Advertisement

ನರೇಗಾದಲ್ಲಿ ಕಳಪೆ ಸಾಧನೆ: ಅಸಮಾಧಾನ

05:32 PM Jul 07, 2018 | Team Udayavani |

ಚಿತ್ರದುರ್ಗ: ನರೇಗಾದಲ್ಲಿ ಪರಿಣಾಮಕಾರಿ ಕಾಮಗಾರಿ ಮಾಡಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಜಿಲ್ಲಾ ಪಂಚಾಯತ್‌ ಇಂದು ಎಲ್ಲ ವಿಭಾಗದಲ್ಲೂ ಅತ್ಯಂತ ಕಳಪೆ ಸಾಧನೆ ಮಾಡಲಾಗುತ್ತಿದೆ ಎಂದು ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಇಲ್ಲಿನ ಜಿಪಂ ಮಿನಿ ಸಭಾಂಗಣದಲ್ಲಿ ಶುಕ್ರವಾರ ನಡೆದ 2018-19ನೇ ಸಾಲಿನ ನರೇಗಾ ಯೋಜನೆಯ ಕ್ರಿಯಾ ಯೋಜನೆ ಹಾಗೂ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾಟಚಾರಕ್ಕೆ ಕೇವಲ ಕ್ರಿಯಾ ಯೋಜನೆ ಮಾಡಿ ಅನುಮೋದನೆ ಪಡೆದರೆ ಸಾಧನೆ ಮಾಡಿದಂತೆ ಆಗುವುದಿಲ್ಲ. ತಾಪಂ ಇಒಗಳು, ಗ್ರಾಪಂ ಪಿಡಿಒ, ಕಾರ್ಯದರ್ಶಿಗಳು ಏನು ಕೆಲಸ ಮಾಡುತ್ತಾರೆ ಎಂದು ಅವರು ತರಾಟೆಗೆ ತೆಗೆದುಕೊಂಡರು. 

ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲೂ ಕನಿಷ್ಠ ಒಂದು ಚೆಕ್‌ ಡ್ಯಾಂ ನಿರ್ಮಾಣ ಕಡ್ಡಾಯವಾಗಿ ಆಗಬೇಕು. ಕಳೆದ ಬಾರಿ 682 ಚೆಕ್‌ ಡ್ಯಾಂಗಳ ನಿರ್ಮಾಣಕ್ಕೆ ಕೇವಲ 128 ಚೆಕ್‌ ಡ್ಯಾಂ ನಿರ್ಮಾಣ ಮಾಡುವ ಮೂಲಕ ರೈತ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಫಲಾನುಭವಿಗಳು ಶೌಚಾಲಯ, ದನಗಳ ಕೊಟ್ಟಿಗೆ, ಒಕ್ಕಲು ಕಣ ನಿರ್ಮಾಣ ಮಾಡಿಕೊಂಡರೆ ಬಿಲ್‌ ಪಾವತಿಸುತ್ತಿಲ್ಲ, ಕೂಲಿ ನೀಡುತ್ತಿಲ್ಲ, ಕೂಲಿ ಕೊಡಿಸಿ, ಬಿಲ್‌ ಕೊಡಿಸಿ ಎಂದು ನಿತ್ಯ ಜಿಪಂಗೆ ಅಲೆಯುತ್ತಿದ್ದಾರೆ. ಹಾಗಾದರೆ ಇಒ, ಪಿಡಿಒ ಇತರೆ ಅಧಿಕಾರಿಗಳ ಕೆಲಸವೇನು? ಚೆಕ್‌ ಡ್ಯಾಂ ಕಳೆದು ಹೋಗಿವೆ ಹುಡುಕಿಕೊಡಿ ಎಂದು ಮಾಧ್ಯಮಗಳಲ್ಲಿ ಬರುತ್ತಿವೆ. ಇದಕ್ಕೆ ಯಾರೂ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
 ಕೂಲಿ ಕೊಟ್ಟಿಲ್ಲ, ಶೌಚಾಲಯ, ದನಗಳ ಕೊಟ್ಟಿಗೆ ಬಿಲ್‌ ಕೊಟ್ಟಿಲ್ಲ ಎನ್ನುವ ದೂರು ಬರುವಂತಿಲ್ಲ, ಯಾರೊಬ್ಬರೂ ಸಬೂಬು ಹೇಳುವಂತಿಲ್ಲ. ಕೃಷಿ, ತೋಟಗಾರಿಕೆ ಇಲಾಖೆ ಅಕಾರಿಗಳು ಹೆಚ್ಚಿನ ಕಾಮಗಾರಿ ತೆಗೆದುಕೊಂಡು ಪರಿಣಾಮಕಾರಿ ಕೆಲಸ ಮಾಡಬೇಕು ಎಂದು ಜಿಪಂ ಸಿಇಒ ಪಿ.ಎನ್‌. ರವೀಂದ್ರ ಅವರಿಗೆ ತಾಕೀತು ಮಾಡಿದರು.

Advertisement

ಗಂಗಾ ಕಲ್ಯಾಣ ಯೋಜನೆಯಡಿ ಹೆಚ್ಚಿನ ಫಲಾನುಭವಿಗಳಿಗೆ ಕೊಳವೆ ಬಾವಿ ಕೊರೆಯಿಸಿ ಕೊಡಲಾಗಿದೆ. ಇವರೆಲ್ಲರೂ ಬಹುತೇಕ ಸಣ್ಣ ರೈತರು ಮತ್ತು ಬಡ ಕುಟುಂಬದಿಂದ ಬಂದವರಾಗಿದ್ದು, ಇವರಿಗೆ ಕೃಷಿ ಹೊಂಡ ನಿರ್ಮಾಣಕ್ಕೆ, ಹನಿ ನೀರಾವರಿಗೆ, ಮೀನು ಸಾಕಾಣಿಕೆ ಮಾಡಲು, ತೋಟಗಾರಿಕೆ ಅಭಿವೃದ್ಧಿ ಪಡಿಸಲು ಉತ್ತೇಜನ ನೀಡಬೇಕು. ಪಶುಭಾಗ್ಯ ಯೋಜನೆ ಅಡಿ ಹಸುಗಳನ್ನು ಕೊಟ್ಟು ಸ್ವಾವಲಂಬಿ ಜೀವನ ಮಾಡುವಂತೆ ದಾರಿ ಮಾಡಿಕೊಡಬೇಕು. ಬಡವರ ಬಗ್ಗೆ ಕನಿಷ್ಠ ಕಾಳಜಿ ಇರಬೇಕು ಎಂದು ಅಧ್ಯಕ್ಷರು ಒತ್ತಾಯಿಸಿದರು.

ನರೇಗಾ ಯೋಜನೆ ಅಡಿಯಲ್ಲಿ ಚೆಕ್‌ ಡ್ಯಾಂ, ಗೋಕಟ್ಟೆ, ಕೃಷಿ ಹೊಂಡಗಳ ನಿರ್ಮಾಣ ಸೇರಿದಂತೆ ಮಣ್ಣು ಮತ್ತು ನೀರು ಸಂರಕ್ಷಣೆಯಂತಹ ಉತ್ತಮ ಕಾಮಗಾರಿಗಳನ್ನು ಪ್ರತಿ ಗ್ರಾಮದಲ್ಲೂ ತೆಗೆದುಕೊಳ್ಳಬೇಕು. ಮಳೆ ಕೊಯ್ಲು ಮಾಡಿದರೆ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು. 

ಚೆಕ್‌ ಡ್ಯಾಂ, ಗೋಕಟ್ಟೆ, ಕೃಷಿ ಹೊಂಡಗಳನ್ನು ಎತ್ತರ ಪ್ರದೇಶದಲ್ಲಿ ಮಾಡಬೇಡಿ, ನೀರು ಹರಿದು ಬರುವಂತ ತಗ್ಗಿನ ಪ್ರದೇಶದ ಆಯ್ಕೆ ಮಾಡಿಕೊಂಡು ಕಾಮಗಾರಿ ಮಾಡಬೇಕು. ಹೆಚ್ಚು ಜಲಾನಯನ ಪ್ರದೇಶವಾಗಿರಬೇಕು. ಅಂತಹ ಪ್ರದೇಶಗಳನ್ನ ಚೆಕ್‌ ಡ್ಯಾಂ, ಗೋಕಟ್ಟೆ ನಿರ್ಮಾಣ ಮಾಡಲು ಮುಂದಾಗಿ ಎಂದು ಸಿಇಒ ರವೀಂದ ಸೂಚನೆ ನೀಡಿದರು.
 
ನರೇಗಾ ಎಂದರೆ ಅದ್ವಾನದ ಕೆಲಸವಾಗಿದೆ. ಕಣ್ಣೊರೆಸೋ ಕೆಲಸ ಮಾಡಬೇಡಿ. ಸರ್ಕಾರಕ್ಕೆ ಉತ್ತರ ನಾವು ಹೇಳಬೇಕಾಗುತ್ತದೆ. ಇಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಬಡವರು ಮನೆಗಳನ್ನು ನಿರ್ಮಾಣ ಮಾಡಿಕೊಂಡರೆ 90 ಮಾನವ ದಿನಗಳ ಕೂಲಿ ಕೊಡಲು ಅವಕಾಶವಿದೆ. 

ಕನಿಷ್ಠ 20 ಸಾವಿರ ರೂ. ಅವರಿಗೆ ಸಿಗಲಿದೆ. ಆದರೆ, ಎನ್‌ಎಂಆರ್‌ ತೆಗೆಯಲು ಏಕೆ ಹಿಂದೇಟು ಹಾಕುತ್ತೀರಿ, ಬಡವರ ಕೆಲಸ ಮಾಡಲು ಇಷ್ಟವಿಲ್ಲವೇ ಎಂದು ಇಒ, ತಾಪಂ ಎಡಿ, ಪಿಡಿಒಗಳ ವಿರುದ್ಧ ಸಿಇಒ ರವೀಂದ್ರ ಹರಿಹಾಯ್ದರು.

ಯಾವ ಇಲಾಖೆ ಅಧಿಕಾರಿ ನರೇಗಾ ಒಗ್ಗೂಡುಸುವಿಕೆ ಕಾಮಗಾರಿ ಮಾಡುವುದಿಲ್ಲ. ಅಂತಹ ಅಧಿಕಾರಿಗಳ ವಿರುದ್ಧ ಕಾನೂನಾತ್ಮಕ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಇದು ಕೇವಲ ಎಚ್ಚರಿಕೆ ಎಂದುಕೊಳ್ಳಬೇಡಿ, ಮೈಮರೆತರೆ ಶಿಕ್ಷೆ ತಪ್ಪಿದಲ್ಲ ಎಂದು ಸಿಇಒ ಎಚ್ಚರಿಸಿದರು.

ಜಿಪಂ ಮುಖ್ಯ ಯೋಜನಾಧಿಕಾರಿ ಶಶಿಧರ್‌, ಉಪ ಕಾರ್ಯದರ್ಶಿ ಬಸವರಾಜಪ್ಪ, ಇಒ, ಎಡಿ, ಪಿಡಿಒಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next