Advertisement

ಯುಜಿಡಿ ಅವಾಂತರ: ಸಂಚಾರಕ್ಕೆ ಸಂಚಕಾರ ! ಓಡಾಡಲು ಪಾದಚಾರಿಗಳು-ವಾಹನ ಸವಾರರ ಪರದಾಟ

03:52 PM Oct 01, 2020 | sudhir |

ಹಳಿಯಾಳ: ಭಾರಿ ವಿರೋಧದ ನಡುವೆ ಪೊಲೀಸ್‌ ರಕ್ಷಣೆಯಲ್ಲಿ ಆರಂಭವಾಗಿದ್ದ ಒಳಚರಂಡಿ ಯೋಜನೆ ಕಾಮಗಾರಿ ಹಲವಾರು ಬಡಾವಣೆ, ಗಲ್ಲಿಗಳ ಜನರ ನೆಮ್ಮದಿ ಹಾಳು ಗೆಡವಿದ್ದು ಪ್ರತಿನಿತ್ಯ ಹಿಡಿಶಾಪಹಾಕುವಂತಾಗಿದೆ. ಕಾಮಗಾರಿ ಆರಂಭಕ್ಕೂ ಮುನ್ನ ಅಧಿಕಾರಿಗಳು ನೀಡಿದ ಭರವಸೆ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದ ಹಾಗೆ ಆಗಿರುವುದು ಅಷ್ಟೇ ಸತ್ಯವಾಗಿದೆ.

Advertisement

2019ರ ಜುಲೈನಲ್ಲಿಯೇ ಹಳಿಯಾಳದಲ್ಲಿ 76.20 ಕೋಟಿ ರೂ. ಬೃಹತ್‌ ಮೊತ್ತದ ಒಳಚರಂಡಿ ಕಾಮಗಾರಿಗೆ ಆದೇಶ ಸಿಕ್ಕಿದ್ದರೂ ಮೊದಲು ಮಳೆಯಿಂದ ಬಳಿಕ ಸಾರ್ವಜನಿಕರ ಹಾಗೂ ಮಾಜಿ ಶಾಸಕರು, ಬಿಜೆಪಿ ಹಾಗೂ ಜನಪ್ರತಿನಿಧಿಗಳ ತೀವ್ರ ಆಕ್ಷೇಪಣೆಗಳು, ವಿರೋಧಗಳು ಕೇಳಿ ಬಂದಿದ್ದರಿಂದ ಕಾಮಗಾರಿಗೆ ವಿಘ್ನ ಎದುರಾಗಿತ್ತು.

ಧಾರವಾಡದ ಸುಪ್ರದಾ ಕನ್‌ಸ್ಟ್ರಕ್ಷನ್‌ ಕಂಪೆನಿಯವರು ಈ ಕಾಮಗಾರಿಯ ಗುತ್ತಿಗೆ ಪಡೆದಿದ್ದು 3 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಅವಧಿ ನೀಡಲಾಗಿದೆ. ಹಳಿಯಾಳದಲ್ಲಿ 60 ಕಿಮೀ ಉದ್ದಗಲ ಒಳಚರಂಡಿ ವ್ಯಾಪ್ತಿಗೆ ಒಳಪಟ್ಟಿದ್ದು 2016-17ನೇ ಸಾಲಿನ ಸಮೀಕ್ಷೆ ಪ್ರಕಾರ 6 ಸಾವಿರ ಮನೆಗಳಿಗೆ ಈ ಪೈಪ್‌ಲೈನ್‌ ಜೊಡಣೆಯಾಗಲಿದೆ.

ಯೋಜನೆ ಕುರಿತು ಪಟ್ಟಣದ ಜನರಿಗೆ ಸಂಪೂರ್ಣ ಮಾಹಿತಿ ನೀಡಬೇಕು, ಸಾರ್ವಜನಿಕರ ಆಕ್ಷೇಪಣೆ, ಅಹವಾಲುಗಳನ್ನು ಆಲಿಸಿಯೇ ಬಳಿಕ ಒಳಚರಂಡಿ ಕಾಮಗಾರಿ ಆರಂಭಿಸಬೇಕು ವಿನಃ ತರಾತುರಿ ಮಾಡಬಾರದು ಎಂದು ಆಗ್ರಹಿಸಲಾಗಿತ್ತು. ಆದರೆ ಜ.6 ರಂದು ಕಾಟಾಚಾರಕ್ಕೆ ಎಂಬಂತೆ ಪಟ್ಟಣದ ಬಾಬು ಜಗಜೀವನರಾಮ್‌ ಭವನದಲ್ಲಿ ತರಾತುರಿಯಲ್ಲಿ ಸಾರ್ವಜನಿಕರ ಆಕ್ಷೇಪಣೆ, ಅಹವಾಲು ಸಭೆ ಕರೆದಿದ್ದರು. ಆದರೆ ಅಂದು ಸಭೆ ವಿಫಲವಾಗಿತ್ತು.

ಈ ಸಭೆಯಲ್ಲಿ ಹಳಿಯಾಳ ತಹಶೀಲ್ದಾರ್‌ ಅವರು ಹಲವು ಭರವಸೆಗಳನ್ನು ನೀಡಿದ್ದರು. ಆದರೆ ಭರ್ತಿ 9 ತಿಂಗಳು ಕಳೆದರು ಈ ಬಗ್ಗೆ ಚಕಾರವೆತ್ತದೆ ಸುಮ್ಮನೆ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದ್ದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Advertisement

ಬಡವರಿಗೆ ಆಗುವ ಆರ್ಥಿಕ ಹೊರೆ ತಪ್ಪಿಸಲು ಜನಪ್ರತಿನಿಧಿಗಳು ಹಾಗೂ ಪುರಸಭೆಯವರು ಕಾನೂನಿನ ಚೌಕಟ್ಟಿನಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಪ್ರಮುಖವಾಗಿ ಸದ್ಯ ಹಳಿಯಾಳದಲ್ಲಿ ಕಾಮಗಾರಿ ನಡೆಸುತ್ತಿರುವ ಕಂಪೆನಿಯವರು ಬೆರೆ ಜಿಲ್ಲೆಯಲ್ಲಿ ನಡೆಸಿದ ಕಾಮಗಾರಿ ವೀಕ್ಷಣೆಗೆ ಕರೆದುಕೊಂಡು ಹೊಗುವ ಭವರಸೆ ನೀಡಿದ್ದರು. ಆದರೆ ಈ ಸಭೆ ನಡೆದು ಬರೊಬ್ಬರಿ ಒಂಬತ್ತು ತಿಂಗಳಾದರು ಈ ಬಗ್ಗೆ ಚಕಾರವೆತ್ತದೆ ಇರುವುದು ಸಾಕಷ್ಟು ಸಂಶಯಕ್ಕೆ ಕಾರಣವಾಗಿದೆ.

ಈಗಾಗಲೇ ಕಾಮಗಾರಿ ಪ್ರಾರಂಭವಾಗಿ 7 ತಿಂಗಳು ಕಳೆದಿವೆ. ಪಟ್ಟಣದ ದೇಶಪಾಂಡೆ ಆಶ್ರಯ ಬಡಾವಣೆಯಿಂದ ಆರಂಭವಾದ ಕಾಮಗಾರಿ ಚವ್ವಾಣ ಪ್ಲಾಟ್‌, ಬಸವನಗರ, ಸದಾಶಿವನಗರ, ಕೆಎಚ್‌ಬಿ ಕಾಲೋನಿ(ಆನೆಗುಂದಿ ಬಡಾವಣೆ) ಸೇರಿದಂತೆ ಇನ್ನು ಹಲವು ಕಡೆಗಳಲ್ಲಿ ನಡೆಯುತ್ತಿದ್ದು ಇಲ್ಲಿ ಒಳಚರಂಡಿ ಪೈಪ್‌ಲೈನ್‌ಗಾಗಿ ಅಗೆದ ರಸ್ತೆಗಳೆಲ್ಲ ಕೆಸರಿನ ಕಚ್ಚಾ ರಸ್ತೆಗಳಾಗಿ, ಹೊಂಡಗಳ ಆಗರವಾಗಿ ಮಾರ್ಪಟ್ಟಿವೆ.

ಹಲವು ಬಡಾವಣೆಗಳಲ್ಲಂತೂ ವಾಹನ ಸವಾರಿ ದೊಡ್ಡ ಸವಾಲೇ ಆಗಿದ್ದು ಹೆಚ್ಚು ಕಮ್ಮಿ ಆದರೂ ಬಿದ್ದು ಗಂಭೀರ ಸ್ವರೂಪದ ಗಾಯಗಳನ್ನು ಮಾಡಿಕೊಳ್ಳುವುದು ಕಟ್ಟಿಟ್ಟ ಬುತ್ತಿಯಾಗಿದೆ.

ಈಗಾಗಲೇ 60 ಕಿಮೀ ಉದ್ದಗಲದಲ್ಲಿ 6 ಕಿಮೀ ಕಾಮಗಾರಿ ನಡೆಸಲಾಗಿದೆ. ಪ್ರಸಕ್ತ ಮಳೆಗಾಲದಲ್ಲಂತೂ ಸಾಕಷ್ಟು ಜನ ಕಾಮಗಾರಿ ನಡೆಸುವ ಸ್ಥಳಗಳಲ್ಲಿ ಬಿದ್ದು ಯಾತನಾಮಯ ದಿನಗಳನ್ನು ಕಳೆಯುತ್ತಿದ್ದಾರೆ. ಕೆಲವೆಡೆ ಕಾಟಾಚಾರಕ್ಕೆ ಎಂಬಂತೆ ಜಲ್ಲಿಕಲ್ಲು(ಖಡಿ)ಗಳನ್ನು ಹಾಕಲಾಗಿದ್ದು ಪ್ರತಿನಿತ್ಯ ಈ ಭಾಗದ ಜನರು ಮನೆಯಿಂದ ಹೊರಗೆ ಕಾಲಿಡಲು ಭಯಪಡಬೇಕಾದ ಸನ್ನಿವೇಶಗಳು ನಿರ್ಮಾಣವಾಗಿದೆ. ಇದರಿಂದ ಜನ ಹಿಡಿಶಾಪ ಹಾಕುತ್ತಿದ್ದಾರೆ. ವಿಚಿತ್ರವೆಂದರೆ ಕಾಮಗಾರಿ ಇನ್ನೂ ಪ್ರಾರಂಭವಾಗಿದೆ ಅಷ್ಟೇ ಹಲವೆಡೆ ಮ್ಯಾನಹೋಲ್‌-ಚೇಂಬರ್‌ಗಳಿಂದ ನೀರು ತುಂಬಿ ಹೊರಗೆ ಹರಿಯುತ್ತಿರುವುದು ಮುಂದೆ ಮನೆಯ ಪೈಪ್‌ಲೈನ್‌ ಜೋಡಿಸಿದ ಬಳಿಕ ಒಳಚರಂಡಿ ಯೋಜನೆ ಯಾವ ರೀತಿಯ ಫಲಿತಾಂಶ ನೀಡಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.

– ಯೋಗರಾಜ್‌.ಎಸ್‌.ಕ

Advertisement

Udayavani is now on Telegram. Click here to join our channel and stay updated with the latest news.

Next