್ಲಿ ಅವಳಿನಗರದ ರಸ್ತೆಗಳ ಸ್ಥಿತಿ ಅಧೋಗತಿ ಎಂಬಂತಾಗಿದೆ. ಎಲ್ಲಿ ನೋಡಿದರೂ ಧೂಳು-ತಗ್ಗುಗಳ ದರ್ಶನ ಎಂದು ಜನರು ಬೊಬ್ಬೆ ಹೊಡೆಯುತ್ತಿದ್ದಾಗ, ಮಳೆ ಸೇರಿದಂತೆ ಇನ್ನಿತರ ಕಾರಣಗಳನ್ನು ನೀಡಿ ಹು-ಧಾ ಮಹಾನಗರ ಪಾಲಿಕೆ ಸಮಯ ಕಳೆಯುತ್ತಾ, ಇದೀಗ ಅವಳಿನಗರದಲ್ಲಿ ಎಲ್ಲೆಡೆ ತಗ್ಗು ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಕೈ ಹಾಕಿದೆ. ಆದರೆ ಅದರಲ್ಲೂ ಕಳಪೆ ಕಾಮಗಾರಿ ಮಾಡುವ ಮೂಲಕ ಮತ್ತೆ ಜನರ ಅಕ್ರೋಶಕ್ಕೆ ತುತ್ತಾಗುತ್ತಿದೆ.

ಹು-ಧಾ ಮಹಾನಗರ ಪಾಲಿಕೆ ಕಚೇರಿಯ ಕೂಗಳತೆ ದೂರದಲ್ಲಿ ಸರ್‌ ಸಿದ್ದಪ್ಪ ಕಂಬಳಿ ಪ್ರತಿಮೆ ಮುಂಭಾಗದಲ್ಲಿ ಸಿಗ್ನಲ್‌ ಅಳವಡಿಕೆಗಾಗಿ ತೆಗೆಯಲಾಗಿದ್ದ ಗುಂಡಿಯನ್ನು ಕಳೆದ ಎರಡು ದಿನಗಳ ಕೆಳಗೆ ಡಾಂಬರ್‌ ಹಾಕಿ ಮುಚ್ಚಲಾಗಿತ್ತು. ಆದರೆ ಎರಡೇ ದಿನಕ್ಕೆ ಡಾಂಬರ್‌ ಕಿತ್ತುಕೊಂಡು ಹೋಗುತ್ತಿದೆ. ಇದು ಕಾಮಗಾರಿಯ ಸ್ಥಿತಿ-ಗತಿ ಬಿಂಬಿಸುತ್ತಿದೆ.

ಕಾಟಾಚಾರಕ್ಕೆ ತೇಪ : ಅವಳಿನಗರದಲ್ಲಿ ತಗ್ಗು-ಗುಂಡಿ ಮುಚ್ಚುವ ಕಾರ್ಯಕ್ಕೆ ಕೈ ಹಾಕಿರುವ ಹು-ಧಾ ಮಹಾನಗರ ಪಾಲಿಕೆ ಕಾಟಾಚಾರಕ್ಕೆಂಬಂತೆ ತೇಪೆ ಕಾರ್ಯ ಮಾಡಿಸುತ್ತಿದೆ. ಒಂದು ಗುಂಡಿ ಮುಚ್ಚಿದರೆ ಇನ್ನೊಂದು ಗುಂಡಿ ಹಾಗೇ ಬಿಟ್ಟು ಹೋಗುತ್ತಿದ್ದಾರೆ. ದೊಡ್ಡ ದೊಡ್ಡ ಗುಂಡಿಗಳ ಸನಿಹದಲ್ಲಿ ಗುಂಡಿಗಳನ್ನು ಮುಚ್ಚಿದರೆ ಪಕ್ಕದಲ್ಲಿರುವ ಗುಂಡಿಗಳನ್ನು ಮುಚ್ಚುತ್ತಿಲ್ಲ. ಇದೀಗ ಕೋರ್ಟ್‌ ವೃತ್ತದಲ್ಲಿ ಬಿದ್ದಿರುವ ದೊಡ್ಡ ಗುಂಡಿಯನ್ನು ಈಗಾಗಲೇ ಮುಚ್ಚಲಾಗಿದೆ.

Advertisement

ಆದರೆ ಅಲ್ಲಿಯೇ ಪಕ್ಕದಲ್ಲಿರುವ ಕಿತ್ತೂರು ಚನ್ನಮ್ಮ ವೃತ್ತದಿಂದ ಕೋರ್ಟ್‌ ವೃತ್ತಕ್ಕೆ ಬರುವ ರಸ್ತೆಯಲ್ಲಿ ಬಿದ್ದಿರುವ ದೊಡ್ಡ ಗುಂಡಿ ಹಾಗೆಯೇ ಬಿಡಲಾಗಿದೆ. ಇನ್ನು ಕೋರ್ಟ್‌ ವೃತ್ತದಿಂದ ಸಾಯಿಬಾಬಾ ಮಂದಿರದ ಮುಂಭಾಗದಲ್ಲಿ ಬಿದ್ದಿರುವ ತಗ್ಗುಗಳು ಇವರಿಗೇಕೆ ಕಾಣುವುದಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಅವಳಿನಗರದಲ್ಲಿ ನಡೆಯುತ್ತಿರುವ ತೇಪೆ ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿತ್ತು. ಎಲ್ಲೆಡೆ ಧೂಳು ಎನ್ನುತ್ತಿದ್ದ ಜನರು ತೇಪೆ ಕಾರ್ಯ ಮಾಡುತ್ತಿದ್ದಾರೆ ಎಂದು ಸಂತಸ ಪಡುವಷ್ಟರಲ್ಲಿಯೇ, ಹಾಕಿರುವ ತೇಪೆ ಕಿತ್ತು ಹೋಗುತ್ತಿದೆ.

ಜನಾಕ್ರೋಶದ ನಂತರ ಪಾಲಿಕೆ ಇದೀಗ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಕೈ ಹಾಕಿದೆ. ಇಲ್ಲಿ ನೋಡಿದರೆ ಹಾಕಿದ ಎರಡೇ ದಿನಕ್ಕೆ ಡಾಂಬರ್‌ ಕಿತ್ತುಕೊಂಡು ಹೋಗುತ್ತಿದೆ. ಕಳಪೆ ಕಾಮಗಾರಿ ನಡೆದಿರುವುದು ಎದ್ದು ಕಾಣುತ್ತಿದ್ದು, ಪಾಲಿಕೆ ಕೂಡಲೇ ಎಚ್ಚೆತ್ತುಕೊಂಡು ಸರಿಯಾಗಿ ಗುಂಡಿ ಮುಚ್ಚಿಸುವ ಕೆಲಸ ಮಾಡಬೇಕು. ಕಳಪೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು.  -ಶೇಖರಯ್ಯ ಮಠಪತಿ, ಹು-ಧಾ ಆಟೋ ರಿಕ್ಷಾ ಮಾಲೀಕರು-ಚಾಲಕರ ಸಂಘದ ಅಧ್ಯಕ್ಷ

 

-ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next