Advertisement

ಬೆಂಕಿ ಕೆನ್ನಾಲಿಗೆಗೆ ಸಿಲುಕಿದ ಗದಗದ ಬಡ ಬಾಲೆಯರು

10:36 AM Dec 25, 2018 | |

ಮಹಾನಗರ: ಒಂದೆಡೆ ಬಡತನ; ಮತ್ತೊಂದೆಡೆ ತಂದೆ ಇಲ್ಲದ ನೋವು. ಈ ಎರಡೂ ಸಂಕಷ್ಟಗಳನ್ನು ಮೆಟ್ಟಿನಿಂತು ವಿದ್ಯಾವಂತರಾಗುವ ಹಂಬಲದಲ್ಲಿದ್ದ ಅಕ್ಕ-ತಂಗಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಗಂಭೀರ ಸ್ಥಿತಿಯಲ್ಲಿದ್ದಾರೆ.

Advertisement

ದೂರದ ಊರಿನಿಂದ ಬಂದು ಮಂಗಳೂರಿನಲ್ಲಿ ಕಲಿಯುತ್ತಿದ್ದ ಈ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಅಜ್ಜಿ ಕೂಡ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸುಟ್ಟ ಗಾಯಗಳೊಂದಿಗೆ ವೆನ್ಲಾಕ್‌ ಆಸ್ಪತ್ರೆ ಸೇರಿರುವ ಈ ಮೂವರ ಆರೈಕೆಗೆ ಯಾರೂ ಇಲ್ಲ; ಚಿಕಿತ್ಸೆಯ ದುಡ್ಡಿಗೂ ಅಂಗಲಾಚಬೇಕಿದೆ. ಚಿಕಿತ್ಸಾ ವೆಚ್ಚಕ್ಕಾಗಿ ಅವರು ಕಲಿಯುತ್ತಿದ್ದ ಶಾಲೆಯ ಮಕ್ಕಳು ಹಾಗೂ ಅಧ್ಯಾಪಕರೇ ಸಹಾಯಹಸ್ತ ಚಾಚಿರುವುದು ಮಾನವೀಯತೆಯ ಆಶಾಕಿರಣ.

ಗದಗ ಜಿಲ್ಲೆಯಿಂದ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿಗೆ ಆಗಮಿಸಿರುವ ರಂಜಿತಾ ಹಾಗೂ ಬಸಮ್ಮ ಅಜ್ಜಿಯೊಂದಿಗೆ ನಗರದಲ್ಲಿ ನೆಲೆಸಿದ್ದರು. ಅವರು ಚಿಕ್ಕವರಿದ್ದಾಗಲೇ ತಂದೆ ತೀರಿಹೋಗಿದ್ದರು. ತಾಯಿಗೆ ಆರ್ಥಿಕ ಶಕ್ತಿ ಇಲ್ಲದೆ ಡೊಂಗರಕೇರಿ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸಕ್ಕಿದ್ದ ಅಜ್ಜಿ ರೇಣುಕಾ ಬಳಿಗೆ ವಿದ್ಯಾಭ್ಯಾಸಕ್ಕೆ ಕಳುಹಿಸಿದ್ದರು. ಅಜ್ಜಿ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ವಾಸಕ್ಕೆ ನೀಡಿದ್ದ ಪುಟ್ಟ ಕೊಠಡಿಯಲ್ಲಿ ಆಶ್ರಯ ಕಲ್ಪಿಸಿ ಡೊಂಗರಕೇರಿಯ ಕೆನರಾ ಗರ್ಲ್ಸ್‌ ಹೈಸ್ಕೂಲ್‌ಗೆ ಸೇರಿಸಿದ್ದರು. ರಂಜಿತಾ 9ನೇ ಹಾಗೂ ಬಸಮ್ಮ 6ನೇ ತರಗತಿಯಲ್ಲಿ ಕಲಿಯುತ್ತಿದ್ದರು. ಅಜ್ಜಿ ದುಡಿದ ಹಣದಲ್ಲಿ ವಿದ್ಯಾಭ್ಯಾಸ ನಡೆಯುತ್ತಿತ್ತು. ಆದರೆ ಕಳೆದ ಶನಿವಾರ ಕೊಠಡಿಯಲ್ಲಿ ಶಾರ್ಟ್‌ ಸಕ್ಯೂರ್ಟ್‌ನಿಂದ ಉಂಟಾದ ಬೆಂಕಿಯಲ್ಲಿ ಅಜ್ಜಿ ಹಾಗೂ ಮೊಮ್ಮಕ್ಕಳ ದೇಹ ಭಾಗಶಃ ಸುಟ್ಟಿದೆ.

ಘಟನೆಯ ವಿವರ
ಶನಿವಾರ ರಾತ್ರಿ ಅಜ್ಜಿ ಹಾಗೂ ಮೊಮ್ಮಕ್ಕಳು ಗಾಢ ನಿದ್ರೆಯಲ್ಲಿದ್ದಾಗ ಫ್ಯಾನ್‌ನಲ್ಲಿ ಶಾರ್ಟ್‌ ಸರ್ಕ್ನೂಟ್‌ ಉಂಟಾಗಿ ವಯರ್‌ ತುಂಡಾಗಿ ಕೆಳಬಿದ್ದು ಹಾಸಿಗೆ-ಬಟ್ಟೆಗೆ ಬೆಂಕಿ ಹತ್ತಿಕೊಂಡಿತ್ತು. ಎಚ್ಚರವಾಗುವಷ್ಟರಲ್ಲಿ ಮೂವರ ದೇಹ ಒಂದಷ್ಟು ಬೆಂದು ಹೋಗಿತ್ತು. ಅಜ್ಜಿ ಪ್ರಾಣವನ್ನು ಲೆಕ್ಕಿಸದೆ ಮೊಮ್ಮಕ್ಕಳನ್ನು ಪಾರುಮಾಡಿ ಹೊರ ತಂದಿದ್ದರು. ಕಿರುಚಾಟ ಕೇಳಿ ಅಪಾರ್ಟ್ ಮೆಂಟ್‌ ನಿವಾಸಿಗಳು ಗಾಯಾಳುಗಳನ್ನು ವೆನ್ಲಾಕ್‌ ಆಸ್ಪತ್ರೆಗೆ ಸೇರಿಸಿದ್ದರು.

ಶಾಲಾ ಮಕ್ಕಳಿಂದ ನೆರವು
ರಂಜಿತಾ, ಬಸಮ್ಮ ಹಾಗೂ ಅಜ್ಜಿ ರೇಣುಕಾಗೆ ಒದಗಿದ ದುಃಸ್ಥಿತಿಗೆ ಶಾಲೆಯ ಮಕ್ಕಳು ಮತ್ತು ಅಧ್ಯಾಪಕ ವೃಂದ ಸ್ಪಂದಿಸಿದ್ದು, ಹಣ ಸಂಗ್ರಹ ಮಾಡುತ್ತಿದ್ದಾರೆ. ಶಾಲೆಯ ಇಂಟರ್ಯಾಕ್ಟ್ ಕ್ಲಬ್‌ ಮೂಲಕ ಈ ಕಾರ್ಯ ನಡೆಸಲಾಗುತ್ತಿದೆ. 

Advertisement

ನೆರವು ಅಗತ್ಯ
ರಂಜಿತಾ ಹಾಗೂ ಬಸಮ್ಮ, ಅಜ್ಜಿಯ ಪುಟ್ಟ ಗಳಿಕೆಯಿಂದ ವಿದ್ಯಾಭ್ಯಾಸ ಪಡೆಯುತ್ತಿದ್ದರು. ಈಗ ಇಬ್ಬರೂ ಗಂಭೀರ ಸ್ಥಿತಿಯಲ್ಲಿದ್ದು, ವೆನ್ಲಾಕ್‌ನ ಸುಟ್ಟಗಾಯಗಳ ಚಿಕಿತ್ಸಾ ವಿಭಾಗದಲ್ಲಿದ್ದಾರೆ. ಅಜ್ಜಿ ರೇಣುಕಾ ಕೂಡ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಅವರ ಚಿಕಿತ್ಸೆಗೆ ನೆರವಿನ ಅಗತ್ಯವಿದೆ. ನೆರವು ನೀಡಬಯಸುವವರು ವೆನ್ಲಾಕ್‌ ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗವನ್ನು ಸಂಪರ್ಕಿಸಬಹುದು.

ಸಮಸ್ಯೆಗೆ ಜನರು ಸ್ಪಂದಿಸುವ ಭರವಸೆ
ಊರಿನಲ್ಲಿ ವಿದ್ಯಾಭ್ಯಾಸ ನೀಡಲು ಸಾಧ್ಯವಾಗದು ಎಂದು ಮಕ್ಕಳನ್ನು ಅಜ್ಜಿಯೊಂದಿಗೆ ಬಿಟ್ಟಿದ್ದೆವು. ಅಜ್ಜಿ ಕಷ್ಟಪಟ್ಟು ಓದಿಸುತ್ತಿದ್ದರು. ಆದರೆ ವಿಧಿಯಾಟಕ್ಕೆ ಮೂವರೂ ಆಸ್ಪತ್ರೆ ಸೇರಿದ್ದಾರೆ. ನಮ್ಮ ಸಮಸ್ಯೆಗೆ ಜನರು ಸ್ಪಂದಿಸುತ್ತಾರೆಂಬ ಭರವಸೆಯಿದೆ.
– ಲಕ್ಷ್ಮೀ ಹೆಣ್ಮಕ್ಕಳ ಚಿಕ್ಕಮ್ಮ

 ವಿದ್ಯಾರ್ಥಿಗಳ ನೋವಿಗೆ ಸ್ಪಂದನೆ
ಇಬ್ಬರೂ ಕಲಿಕೆಯಲ್ಲಿ ಮುಂದಿದ್ದರೂ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಹಿಂದೆ ಯೂ ಅನೇಕ ರೀತಿಯಲ್ಲಿ ಶಾಲೆಯಿಂದ ಸಹಕಾರ ನೀಡಲಾಗಿದೆ. ಈಗಲೂ ಶಿಕ್ಷಕರು, ವಿದ್ಯಾರ್ಥಿಗಳು ಒಟ್ಟಾಗಿ ನೆರವಾ ಗುತ್ತಿದ್ದೇವೆ.
– ಜಲಜಾಕ್ಷಿ, ಶಾಲಾ ಮುಖ್ಯೋಪಾಧ್ಯಾಯಿನಿ

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next