ಕೊಕ್ಕಡ: ಇಪ್ಪತ್ತು ವರ್ಷಗಳಿಂದ ಈ ಕುಟುಂಬ ಗುಡಿಸಲಿನಲ್ಲಿ ವಾಸಿಸುತ್ತಿದೆ. ಮರದ ತೋಳಿಗೆ ಹೊದೆಸಿದ ಟಾರ್ಪಲ್‌ನ ಅಡಿಯಲ್ಲಿ ಐವರು ಮಕ್ಕಳೊಂದಿಗೆ ನರಕಸದೃಶವಾಗಿ ಜೀವನ ನಡೆಸುತ್ತಿದೆ. ಮನೆ ಕೊಡಿಸುವುದಾಗಿ ಜನಪ್ರತಿನಿಧಿಗಳು ನೀಡುತ್ತಿರುವ ಭರವಸೆ ನಂಬಿ ಚಾತಕ ಪಕ್ಷಿಯಂತೆ ಕಾಯುತ್ತಿದೆ. ಕೌಕ್ರಾಡಿ ಗ್ರಾಮದ ಬಡ ಕುಟುಂಬವೊಂದರ ಕಣ್ಣೀರ ಕಥೆ ಇದು. ಮೂಡುಬೈಲು ಎಂಬಲ್ಲಿ ಡಾಮರು ರಸ್ತೆಯಿಂದ ಅನತಿ ದೂರದಲ್ಲಿ ಮುದರ ಎಂಬವರು ತಮ್ಮ ಪತ್ನಿ ಗೀತಾ ಹಾಗೂ ಐವರು ಮಕ್ಕಳೊಂದಿಗೆ ಟಾರ್ಪಲ್ ಅಳವಡಿಸಿದ ಗುಡಿಸಲಿನಲ್ಲಿ ಇಪ್ಪತ್ತು ವರ್ಷಗಳಿಗಿಂತಲೂ ಹೆಚ್ಚು ಅವಧಿಯಿಂದ ಆಶ್ರಯ ಪಡೆದಿದ್ದಾರೆ. ಐವರು ಮಕ್ಕಳು ಕ್ರಮವಾಗಿ 6, 4, 2ನೇ ತರಗತಿ ಕಲಿಯುತ್ತಿದ್ದರೆ, ಉಳಿದಿಬ್ಬರು ಅಂಗನವಾಡಿಗೆ ತೆರಳುತ್ತಿದ್ದಾರೆ. ಹೆಸರಿಗೆ ಒಂದಿಷ್ಟು ಜಮೀನಿದ್ದರೂ ಮನೆ ಕಟ್ಟುವ ಶಕ್ತಿ ಇವರಿಗಿಲ್ಲ. ಕೂಲಿ-ನಾಲಿ ಮಾಡಿ ಬರುವ ಹಣ ಸಂಸಾರ ನಿರ್ವಹಣೆಗೂ ಸಾಲುತ್ತಿಲ್ಲ. ವಿದ್ಯಾಭ್ಯಾಸವಿಲ್ಲದ ಕಾರಣಕ್ಕೆ ಸರಕಾರದ ಅನುದಾನಗಳ ಮಾಹಿತಿಯೂ ಇಲ್ಲ. ಗ್ರಾಮ ಪಂಚಾಯತ್‌ಗೆ ಹಲವು ಸಲ ಭೇಟಿ ನೀಡಿದ್ದರೂ ಮನೆ ನಿರ್ಮಾಣದ ಭರವಸೆ ಮಾತ್ರ ಸಿಕ್ಕಿದೆ. ಈ ಬಾರಿ ಕೌಕ್ರಾಡಿ ಚರ್ಚ್ ಒಂದರ ಶಿಕ್ಷಕಿ ನೀಡಿರುವ ಟಾರ್ಪಲ್, ಅವರನ್ನು ಮಳೆ ಹಾಗೂ ಬಿಸಿಲಿನಿಂದ ರಕ್ಷಿಸುತ್ತಿದೆ.
ಪಕ್ಕದ ಮನೆಯಲ್ಲಿ ಆಶ್ರಯ
ಗಾಳಿ, ಮಳೆ ಬಂದರೆ ನಿಲ್ಲಲೂ ಸಾಧ್ಯವಿಲ್ಲದ ಈ ಬಡಕುಟುಂಬ ಅಂತಹ ಸಂದರ್ಭಗಳಲ್ಲಿ ಮಕ್ಕಳನ್ನು ಕರೆದುಕೊಂಡು ಪಕ್ಕದ ಮನೆಗೆ ಹೋಗಿ ಆಶ್ರಯ ಪಡೆಯುತ್ತಿದೆ. ಸರಕಾರದ ಅನುದಾನಗಳನ್ನು ಕೊಡಿಸುವವರು ನಮಗೆ ಯಾರೂ ಇಲ್ಲ ಎಂದು ಮುದರ ನೊಂದು ನುಡಿಯುತ್ತಾರೆ. ಮೂಡುಬೈಲು ಪರಿಸರದಲ್ಲಿ ಇನ್ನೂ ಕೆಲವು ಕುಟುಂಬಗಳು ಜೋಪಡಿಗಳಲ್ಲೇ ವಾಸಿಸುತ್ತಿವೆ. ತಿಮ್ಮಪ್ಪ, ಪುಷ್ಪಾ ಹಾಗೂ ಮೀಯಾಳ ಸಮೀಪ ಚೀಂಕ್ರ ಎಂಬವರ ಕುಟುಂಬಗಳೂ ಜೋಪಡಿಗಳಲ್ಲೇ ಇದ್ದು, ಕೌಕ್ರಾಡಿ ಗ್ರಾಮ ಪಂಚಾಯತ್ ಆಡಳಿತ ಇನ್ನಾದರೂ ಇವರಿಗೆ ಸೌಲಭ್ಯ ತಲುಪಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ.
ನಾನೇ ನಿಂತು ಮಾಡಿಸುವೆ
ಕಳೆದ ವರ್ಷ ಈ ಬಗ್ಗೆ ಮಾಹಿತಿ ತಿಳಿದು ಪಿಡಿಒ ಅವರೊಂದಿಗೆ ನಾನೇ ಖುದ್ದಾಗಿ ಅಲ್ಲಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿದ್ದು, ಈ ಕುಟುಂಬಗಳ ಮುಖ್ಯಸ್ಥರನ್ನು ಗ್ರಾ.ಪಂ.ಗೆ ಬರುವಂತೆ ಹೇಳಿದ್ದೆ. ಆದರೆ ಯಾರೂ ಬಾರದೇ ಇದ್ದ ಕಾರಣ ಸಮಸ್ಯೆ ಹಾಗೆಯೇ ಉಳಿದಿದೆ. ಈ ಬಾರಿ ಗ್ರಾ.ಪಂ. ವತಿಯಿಂದ ಮನೆ ನಿರ್ಮಿಸಿಕೊಡುವ ಕುರಿತು ನಾನೇ ಸ್ವತಃ ಮುತುವರ್ಜಿ ವಹಿಸಿ, ಕ್ರಮ ಕೈಗೊಳ್ಳುತ್ತೇನೆ.
– ಎಂ.ಕೆ. ಇಬ್ರಾಹಿಂ, ಅಧ್ಯಕ್ಷರು, ಕೌಕ್ರಾಡಿ ಗ್ರಾ.ಪಂ.
— ಗುರುಮೂರ್ತಿ ಎಸ್. ಕೊಕ್ಕಡ