Advertisement
ಕಾಪು ಪುರಸಭೆ ವ್ಯಾಪ್ತಿಯ ಮಲ್ಲಾರು ಅಚ್ಚಾಲು ಪರಿಸರದಲ್ಲಿ ಮನೆಗೆಲಸದೊಂದಿಗೆ, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಮನೆಯೊಡತಿ ನಾಗವೇಣಿ ಶೇರ್ವೆಗಾರ್ (55 ವ) ಅವರು ತನ್ನ ವಯೋವೃದ್ಧ ಪತಿ ವಿಠಲ ಶೇರ್ವೇಗಾರ್ (62 ವ), ಕೆಲಸವಿಲ್ಲದೇ ಇರುವ ಹಿರಿಯ ಮಗ ಸುಧೀರ್, ಅನಾರೋಗ್ಯ ಪೀಡಿತನಾಗಿ ಹಾಸಿಗೆಯಲ್ಲಿ ಮಲಗಿರುವ ಮನೆಗೆ ಆಧಾರವಾಗ ಬೇಕಿದ್ದ ಕಿರಿಯ ಮಗ ಸುನೀಲ್ ಇವರೊಂದಿಗೆ ಟರ್ಪಾಲು ಸೂರಿನ ಮನೆಯಲ್ಲಿ ಭಗವಂತನನ್ನೇ ನಂಬಿ ಜೀವನ ಕಳೆಯುತ್ತಿದ್ದು ದಾನಿಗಳು ಮತ್ತು ಸಹೃದಯಿಗಳ ಸಹಕಾರದ ನಿರೀಕ್ಷೆಯಲ್ಲಿದ್ದಾರೆ.
Related Articles
Advertisement
ಮನೆಯ ಆಧಾರವಾಗಬೇಕಿದ್ದ ಕಿರಿಯ ಮಗ ಸುನೀಲ್ ಅವರು ಮರವೇರಿ ಕೆಲಸ ಮಾಡುವ ಸಂದರ್ಭ ಮರದಿಂದ ಬಿದ್ದು ಕಾಲು ಮುರಿತ ಗೊಂಡಿದ್ದು ನಡೆಯಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯ ಮೂಲೆ ಸೇರಿ ಹಲವು ವರ್ಷಗಳು ಉರುಳುತ್ತಿವೆಯೇ ಹೊರತು ಗಾಯದಿಂದ ಗುಣಮುಖವಾಗುವ ಲಕ್ಷಣಗಳು ಮಾತ್ರ ತೋಚುತ್ತಿಲ್ಲ. ಸರಿಯಾದ ವೈದ್ಯಕೀಯ ಚಿಕಿತ್ಸೆ ಮಾಡಲು ಹಣಕಾಸಿನ ಅಭಾವ ಕಾಡುತ್ತಿದ್ದು, ಎಲ್ಲವನ್ನೂ ಭಗವಂತನ ಮೇಲೆ ಬಿಟ್ಟು ಆಕಾಶ ನೋಡುತ್ತಾ ಕುಳಿತುಕೊಳ್ಳುವಂತಹ ದಯನೀಯ ಸ್ಥಿತಿಗೆ ಬಡ ಕುಟುಂಬ ಸಿಲುಕಿ ಬಿಟ್ಟಿದೆ.
ರೇಷನ್ ಕಿಟ್ ನೀಡಲೆಂದು ತೆರಳಿದ ವೇಳೆ ಬೆಳಕಿಗೆ ಬಂದ ಕುಟುಂಬದ ಸ್ಥಿತಿ : ಉಳಿಯಾರು ಫ್ರೆಂಡ್ಸ್ – ಟೀಂ ಕಟ್ಟೆ ತಂಡದ ಸದಸ್ಯರು ರೇಷನ್ ಕಿಟ್ ನೀಡಲೆಂದು ಹೋದಾಗ ಅವರ ಮನೆಯ ಪರಿಆಸ್ಥಿತಿ ಬಯಲಾಯಿತು. ಮಳೆಯ ನಡುವೆ ಮಲಗಲು ಜಾಗವಿಲ್ಲದೇ ಪರದಾಡುತ್ತಿರುವುದು ಬೆಳಕಿಗೆ ಬಂದಿತ್ತು. ಬಿಪಿಎಲ್ ರೇಷನ್ ಕಾರ್ಡ್ ವೊಂದನ್ನು ಬಿಟ್ಟರೆ ಸರಕಾರದ ಬೇರೆ ಯಾವ ಸವಲತ್ತುಗಳು ಈ ಬಡ ಕುಟುಂಬವನ್ನು ತಲುಪುತ್ತಿಲ್ಲ. ಸಮರ್ಪಕ ದಾಖಲೆಯಿಲ್ಲದೇ, ಮಾಹಿತಿ, ಮಾರ್ಗದರ್ಶನವಿಲ್ಲದೇ ಇರುವುದರಿಂದ ಕನಿಷ್ಠ ಪಕ್ಷ ಬ್ಯಾಂಕ್ ಖಾತೆಯನ್ನೂ ಹೊಂದಿಲ್ಲದೇ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಬಡತನದ ಬೇಗೆಯಲ್ಲಿ ಬಡ ಕುಟುಂಬವು ನೊಂದು ಬೆಂದು ಹೋಗಿದ್ದು, ಸ್ವಾಭಿಮಾನ ಬಿಟ್ಟು ಇತರರ ಬಳಿ ಸಹಾಯ ಯಾಚಿಸುವ ಸ್ಥಿತಿಗೆ ಬಂದು ತಲುಪಿವೆ.
ಇದನ್ನೂ ಓದಿ: ನೇಷನ್ ಫಸ್ಟ್ ತಂಡದಿಂದ ನಾಗಸಂಪಿಗೆ ಭತ್ತದ ತಳಿಯ ನೇಜಿ ನಾಟಿ
ನಾಗವೇಣಿ ಸೇರ್ವೆಗಾರ್ ಮತ್ತು ಅವರ ಕುಟುಂಬಕ್ಕೆ ಅಗತ್ಯವಾದ ಸೂರು, ಅವರ ಮಗ ಸುನೀಲ್ ಸೇರ್ವೇಗಾರ್ ಅವರ ವೈದ್ಯಕೀಯ ಖರ್ಚಿಗಾಗಿ ತುರ್ತಾಗಿ ಹಣಕಾಸಿನ ವ್ಯವಸ್ಥೆಗಳು ಜೋಡಣೆಯಾಗಬೇಕಿದ್ದು, ಉಳಿಯಾರು ಫ್ರೆಂಡ್ಸ್ – ಟೀಂ ಕಟ್ಟೆ ತಂಡ ಸದಸ್ಯರು ಯುವಕರು ತಮ್ಮ ಕೈಲಾದ ಸಹಾಯವನ್ನು ಮಾಡಲು ಮುಂದೆ ಬಂದಿದ್ದಾರೆ. ಕುಟುಂಬದ ಹಿರಿಯ ಜೀವಗಳು ನೆಮ್ಮದಿಯ ಜೀವನಕ್ಕಾಗಿ ಹೋರಾಟ ಮಾಡುತ್ತಿದ್ದು ಸಹೃದಯಿ ದಾನಿಗಳು ಮಾನವೀಯತೆಯ ನೆಲೆಯಲ್ಲಿ ಸಹಕರಿಸುವಂತೆ ಉಳಿಯಾರು ಫ್ರೆಂಡ್ಸ್ – ಟೀಂ ಕಟ್ಟೆ ತಂಡದ ಸದಸ್ಯರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.