ಭಟ್ಕಳ: ಭಟ್ಕಳ ಪುರಸಭೆಯಲ್ಲಿ ನಡೆದ ಕಾಮಗಾರಿಗಳು ಹಾಗೂ ಟೆಂಡರ್ ಮೂಲಕ ಸರಬರಾಜು ಮಾಡಿದ ವಸ್ತುಗಳ ಗುಣಮಟ್ಟ ನಿಯಾಮಾವಳಿಯಂತೆ ಇಲ್ಲದಿರುವುದು ಕಂಡು ಬಂದಿದ್ದು ಜಿಲ್ಲಾಧಿಕಾರಿಗಳು ಕೂಡಲೇ ಸೂಕ್ತ ತನಿಖೆ ನಡೆಸಬೇಕು ಎಂದು ಪುರಸಭಾ ಸದಸ್ಯ ಫಾಸ್ಕಲ್ ಗೋಮ್ಸ್ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶಿಮಜಿ ಅವರ ಅಧಿಕಾರದ ಅವಧಿಯಲ್ಲಿ ಕೈಗೊಂಡ ಇಲ್ಲಿನ ಮುಖ್ಯ ರಸ್ತೆಯ ಗಾರ್ಡನ್ ಕಾಮಗಾರಿ ಸಮರ್ಪಕವಾಗಿಲ್ಲ. ಕಾಮಗಾರಿ ಸ್ಥಳದಲ್ಲಿ 5 ಲಕ್ಷ ಎಂದು ಫಲಕ ಹಾಕಿದ್ದು ಗಾರ್ಡನ್‍ಗೆ 10 ಲಕ್ಷ ರೂಪಾಯಿ ಖರ್ಚು ಹಾಕಲಾಗಿದೆ. ಅಂದಾಜು ಪತ್ರದಲ್ಲಿ ಹಲವಾರು ಗಿಡಗಳ, ವಿವಿಧ ಜಾತಿಯ ಹೂವಿನ ಗಿಡಗಳ ಹೆಸರು ತೋರಿಸಲಾಗಿದೆ ಅಲ್ಲದೇ ಹುಲ್ಲು ಹಾಸಿಗೆ ಮಾಡಲು ಹೆಚ್ಚಿನ ಹಣ ವ್ಯಯಿಸಲಾಗಿದೆ ಎಂದ ಅವರು ಇನ್ನೇನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಒಂದೆರಡು ತಿಂಗಳಿನಲ್ಲಿ ಇದೇ ಜಾಗಾದಲ್ಲಿ ನಡೆಯುವುದಿದ್ದು ತುರ್ತಾಗಿ ಹೆದ್ದಾರಿ ಪಕ್ಕದಲ್ಲಿ ಗಾರ್ಡನ್ ಮಾಡುವ ಅಗತ್ಯತೆ ಏನಿತ್ತು? ಈ ಹಿಂದೆ ಕೂಡಾ 5 ಲಕ್ಷ ಖರ್ಚು ಮಾಡಿದ್ದು ಅದೇ ಗಾರ್ಡನ್‍ಗೆ ಮತ್ತೆ ಹತ್ತು ಲಕ್ಷ ಖರ್ಚು ಮಾಡಿದ್ದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಹಲವಾರು ಕಾಮಗಾರಿಯನ್ನು ಸದಸ್ಯರ ಗಮನಕ್ಕೆ ತಾರದೇ ಮಾಡಿದ್ದಾರೆ, ಎಲ್ಲವೂ ಸರಿಯಾಗಿಲ್ಲ ಎಂದ ಅವರು ಗುತ್ತಿಗೆದಾರರ ಮೂಲಕ ಮಾಡಿಸಿದ ಎಲ್ಲಾ ಕಾಮಗಾರಿಗಳು ಕೂಡಾ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಐಟಿ ಬಿಟಿ ರಂಗಕ್ಕೂ ಕೃಷಿ ಪ್ರವೇಶಿಸಿರುವುದು ಹೆಮ್ಮೆಯ ಸಂಗತಿ: ಸಚಿವ ಬಿ.ಸಿ.ಪಾಟೀಲ್
ಸಾಗರ ರಸ್ತೆಯಲಿರುವ ಘನತ್ಯಾಜ್ಯ ಘಟಕದಲ್ಲಿ 8 ಕೋಟಿ ರೂಪಾಯಿ ಮಂಜೂರಿಯಾಗಿದ್ದು ಯಾವುದೇ ಕಾಮಗಾರಿ ಸಮರ್ಪಕವಾಗಿಲ್ಲ, ವೈಜ್ಞಾನಿಕವಾಗಿ ಮಾಡಬೇಕಾದ ಕಾಮಗಾರಿಯೇ ಆಗಿಲ್ಲ, ಈ ಬಗ್ಗೆಯೂ ಕೂಡಾ ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶ ಮಾಡಬೇಕು ಎಂದು ಆಗ್ರಹಿಸಿದ ಅವರು ಶಿಕ್ಷಣ ಸಂಸ್ಥೆಗಳಲ್ಲಿ ಕೆಲವೊಂದು ಶಿಕ್ಷಣ ಸಂಸ್ಥೆಗಳಿಂದ ಮಾತ್ರ ಲಕ್ಷಾಂತರ ರೂಪಾಯಿ ಕಟ್ಟಡ ತೆರಿಗೆ ವಸೂಲ ಮಾಡಿದ ಇವರು ಉಳಿದ ಶಿಕ್ಷಣ ಸಂಸ್ಥೆಗಳಿಂದ ತೆರಿಗೆ ವಸೂಲಿ ಮಾಡಿಲ್ಲ ಯಾಕೆ? ಇವರ ಸ್ವಂತ ಕಟ್ಟಡದ ತೆರಿಗೆಯನ್ನು ಉಳಿಸಿಕೊಂಡಿರುವ ಕುರಿತೂ ತನಿಖೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಗರೀಕ ವೇದಿಕೆಯ ಅಧ್ಯಕ್ಷ ದೇವಯ್ಯ ನಾಯ್ಕ ಪುರಸಭಾ ಅಧ್ಯಕ್ಷರು ನಾಗರೀಕ ವೇದಿಕೆಯನ್ನು ಒಂದು ಸಣ್ಣ ವೇದಿಕೆ ಎಂದು ಪರಿಗಣಿಸಿದಂತಿದೆ. ನಮ್ಮ ವೇದಿಕೆಯು ಸಾರ್ವಜನಿಕರ ಅನೇಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಹೊನ್ನಾವರ ಸೇತುವೆಯ ಮೇಲೆ ಅನೇಕ ವರ್ಷಗಳಿಂದ ನಡೆಯುತ್ತಿದ್ದ ಟೋಲ್ ವಸೂಲಿಯನ್ನು ನಿಲ್ಲಿಸಿದ್ದನ್ನು ಅವರು ಮರೆತಂತಿದೆ ಎಂದರು.
ಈ ಸಂದರ್ಭದಲ್ಲಿ ನಾಗರೀಕ ವೇದಿಕೆಯ ಗೌರವಾಧ್ಯಕ್ಷ, ನ್ಯಾಯವಾದಿ ದತ್ತಾತ್ರೇಯ ನಾಯ್ಕ ಉಪಸ್ಥಿತರಿದ್ದರು.