ಕಡಬ: ಇಲ್ಲಿನ ಅಂಬೇಡ್ಕರ್ ಭವನವನ್ನು ಸಂಪರ್ಕಿಸುವ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಬೇಕೆಂಬ ಹಲವು ವರ್ಷಗಳ ಬೇಡಿಕೆಗೆ ಮನ್ನಣೆ ದೊರೆತಿದ್ದು, ಈಗಾಗಲೇ ಕಾಮಗಾರಿ ಆರಂಭವಾಗಿದೆ. ಆದರೆ ನಿಯಮ ಪಾಲಿಸದೆ ಕಳಪೆ ಕಾಮಗಾರಿ ನಡೆ ಯುತ್ತಿದೆ ಎಂದು ದೂರಿರುವ ಸ್ಥಳೀಯರು ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪ.ಪಂ. ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಅನುದಾನ ಪೋಲು: ಈ ರಸ್ತೆಯನ್ನು 3.36 ಲಕ್ಷ ರೂ. ಅನುದಾನದಲ್ಲಿ ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುತ್ತಿರುವ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಇಲ್ಲಿ ಯಾವುದೇ ನಿಯಮಗಳನ್ನು ಪಾಲಿಸದೆ ಕಾಮಗಾರಿ ನಡೆಸಲಾಗುತ್ತಿದೆ. ಹಲವು ಸಮಯದ ಹಿಂದೆ ಅಗೆದುಹಾಕಲಾಗಿದ್ದ ರಸ್ತೆಯನ್ನು ಸಮತಟ್ಟುಗೊಳಿಸದೆ, ಕಾಂಕ್ರೀಟ್ ಹಾಕುವ ಮೊದಲು ಸ್ವತ್ಛಗೊಳಿಸದೆ ಕಲ್ಲು, ಕಸಕಡ್ಡಿಗಳು ಇರುವಂತೆಯೇ ಕೆಲಸ ಮಾಡಲಾಗಿದೆ. ಕಾಂಕ್ರೀಟ್‌ನ ಅಡಿಯಲ್ಲಿ ದೊಡ್ಡ ದೊಡ್ಡ ಕಲ್ಲುಗಳಿವೆ. ಕೆಲವು ಕಡೆ ಕಾಂಕ್ರೀಟ್ ಹಾಕಿದ್ದು ನೆಲಕ್ಕೇ ಮುಟ್ಟಿಲ್ಲ. ಕಳಪೆ ಕಾಮಗಾರಿಯಿಂದಾಗಿ ಅನುದಾನ ಪೋಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಪ್ರಮುಖ ರಸ್ತೆ: ಅಂಬೇಡ್ಕರ್ ಭವನ ಮಾತ್ರವಲ್ಲದೆ ಕಡಬದ ಪಶು ವೈದ್ಯ ಕೀಯ ಆಸ್ಪತ್ರೆ, ಹಾಲು ಉತ್ಪಾದಕರ ಸಹಕಾರ ಸಂಘಕ್ಕೂ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಇದೇ ರಸ್ತೆ ಟಿಸಿಲೊಡೆದು ಮುಂದೆ ಕೊರುಂದೂರು-ಮಜ್ಜಗುಡ್ಡೆ-ಮೂರಾಜೆ ಪ್ರದೇಶಕ್ಕೆ ಸಂಪರ್ಕ ಕಲ್ಲಿಸುತ್ತದೆ. ಸುಮಾರು 15 ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳು ವಾಸ್ತವ್ಯವಿರುವ ಮಜ್ಜಗುಡ್ಡೆ ಕಾಲನಿಗೆ ನೇರ ಸಂಪರ್ಕವಾಗಿರುವ ಇದೇ ರಸ್ತೆಯನ್ನು ಪರಿಸರದ ಸುಮಾರು 200 ರಿಂದ 230 ಮನೆಗಳ ಜನರು ಅವಲಂಬಿಸಿದ್ದಾರೆ. ಕೊರುಂದೂರು ಅಂಗನವಾಡಿ ಕೇಂದ್ರ ಹಾಗೂ ಕೇವಳದಲ್ಲಿರುವ ಸರಸ್ವತೀ ಪ್ರೌಢಶಾಲೆಗೆ ಹತ್ತಿರದ ದಾರಿಯಾಗಿರುವ ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂದು ಕಡಬ ಗ್ರಾ.ಪಂ.ನ ಪ್ರತೀ ಗ್ರಾಮಸಭೆಗಳಲ್ಲಿ ಸಾರ್ವಜನಿಕರು ಬೇಡಿಕೆ ಇಡುತ್ತಲೇ ಬಂದಿದ್ದರು. ಕಡಬವು ತಾಲೂಕು ಕೇಂದ್ರವಾದ ಬಳಿಕ ಬಹುತೇಕ ತಾಲೂಕು ಮಟ್ಟದ ಸರಕಾರಿ ಸಭೆ ಅಂಬೇಡ್ಕರ್ ಭವನದಲ್ಲಿಯೇ ನಡೆಯುತ್ತಿದೆ. ನಿರ್ಮಾಣ ಗೊಳ್ಳುತ್ತಿರುವ ಅಲ್ಪಸಂಖ್ಯಾಕರ ಮೆಟ್ರಿಕ್ ಅನಂತರದ ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ಸಂಪರ್ಕಿಸುವ ರಸ್ತೆಯೂ ಇದೇ ಆಗಿದೆ.
ಪೂರ್ಣಕಾಲಿಕ ಎಂಜಿನಿಯರ್ ನೇಮಿಸಿ: ಕಡಬ ಪ.ಪಂ.ನಲ್ಲಿ ಪೂರ್ಣಕಾಲಿಕ ಎಂಜಿನಿಯರ್ ಇಲ್ಲ. ಬೆಳ್ತಂಗಡಿಯಿಂದ ವಾರಕ್ಕೊಮ್ಮೆ ಬರುವ ಎಂಜಿನಿಯರ್‌ಗೆ ಇಲ್ಲಿನ ಎಲ್ಲ ಕಾಮಗಾರಿಗಳನ್ನು ಸೂಕ್ತವಾಗಿ ಗಮನಿಸಲು ಸಾಧ್ಯವಾಗುತ್ತಿಲ್ಲ. ಕಡಬಕ್ಕೆ ಪೂರ್ಣಕಾಲಿಕ ಎಂಜಿನಿಯರ್ ನೇಮಿಸಿ ಈ ರೀತಿಯ ಕಳಪೆ ಕೆಲಸಗಳನ್ನು ತಡೆಯಲು ಆಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಮುಂ ದಾಳು ಗಿರೀಶ್ ಕೊರುಂದೂರು ಆಗ್ರಹಿಸಿದ್ದಾರೆ.
ಪರಿಶೀಲನೆ ನಡೆಸಿದ್ದಾರೆ: ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ನಮ್ಮ ಗಮನಕ್ಕೆ ತಂದಿದ್ದಾರೆ. ನಮ್ಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಎಂಜಿನಿಯರ್ ಮೂಲಕ ಸೂಕ್ತ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ವೈ.ಪಕೀರ ಮೂಲ್ಯ,ಮುಖ್ಯಾಧಿಕಾರಿ, ಕಡಬ ಪ. ಪಂ