ಶಹಾಬಾದ: ನಗರದಿಂದ ಹೊರಡುವ ಎಲ್ಲ ಪ್ರಮುಖ ರಸ್ತೆಗಳು ಕಳಪೆ ಕಾಮಗಾರಿಯಿಂದ ಹದಗೆಟ್ಟಿವೆ ಹಾಗೂ ಪ್ರಗತಿ ಕಾಲೋನಿ ಯೋಜನೆ ಹಣ ದುರ್ಬಳಕೆಯಾಗಿದ್ದು, ಈ ಕುರಿತಂತೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಬುಧವಾರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನಾಕಾರರು ಹರಿದು ಚಿಂದಿಯಾಗಿರುವ ರಸ್ತೆಯ ಮೇಲೆ ಕುಳಿತುಕೊಂಡು ಪ್ರತಿಭಟಿಸಿ, ಒಮ್ಮೆ ಅಧಿ ಕಾರಿಗಳು ರಸ್ತೆ ಸಂಪೂರ್ಣ ವೀಕ್ಷಿಸುವಂತೆ ಪಟ್ಟು ಹಿಡಿದರು. ಇದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ನಂತರ ಮಾತನಾಡಿದ ಪ್ರತಿಭಟನಾ ಕಾರರು, ನಗರದ ವಾಡಿ ವೃತ್ತದಿಂದ ಕನಕದಾಸ ವೃತ್ತ ಹಾಗೂ ತೊನಸನಹಳ್ಳಿ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದೆ. ವಾಡಿ ವೃತ್ತದ ಸ್ವಾಗತ ಕಮಾನ್ ಸಮೀಪದಿಂದ ರೈಲ್ವೆ ಸೇತುವೆ ವರೆಗಿನ ಸುಮಾರು 300ಮೀ. ರಸ್ತೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ಸುಮಾರು 76ಲಕ್ಷ ರೂ. ಅನುದಾನ ಒದಗಿಸಲಾಗಿದೆ. ಆದರೆ ಗುತ್ತಿಗೆದಾರ ತರಾತುರಿಯಲ್ಲಿ ಕಳಪೆ ಕಾಮಗಾರಿ ಮಾಡಿ ಬಿಲ್ ಎತ್ತಿ ಹಾಕಲು ಮುಂದಾಗಿದ್ದಾನೆ. ಅಲ್ಲದೇ ನಗರಸಭೆಯಿಂದ ನಗರೋತ್ಥಾನ ಯೋಜನೆಯ 3 ಹಂತದಲ್ಲಿ ಸುಮಾರು 4ಕೋಟಿ 17ಲಕ್ಷ ರೂ. ಅನುದಾನದಲ್ಲಿ ಬಸವೇಶ್ವರ ವೃತ್ತದಿಂದ ಕನಕದಾಸ ವೃತ್ತದವರೆಗಿನ ರಸ್ತೆ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಕನಕದಾಸ ವೃತ್ತದಿಂದ ತೊನಸನಹಳ್ಳಿ(ಎಸ್) ಗ್ರಾಮದ ರಾಜ್ಯ ಹೆದ್ದಾರಿ ರಸ್ತೆಗೆ ಕೋಟಿಗಟ್ಟಲೇ ಹಣವನ್ನು ಒದಗಿಸಲಾಗಿದೆ. ಇದು ಕೂಡ ಕಳಪೆ ಮಟ್ಟದ ಕಾಮಗಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿ ಕಾಲೋನಿಯ ಮುಖ್ಯ ಉದ್ದೇಶಕ್ಕೆ ಕೊಡಲಿಪೆಟ್ಟು ಬಿದ್ದಂತಾಗಿದೆ. ದಲಿತರಿಗೆ ಮೀಸಲಿಟ್ಟ ಹಣವನ್ನು ಎಸ್‌ಸಿ/ ಎಸ್‌ಟಿ ಬಡಾವಣೆಯಲ್ಲಿ ಕಾಮಗಾರಿ ಗಳನ್ನು ಮಾಡದೇ ಬೇರೆ ಬಡಾವಣೆಗಳಲ್ಲಿ ಕೆಲಸ ಮಾಡಿಸಿದ್ದಾರೆ. ಆದ್ದರಿಂದ ಎಸ್‌ಸಿ/ ಎಸ್‌ಟಿ ಕಾಯ್ದೆ ಅಡಿಯಲ್ಲಿ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಬೇಕೆಂದು ಎಂದು ಒತ್ತಾಯಿಸಿದರು.
ನಂತರ ಗ್ರೇಡ್-2 ತಹಶೀಲ್ದಾರ್ ಗುರುರಾಜ ಸಂಗಾವಿ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಕರಾದಸಂಸ ಜಿಲ್ಲಾ ಮುಖಂಡ ಕೃಷ್ಣಪ್ಪ ಕರಣಿಕ್, ತಾಲೂಕು ಸಂಚಾಲಕ ಮಹಾದೇವ ತರನಳ್ಳಿ, ತಾಲೂಕಾ ಸಂ.ಸಂಚಾಲಕರಾದ ತಿಪ್ಪಣ್ಣ ಧನ್ನೇಕರ್, ಮಹಾದೇವ ಮೇತ್ರೆ, ಹೋಬಳಿ ಸಂಚಾಲಕ ಲಕ್ಷ್ಮಣ ಕೊಲ್ಲೂರ್, ನಾಗೇಂದ್ರ ಪಾಳಾ, ನಾಗರಾಜ ಸಿಂಘೆ, ರಾಮಕುಮಾರ ಸಿಂಘೆ, ಮಲ್ಲಿಕಾರ್ಜುನ ಜಲಂಧರ್, ಶರಣು ಧನ್ನೇಕರ್ ಇತರರು ಇದ್ದರು.