ಮಹಾನಗರ: ಸಮಾಜದಲ್ಲಿ ಬ್ರಾಹ್ಮಣರೆಂದರೆ ಶ್ರೀಮಂತರು ಎಂಬ ಭಾವನೆ ಇದೆ. ಆದರೆ ಬ್ರಾಹ್ಮಣರಲ್ಲಿಯೂ ಅನೇಕ ಬಡ ಕುಟುಂಬಗಳಿವೆ. ಬ್ರಾಹ್ಮಣರು ತಮ್ಮ ಸ್ವಪ್ರಯತ್ನದಿಂದಲೇ ಮೇಲೆ ಬಂದವರಾಗಿದ್ದಾರೆ ಎಂದು ವಿಶ್ವಸ್ತರಾದ ಡಾ| ಸಿ.ಆರ್. ಬಲ್ಲಾಳ್ ಹೇಳಿದರು.
ಮಂಗಳೂರಿನ ಭಾಸ್ಕರ ಮಾಲತೀ ರಾವ್ ಪೇಜಾವರ ಟ್ರಸ್ಟ್ ವತಿಯಿಂದ ಕರ್ಣಾಟಕ ಬ್ಯಾಂಕ್ ಮತ್ತು ಲಯನ್ಸ್ ಕ್ಲಬ್ ಆಶ್ರಯದಲ್ಲಿ ನಗರದ ಲಯನ್ಸ್ ಸೇವಾ ಮಂದಿರದಲ್ಲಿ ಶುಕ್ರವಾರ ನಡೆದ 18ನೇ ವರ್ಷದ ಅನುದಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ಸರಕಾರವು ಬ್ಯಾಂಕ್ ಗಳಲ್ಲಿ ಅಡವಿಟ್ಟ ಹಣದ ಬಡ್ಡಿದರ ಕಡಿಮೆಗೊಳಿಸಿದೆ. ಇದರಿಂದ ಅನುದಾನ ವಿತರಣೆ ಮಾಡಲು ಕಷ್ಟವಾಗುತ್ತಿದೆ. ಯಾವುದೇ ರೂಪದಲ್ಲಿ ಬಂದಂತಹ ಹಣವನ್ನು ಸರಿಯಾದ ಕೆಲಸಕ್ಕೆ ವಿನಿಯೋಗಿಸಬೇಕು ಎಂದರು. ಮುಖ್ಯಅತಿಥಿಯಾಗಿದ್ದ ಉದ್ಯಮಿ ಎ. ಪ್ರಭಾಕರ ರಾವ್ ಮಾತನಾಡಿ, ಮಾಲತೀ ರಾವ್ ಪೇಜಾವರ ಅವರು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಕಾಲದಲ್ಲಿ ನಡೆದ ತುರ್ತು ಪರಿಸ್ಥಿತಿ ಘೋಷಣೆಯ ವಿರುದ್ಧ ಹೋರಾಡಿದ ಧೈರ್ಯವಂತ ಮಹಿಳೆ ಎಂದರು. ಉದ್ಯಮಿ ವಿಜಯಲಕ್ಷ್ಮೀ ಆರ್. ರಾವ್, ಬಿಜೈಯ ಕಮಲಾ ಕೆ. ವೆಂಕಟ ರಾವ್, ಟ್ರಸ್ಟ್‌ನ ರತಿ ದಿನೇಶ್ ರಾವ್, ಡಿ. ಈಶ್ವರ ಭಟ್, ಸುಧಾಕರ ರಾವ್ ಪೇಜಾವರ ಉಪಸ್ಥಿತರಿದ್ದರು. ಬಿಜೈ ನ್ಯೂ ರೋಡ್‌ನ ಸಮತಾ ಮಹಿಳಾ ಬಳಗದಿಂದ ಭಕ್ತಿ ಲಹರಿ ಕಾರ್ಯಕ್ರಮ ಜರಗಿತು.
44 ಮಂದಿಗೆ ಅನುದಾನ
ಟ್ರಸ್ಟ್‌ನ ಎನ್. ವೆಂಕಟರಾಜ ಮಾತನಾಡಿ, ಈ ಬಾರಿ 2 ಶಾಲೆಗಳು, 2 ದೇವಸ್ಥಾನಗಳು, 40 ಮಂದಿ ವಿದ್ಯಾರ್ಥಿಗಳು ಸೇರಿದಂತೆ 44 ಮಂದಿಗೆ ಅನುದಾನ ವಿತರಣೆ ಮಾಡಲಾಗುವುದು. ಒಟ್ಟಾರೆಯಾಗಿ 1.10 ಲಕ್ಷ ರೂ. ಅನುದಾನ ವಿತರಣೆಯಾಗಲಿದೆ ಎಂದರು.