ಕವಿತಾಳ: ಪಟ್ಟಣದ ನಿವಾಸಿಗಳ ಬಹುದಿನಗಳ ಬೇಡಿಕೆಯಂತೆ ಕವಿತಾಳ ಪಟ್ಟಣಕ್ಕೆ ಶುದ್ಧ ಶಾಶ್ವತ ಕುಡಿಯುವ ನೀರು ಪೂರೈಕೆಗಾಗಿ 73 ಕ್ಯಾಂಪ್ ಬಳಿ 13 ಎಕರೆ ಜಮೀನಿನಲ್ಲಿ ಬೃಹತ್ ಕೆರೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, 876 ಲಕ್ಷ ವೆಚ್ಚದಲ್ಲಿ ಬೃಹತ್ ಕೆರೆ ನಿರ್ಮಿಸಲಾಗುತ್ತಿದೆ.
ಪಟ್ಟಣದ ನಿವಾಸಿಗಳು ಶಾಸಕ ಹಂಪಯ್ಯ ನಾಯಕ ಅವರಿಗೆ ಕುಡಿಯುವ ನೀರಿಗಾಗಿ ಕೆರೆ ನಿರ್ಮಿಸುವಂತೆ ಮನವಿ ಸಲ್ಲಿಸಿದ್ದರು. ಸಹಾಯಕ ಕಾರ್ಯಪಾಲಕ ಅಭಿಯಂತರರ ಕಾರ್ಯಾಲಯ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಕವಿತಾಳ ಮತ್ತು ಪರಸಾಪುರ ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮುಂದಿನ 20 ವರ್ಷಗಳವರೆಗೆ ಯಾವುದೇ ರೀತಿ ಕುಡಿಯುವ ನೀರಿನ ಸಮಸ್ಯೆ ಆಗಬಾರದೆಂಬ ದೃಷ್ಟಿಯಿಂದ ಕೆರೆ ನಿರ್ಮಿಸಲಾಗುತ್ತಿದೆ.
ಕೆರೆ ವಿವರ: ಕವಿತಾಳ ಪಟ್ಟಣಕ್ಕೆ ಒಳಪಡುವ 73 ಕ್ಯಾಂಪ್ ವ್ಯಾಪ್ತಿಯಲ್ಲಿ ಬರುವ ನೀರಾವರಿ ಇಲಾಖೆಗೆ ಒಳಪಡುವ ಸರಕಾರಿ ಭೂಮಿಯಲ್ಲಿ ಕೆರೆ ನಿರ್ಮಿಸಲಾಗುತ್ತಿದೆ. ನೀರಾವರಿ ಇಲಾಖೆಗೆ ಒಟ್ಟು 24 ಎಕರೆ ಭೂಮಿ ಇದ್ದು, ಈ ಪೈಕಿ ಕಾಲುವೆ ನಿರ್ಮಾಣಕ್ಕೆ 5.30 ಗುಂಟೆ ಹೋಗಿದೆ. ಇನ್ನುಳಿದ 9.25 ಎಕರೆ ಸೇರಿ ಖಾಸಗಿ ಭೂಮಿ ಖರೀದಿಸಿ ಒಟ್ಟು 13 ಎಕರೆ ಜಮೀನಿನಲ್ಲಿ ಬೃಹತ್ ಕೆರೆ ನಿರ್ಮಿಸಲಾಗುತ್ತಿದೆ.
ಭರದಿಂದ ಕಾಮಗಾರಿ: ಕೆರೆ ನಿರ್ಮಾಣ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು, ಸ್ವಲ್ಪ ಕೆಲಸ ಬಾಕಿ ಇದೆ. ಸಂಪು ಮತ್ತು ಶುದ್ಧೀಕರಣ ಘಟಕ ನಿರ್ಮಿಸುವ ಕೆಲಸ ನಡೆದಿದೆ. ಕೆರೆಯಿಂದ ಕವಿತಾಳ ಪಟ್ಟಣದವರೆಗೆ ಪೈಪ್‌ಲೈನ್ ಕಾಮಗಾರಿ ನಡೆದಿದೆ. ಇನ್ನು ಜಾಕ್‌ವೆಲ್ ಕಾಮಗಾರಿ ಆರಂಭಿಸುವುದು ಮಾತ್ರ ಬಾಕಿ ಉಳಿದಿದೆ ಎನ್ನುತ್ತಾರೆ ಅಧಿಕಾರಿಗಳು.
ಕೆರೆ ಕಾಮಗಾರಿ ಪೂರ್ಣಗೊಳಿಸಲು ಸೆಪ್ಟೆಂಬರ್ ತಿಂಗಳವರೆಗೆ ಕಾಲಾವಕಾಶವಿದೆ. ಆದರೆ ಆಗಸ್ಟ್ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶವಿದೆ.
ಅಮರಗುಂಡಪ್ಪ ಮೇಟಿ, ಗುತ್ತಿಗೆದಾರ.
ಮೂರು ತಿಂಗಳಲ್ಲಿ ಕವಿತಾಳ ಕೆರೆ ಕಾಮಗಾರಿ ಪೂರ್ಣಗೊಳ್ಳಲಿದೆ. ಕಾಲುವೆಗೆ ನೀರು ಬಂದ ನಂತರ ಕೆರೆ ಭರ್ತಿ ಮಾಡಿ ಉದ್ಘಾಟಿಸಲಾಗುವುದು.
ಗಣಪತಿ ಸಾಕರೆ, ಮಾನ್ವಿ ಜಿಪಂ ಎಇಇ
ಮೌನೇಶ ಕವಿತಾಳ