ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಕೊಳವೆ ಬಾವಿಗಳ ನೀರಿನ ಅಶ್ರಯದಲ್ಲಿ ರೈತರು ಬೆಳೆದಿರುವ ಕಡ್ಲೆಕಾಯಿಗೆ ಈಗ ಮಾರುಕಟ್ಟೆ ಪ್ರವೇಶಿಸಿದ್ದು, ಖರೀದಿಗೆ ನಾಗರಿಕರು ಮುಗಿಬಿದ್ದಿರುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಮುಂಗಾರು ಆರಂಭದಲ್ಲಿ ಮಳೆ ಕೈಕೊಟ್ಟ ಪರಿಣಾಮ ಎಲ್ಲೆಡೆ ಬರ ಆವರಿಸಿದ್ದರಿಂದ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೆಲಗಲಡೆ ಬಿತ್ತನೆ ಆಗಿರಲಿಲ್ಲ. ಸತತ ಬರದಿಂದ ಜಿಲ್ಲೆಯಲ್ಲೀಗ ಕಡಲೇ ಕಾಯಿಯನ್ನು ರೈತರೇ ಕಾಸು ಕೊಟ್ಟು ಖರೀದಿಸುವಂತಾಗಿದೆ. ಪ್ರತಿ ವರ್ಷ ಜೂನ್, ಜುಲೈ ತಿಂಗಳ ಅಂತ್ಯಕ್ಕೆ ನೆಲಗಡಲೆ ಬಿತ್ತನೆ ಕಾರ್ಯ ಮುಗಿದು ಹೋಗುತ್ತಿತ್ತು. ಅಕ್ಟೋಬರ್, ನವೆಂಬರ್ ಮೊದಲ ವಾರದಲ್ಲಿ ರೈತರು ಬೆಳೆಯುತ್ತಿದ್ದ ನೆಲಗಡಲಡೆ ಮಾರುಕಟ್ಟೆ ಪ್ರವೇಶಿಸುತ್ತಿತ್ತು. ಬರದ ಹಿನ್ನೆಲೆ ಕೊಳವೆ ಬಾವಿಯಿಂದ ಬೆಳೆದ ಕಡಲೆ ಮಾರುಕಟ್ಟೆ ಪ್ರವೇಶಿಸದ್ದು ಬೆಲೆ ಕೊಳ್ಳುವವರ ಕೈ ಕಚ್ಚುತ್ತಿದೆ.
ರೈತನ ಅಳಲು: ಪ್ರತಿ ವರ್ಷ ನಾವು ಒಂದು ಎಕರೆಯಲ್ಲಿ ಕಡ್ಲೆಕಾಯಿಗೆ ಬೆಳೆಯುತ್ತಿದ್ದೆವು. ಆದರೆ ಸತತ ನಾಲ್ಕೈದು ವರ್ಷಗಳಿಂದ ಸಕಾಲಕ್ಕೆ ಮಳೆಯಾಗದೇ ಇರುವ ಕಾರಣ ನೆಲಗಡಲೆ ಬೆಳೆಯುವುದನ್ನು ಕೈ ಬಿಟ್ಟಿದ್ದೇವೆ. ಈಗ ನಾವೇ ಮಾರುಕಟ್ಟೆಯಲ್ಲಿ ಕಡಲೇ ಕಾಯಿ ಖರೀದಿಸಿ ತಿನ್ನುವಂತಾಗಿದೆ ಎನ್ನುತ್ತಾರೆ ಜಿಲ್ಲೆಯ ಆರೂರು ಗ್ರಾಮದ ರೈತ ರಾಮಣ್ಣ.
ಬೆಲೆ ಕುಸಿಯಬಹುದು: ಮಾರುಕಟ್ಟೆಗೆ ಸದ್ಯ ಕಡಿಮೆ ಪ್ರಮಾಣದಲ್ಲಿ ಕಡ್ಲೆಕಾಯಿ ಬರುತ್ತಿದೆ. ಬೆಳಗ್ಗೆಯೆ ಎದ್ದು ಹೋದರೆ ಮಾತ್ರ ಮಾರುಕಟ್ಟೆಯಲ್ಲಿ ಕಡಲೇ ಕಾಯಿ ಸಿಗುತ್ತದೆ. ಇಲ್ಲದಿದ್ದರೆ ಸಿಗುವುದು ಕಷ್ಟ ಎನ್ನುತ್ತಾರೆ ಕಡಲೇ ಕಾಯಿ ವ್ಯಾಪಾರಿ ಬಾಬು. ಸದ್ಯ ಕೆ.ಜಿ 70 ರೂ ರಿಂದ 80 ರೂ,ಗೆ ಮಾರಾಟಗೊಳ್ಳುತ್ತಿದೆ. ಎಲ್ಲವನ್ನು ಗ್ರೇಡಿಂಗ್ ಮಾಡಿಯೇ ಮಾರಾಟ ಮಾಡುತ್ತಿದ್ದೇವೆ. ಇನ್ನೂ ಸ್ಪಲ್ಪ ದಿನ ಹೋದರೆ ಆವಕ ಹೆಚ್ಚಾದರೆ ಬೆಲೆ ಕುಸಿಯಬಹುದು ಎಂದರು.
ಬರೀ 17 ಸಾವಿರ ಹೇಕ್ಟರ್ ಬಿತ್ತನೆ: ಕೃಷಿ ಇಲಾಖೆ ಈ ಬಾರಿ ಜಿಲ್ಲಾದ್ಯಂತ ಬರೋಬ್ಬರಿ 32.750 ಹೇಕ್ಟರ್ ಪ್ರದೇಶದಲ್ಲಿ ನೆಲಗಡಲೆಯ ಬಿತ್ತನೆ ಗುರಿ ಹೊಂದಿತ್ತು. ಆದರೆ ಜೂನ್, ಜುಲೈ ತಿಂಗಳಲ್ಲಿ ಮಳೆ ಸಕಾಲದಲ್ಲಿ ಆಗದೇ ಜಿಲ್ಲೆಯಲ್ಲಿ ಬರೀ ಇದುವರೆಗೂ 17,163 ಹೇಕ್ಟರ್ ಮಾತ್ರ ನೆಲಗಡಲೆ ಬಿತ್ತನೆಯಾಗಿದೆ.
ಆ ಪೈಕಿ ಬಾಗೇಪಲ್ಲಿ ತಾಲೂಕಿನಲ್ಲಿ 11,521 ಹೇಕ್ಟರ್‌ಗೆ 5,123, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 2,441 ಹೇಕ್ಟರ್ ಪೈಕಿ ಬರೀ 353 ಹೇಕ್ಟರ್‌ನಲ್ಲಿ ಬಿತ್ತನೆ ಆಗಿದ್ದರೆ ಚಿಂತಾಮಣಿ ತಾಲೂಕಿನಲ್ಲಿ 9.818 ಹೇಕ್ಟರ್ ಪೈಕಿ 6,308 ಹೇಕ್ಟರ್‌ನಲ್ಲಿ ಬಿತ್ತನೆಯಾಗಿದೆ. ಇನ್ನೂ ಗೌರಿಬಿದನೂರು ತಾಲೂಕಿನಲ್ಲಿ 4,906 ಹೇಕ್ಟರ್ ಪೈಕಿ 2,255 ಹೇಕ್ಟರ್, ಗುಡಿಬಂಡೆಯಲ್ಲಿ 2,674 ಹೇಕ್ಟರ್ ಪೈಕಿ 2,314 ಹೇಕ್ಟರ್ ಹಾಗೂ ಶಿಡ್ಲಘಟ್ಟದಲ್ಲಿ 1,290 ಹೇಕ್ಟರ್ ಪೈಕಿ ಬರೀ 810 ಹೇಕ್ಟರ್‌ನಲ್ಲಿ ಮಾತ್ರ ನೆಲಗಡಲೆ ಬಿತ್ತನೆಯಾಗಿದೆ.
ಕಾಗತಿ ನಾಗರಾಜಪ್ಪ