Advertisement

ಬಡ ರಾಜನ ಫಿಲಾಸಫಿ

12:30 AM Feb 12, 2019 | |

“ಜಗತ್ತಿನ ಅತ್ಯಂತ ಖುಷಿಯ ಮನುಷ್ಯ’ ಎನ್ನುವ ಖ್ಯಾತಿ ಹೊಂದಿರುವ ಈ ರಾಜನ ಮುಂದೆ ಸೆಲ್ಫಿ ತೆಗೆದುಕೊಳ್ಳಲೆಂದೇ ಜನರ ದೊಡ್ಡ ಕ್ಯೂ ನಿಂತಿರುತ್ತೆ. ರಾಜ ಅಂದಮಾತ್ರಕ್ಕೆ, ಈತನ ಅರಮನೆಯೇನು, ಊರಿನಗಲ ಹಬ್ಬಿಲ್ಲ; ಒಂದು ಸಮುದ್ರ ತೀರದಲ್ಲಿ ಎಂಟತ್ತು ಅಡಿ ಮಾತ್ರವೇ. ಅಲ್ಲಿ ತನ್ನ ಕೈಯ್ನಾರೆ ಕಟ್ಟಿದ ಮರಳಿನ ಗೂಡೇ ಈತನ ಪಾಲಿಗೆ ಪ್ಯಾಲೇಸು…

Advertisement

ಹಣ- ಸಂಪತ್ತು ಇದ್ದಲ್ಲಿ, ಖುಷಿಯೂ ಗಿಫ್ಟ್ನಂತೆ ಇರುತ್ತೆ ಅಂತ ನಂಬಿರೋ ಜಗತ್ತು ನಮ್ಮದು. “ಜಗತ್ತಿನ ಅತ್ಯಂತ ಖುಷಿಯ ಮನುಷ್ಯ ಸಿಕ್ಕರೆ, ಅದು ಪ್ಯಾಲೇಸ್‌ನಲ್ಲೇ’ ಎಂದು ಪಕ್ಕಾ ಹೇಳುವವರೂ ಇದ್ದಾರೆ. ಅವರ ಈ ತರ್ಕಕ್ಕೆ ಕಾರಣವೂ ಇಲ್ಲದಿಲ್ಲ. ಚಿನ್ನದ ಸಿಂಹಾಸನ, ರತ್ನಾಭರಣಗಳ ಕಿರೀಟ, ಖಜಾನೆಯನ್ನು ತುಂಬಿಕೊಂಡ ಸಂಪತ್ತು; ರಾಜನ ಈ ವೈಭೋಗ- ಅರಮನೆ- ಸಾಮ್ರಾಜ್ಯಕ್ಕೆ ಬೆಂಗಾವಲಾಗಿ ನಿಂತ ದೊಡ್ಡ ಸೈನ್ಯ… ಇವೆಲ್ಲ ಸಿರಿವೈಭವಗಳನ್ನು ತನ್ನೊಂದಿಗೆ ಇಟ್ಟುಕೊಂಡ ರಾಜ, ಇನ್ನೇನು ತಾನೇ ಕಷ್ಟಪಡಲು ಸಾಧ್ಯ?

ಆದರೆ, ಇವ್ಯಾವೂ ಇಲ್ಲದೆಯೂ ಒಬ್ಬ ರಾಜ ಈ ಭೂಮಿ ಮೇಲೆ ಬದುಕುತ್ತಿದ್ದಾನೆ; ಬಹಳ ಖುಷಿ ಖುಷಿಯಲ್ಲಿ ಜೀವಿಸುತ್ತಿದ್ದಾನೆ ಅನ್ನೋದು ನಿಮಗೆ ಗೊತ್ತೇ? “ಜಗತ್ತಿನ ಅತ್ಯಂತ ಖುಷಿಯ ಮನುಷ್ಯ’ ಎನ್ನುವ ಖ್ಯಾತಿ ಹೊಂದಿರುವ ಈ ರಾಜನ ಮುಂದೆ ಸೆಲ್ಫಿ ತೆಗೆದುಕೊಳ್ಳಲೆಂದೇ ಜನರ ದೊಡ್ಡ ಕ್ಯೂ ನಿಂತಿರುತ್ತೆ. ರಾಜ ಅಂದಮಾತ್ರಕ್ಕೆ, ಈತನ ಅರಮನೆಯೇನು, ಊರಿನಗಲ ಹಬ್ಬಿಲ್ಲ; ಒಂದು ಸಮುದ್ರ ತೀರದಲ್ಲಿ ಎಂಟತ್ತು ಅಡಿ ಮಾತ್ರವೇ. ಅಲ್ಲಿ ತನ್ನ ಕೈಯ್ನಾರೆ ಕಟ್ಟಿದ ಮರಳಿನ ಗೂಡೇ ಈತನ ಪಾಲಿಗೆ ಪ್ಯಾಲೇಸು. ಅದರೆದುರು ಸಿಂಹಾಸನದಂತೆ ಇಟ್ಟ ಒಂದು ಲಟ್ಕಾಸಿ ಮರದ ಖುರ್ಚಿಯ ಮೇಲೆ ನಗುತ್ತಾ ಕೂತಿರುತ್ತಾನೀತ. ಚಿನ್ನದಂತೆ ಕಾಣುವ ಯಾವುದೋ ಲೋಹದಿಂದ ಮಾಡಿದ ವಸ್ತುವನ್ನು, ತಲೆಮೇಲೆ ಧರಿಸಿ, ಅದೇ ಕಿರೀಟವೆಂಬಂತೆ ಸಂಭ್ರಮಿಸುತ್ತಿರುತ್ತಾನೆ. ಕಳೆದ 22 ವರುಷಗಳಿಂದ ಇವನ ಈ ಅವತಾರ ನೋಡಿ, “ಸ್ಯಾಂಡ್‌ ಕಿಂಗ್‌’ ಅಂತಲೇ ಅಲ್ಲಿನ ಜನ ಕರೆಯುತ್ತಾರೆ.

ಮಾರ್ಸಿಯೋ ಮಿಝೇಲ್‌! ರಿಯೋ ಡಿ ಜನೈರೋದ “ಬರ್ರಾ ದ ತಿಜುಕಾ’ ಬೀಚ್‌ಗೆ ಹೋದರೆ, ಅಲ್ಲಿನ ಈ ರಾಜನ ಮರಳಿನ ಸಾಮ್ರಾಜ್ಯ ಕಾಣಿಸುತ್ತೆ. “ಯಾಕೆ ಹೀಗ್‌ ಆಡ್ತಾನೆ ಇಂವ?’ ಅಂತ ಇವನ ಬುದ್ಧಿಮತ್ತೆಯನ್ನು ಶಂಕಿಸಬೇಡಿ. ಈತ ಒಬ್ಬ ಪುಸ್ತಕ ವ್ಯಾಪಾರಿ. ದಿನವಿಡೀ ತನ್ನ ಗೂಡಿನಲ್ಲಿ ಓದುತ್ತಾ, ಸಂಜೆ ಆಯ್ತು ಎಂದಾಗ, ಪುಸ್ತಕವನ್ನು ಮಾರುವ ಬಡಜೀವಿ. ಒಮ್ಮೆ ಬ್ರೆಜಿಲ್‌ನ ರಾಜನನ್ನು ಈತ ಭೇಟಿಯಾಗಲು ಹೋಗಿದ್ದನಂತೆ. ಮಾರ್ಸಿಯೋದ ಹರಕು ಪೋಷಾಕು ನೋಡಿ, ಸೆಕ್ಯೂರಿಟಿ ಗಾರ್ಡ್‌ಗಳು ಈತನನ್ನು ಒಳಗೇ ಸೇರಿಸಲಿಲ್ಲವಂತೆ. ಮಾರ್ಸಿಯೋ ಅಂದೇ ನಿರ್ಧರಿಸಿಬಿಟ್ಟ… ತಾನೇಕೆ ಒಂದು ಅರಮನೆ ಕಟ್ಟಬಾರದು? ಹೀಗೆ ನಿರ್ಧರಿಸಿದ ಕೆಲವೇ ದಿನಗಳಲ್ಲಿ ಈ ಕಡಲ ತಡಿಯಲ್ಲಿ ಮರಳಿನ ಅರಮನೆ ಸಿದ್ಧವಾಗಿತ್ತು.

ಮಳೆ ಬಂದಾಗ, ಜೋರು ಚಂಡಮಾರುತ ಎದ್ದಾಗ, ಈ ಮರಳಿನ ಮನೆ ಧಸಕ್ಕನೆ ಕುಸಿದು ಬೀಳುತ್ತದೆ. ಕೆಲವೊಮ್ಮೆ ರಕ್ಕಸದ ಅಲೆಗಳಿಗೆ, ಕೊಚ್ಚಿಯೂ ಹೋಗುತ್ತದೆ. ಆದರೆ, “ಮಾರ್ಸಿಯೋನ ತಾಳ್ಮೆ ಇರುವೆಯಂತೆ’ ಎನ್ನುತ್ತಾರೆ ಸ್ಥಳೀಯರು. ಇರುವೆ ಹೇಗೆ, ಪ್ರತಿ ಸಲ ತನ್ನ ಗೂಡು ಸರ್ವನಾಶವಾದಾಗಲೂ, ಅದನ್ನು ಮತ್ತೆ ಶ್ರದ್ಧೆಯಿಂದ ಕಟ್ಟುತ್ತದೋ, ಅಂಥದ್ದೇ ಅಪಾರ ಸಹನೆಯಿಂದ, ಈ ಅರಮನೆಯನ್ನು ಮರು ನಿರ್ಮಿಸುತ್ತಾನಂತೆ, ಮಾರ್ಸಿಯೋ. 

Advertisement

ಕೆಲವೊಮ್ಮೆ ರಾತ್ರಿ ವೇಳೆ ಮರಳಿನ ಅರಮನೆ ಒಳಗೆ, ಅಪಾರ ಸೆಖೆಯ ಅನುಭವ ಆಗುವುದರಿಂದ, ಹೊರಗೆ ಬಂದು ಆಕಾಶ ನೋಡುತ್ತಾ ಮಲಗುತ್ತಾನೆ. “ಚಿನ್ನ, ರತ್ನಗಳಿರುವ ಅರಮನೆಯಲ್ಲಿ ಮಲಗುವ ರಾಜನಿಗೆ ರಾತ್ರಿ ನಿದ್ರೆಯೇ ಬರುವುದಿಲ್ಲ. ಆದರೆ, ನನಗೆ ಹಾಗೊಂದು ಆತಂಕವೇ ಕಾಡದು. ಕಣ್ತುಂಬಾ ನಿದ್ದೆ ಬರುತ್ತೆ. ಯಾರೋ ಸೈನ್ಯ ಕಟ್ಟಿಕೊಂಡು ಬಂದು, ನನ್ನ ಸಾಮ್ರಾಜ್ಯವನ್ನು ಧೂಳೀಪಟ ಮಾಡುತ್ತಾರೆಂಬ ಭಯವೂ ನನಗಿಲ್ಲ. ಹಣ- ಐಶ್ವರ್ಯ ಇದ್ದಲ್ಲಿ ಮನುಷ್ಯ ಸಕಲ ನೆಮ್ಮದಿ ಕಳಕೊಂಡಿರುತ್ತಾನೆ’ ಎನ್ನುತ್ತಾನೆ ಮಾರ್ಸಿಯೋ.

ಹಳೇ ಪುಸ್ತಕಗಳನ್ನು ಮಾರಿ, ಬಂದ ಅಷ್ಟೋ ಇಷ್ಟೋ ಹಣದಲ್ಲಿ ಮಾರ್ಸಿಯೋನ ಜೀವನ ಸಾಗುತ್ತದೆ. ಈತ ಎಂದೂ ಸ್ಟಾರ್‌ ಹೋಟೆಲ್‌ನ ಮೆಟ್ಟಿಲು ಹತ್ತೇ ಇಲ್ವಂತೆ. ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿ, ನೆಮ್ಮದಿಯಾಗಿ ಉಂಡು ಮಲಗುವ ಮಾರ್ಸಿಯೋ, ತನ್ನೊಂದಿಗೆ ಒಂದು ನಾಯಿ ಸಾಕಿದ್ದಾನೆ. ಈತನನ್ನು, ಈತನ ಮರಳಿನ ಸಾಮ್ರಾಜ್ಯವನ್ನು ಕಾಯುವ ಜೀವಿ ಕೂಡ ಅದು ಹೌದು.

ಈಗ ಹೇಳಿ, ಯಾರು ಜಗತ್ತಿನ ಅತ್ಯಂತ ಖುಷಿಯ ಮನುಷ್ಯ? ಅರಮನೆಯಲ್ಲಿನ ಮಹಾರಾಜನೇ?

Advertisement

Udayavani is now on Telegram. Click here to join our channel and stay updated with the latest news.

Next