ನೆಲಮಂಗಲ: ಚಿತ್ರರಂಗದಲ್ಲಿ ದೊಡ್ಡ ಮೈಲಿಗಲ್ಲು ಸಾಧಿಸಿರುವ ಲೀಲಾವತಿ ಅವರು ಬದುಕಿದ್ದಾಗಲೂ ಮಾದರಿಯಾಗಿದ್ದರು. ಮುಂದೆಯೂ ಅವರ ಸ್ಮಾರಕ ಕಲಾವಿದರಿಗೆ ಪ್ರೇರಣೆ ಆಗಲಿ ಎಂದು ಆಹಾರ ಮತ್ತು ನಾಗರಿಕ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಸೋಲದೇವನಹಳ್ಳಿ ಗ್ರಾಮದಲ್ಲಿ ಹಿರಿಯ ನಟಿ ಲೀಲಾವತಿ ಅಂತ್ಯಕ್ರಿಯೆ ಮಾಡಿದ ಸ್ಥಳದಲ್ಲಿ ಭವ್ಯ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಸ್ವತಃ ಹಣ: ಹಿರಿಯ ನಟಿ ಲೀಲಾವತಿ ಅವರು ಚಿತ್ರರಂಗದ ತುಂಬಿದ ಕೊಡವಿದ್ದಂತೆ. ಲೀಲಾವತಿ ಯವರ ಸ್ಮಾರಕ ನಿರ್ಮಾಣಕ್ಕೆ ವಿನೋದ್‌ರಾಜ್ ಮುಂದಾಗಿರುವುದು ಸಂತೋಷ. ಸರ್ಕಾರದ ಹಣ ಕೇಳದೇ, ಸ್ವಂತ ಹಣದಲ್ಲಿ ಮಾಡುತ್ತಿದ್ದಾರೆ. ಲೀಲಾವತಿ ಯವರ ಜೀವನದ ಶ್ರೇಷ್ಠತೆ ಸಾರುವ ವಿಚಾರಗಳ ಜತೆ ಸ್ಮಾರಕ ನಿರ್ಮಾಣ ಅದ್ಭುತವಾಗಿದೆ ಎಂದು ಹೇಳಿದರು.
ಮಾದರಿ: ವಿನೋದ್ ರಾಜ್ ಜತೆ ಸ್ಮಾರಕ ನಿರ್ಮಾಣದ ಸಮಯದಲ್ಲಿ ನಾವೆಲ್ಲರೂ ಜತೆಯಾಗಿರುತ್ತೇವೆ. ಲೀಲಾವತಿ ಅವರು ಮಾಡಿರುವ ಸೇವೆ ಸಮಾಜಕ್ಕೆ ಮಾದರಿಯಾಗಿದ್ದು ಅವರ ಸಿನಿಮಾಗಳಲ್ಲಿ ನೀತಿ ಪಾಠ ಕಾಣಬಹುದಾಗಿತ್ತು. ಆದರೆ, ಇವತ್ತಿನ ದಿನಗಳ ಸಿನಿ ಮಾಗಳಲ್ಲಿ ಆ ಕೊರತೆ ಹೆಚ್ಚಾಗಿ ಕಾಣುತ್ತಿದೆ ಎಂದರು. ನಟ ವಿನೋದ್‌ರಾಜ್ ಮಾತನಾಡಿ, ಅಮ್ಮನ ಮೊದಲ ಸಿನಿಮಾದಿಂದ ಕೊನೇ ಸಿನಿಮಾದವರೆಗೆ ಗ್ಯಾಲರಿ ನಿರ್ಮಾಣ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ನುಡಿದರು.
ಭೂಮಿ ಪೂಜೆ: ಹಿರಿಯ ನಟಿ ಲೀಲಾವತಿ ಅವರ ಸ್ಮಾರಕ ನಿರ್ಮಾಣಕ್ಕೆ ಪುತ್ರ ವಿನೋದ್‌ರಾಜ್, ಸೊಸೆ ಅನು, ಮೊಮ್ಮಗ ಯುವರಾಜ್ ರಿಂದ ಸಮಾಧಿಗೆ ಪೂಜೆ ಮಾಡಲಾಯಿತು. ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ಎನ್. ಶ್ರೀನಿವಾಸ್ ಭೂಮಿ ಪೂಜೆ ಮಾಡಿ ಭವ್ಯ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಿದರು. ಸಚಿವರು ಲೀಲಾವತಿ ಅವರ ಸ್ಮಾರಕದ ಮಾದರಿ ವೀಕ್ಷಣೆ ಮಾಡಿ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಎಂ.ಗೌಡ, ಪುರಸಭೆ ಮಾಜಿ ಅಧ್ಯಕ್ಷ ನಾರಾಯಣಗೌಡ, ಮುಖಂಡರಾದ ಟಿ.ನಾಗರಾಜು, ಸಿ.ಎಂ.ಗೌಡ, ಮಿಲ್ಟ್ರಿ ಮೂರ್ತಿ, ಜಗದೀಶ್, ಸೋಮಶೇಖರ್, ಮಂಜುನಾಥಯ್ಯ, ಮನುಗೌಡ, ಭೂಸಂದ್ರ ಚಿಕ್ಕಣ್ಣ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷ ನಟಿ ಲೀಲಾವತಿ ಸ್ಮಾರಕದ ಮಾದರಿ. ಹಾಗೂ ಸದಸ್ಯರು, ಕಲಾವಿದರು ಉಪಸ್ಥಿತರಿದ್ದರು.
980 ಎಕರೆ ಮತ್ತೆ ಸರ್ವೆ : ತಾಲೂಕಿನ ಸೋಲದೇವನಹಳ್ಳಿ ಭಾಗದ 980 ಎಕರೆ ಭೂಮಿಯನ್ನು ಅರಣ್ಯ ಇಲಾಖೆ ನಮ್ಮದು ಎಂದು ರೈತರಿಗೆ ನೋಟಿಸ್ ನೀಡಿದೆ. ಅನಾದಿ ಕಾಲದಿಂದಲೂ ಉಳುಮೆ ಮಾಡಿಕೊಂಡು ಬಂದಿರುವ ರೈತರನ್ನು ಒಕ್ಕಲೆಬ್ಬಿಸುವ ಕೆಲಸವಾಗುತ್ತಿದ್ದು ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ಮತ್ತೆ ಸರ್ವೆ ಮಾಡಿ ರೈತರಿಗೆ ನ್ಯಾಯ ನೀಡಬೇಕು ಎಂದು ನಟ ವಿನೋದ್ ರಾಜ್ ಅವರು ಸಚಿವ ಕೆ.ಎಚ್.ಮುನಿಯಪ್ಪ ಅವರಲ್ಲಿ ಮನವಿ ಮಾಡಿದರು.
ಹಣ ಅಪೇಕ್ಷೆ ಪಡಲ್ಲ: ಅಮ್ಮನ ಸಮಾಧಿ ಕೇವಲ ಸಮಾಧಿ ಅಲ್ಲ, ಅದು ಒಂದು ಆಧ್ಯಾತ್ಮಿಕ ಕ್ಷೇತ್ರವನ್ನಾಗಿ ಮಾಡುತ್ತೇನೆ. ತಾಯಿಯ ಸ್ಮಾರಕವನ್ನು ನನ್ನ ಆಸೆಯಂತೆ ನಿರ್ಮಿಸಲು ನಿರ್ಧರಿಸಿದ್ದೇನೆ. ಸುಮಾರು 55 ಲಕ್ಷ ರೂ.,ವೆಚ್ಚದಲ್ಲಿ ಸ್ಮಾರಕ ನಿರ್ಮಾಣವಾಗಲಿದ್ದು ಸರ್ಕಾರದಿಂದ ಯಾವುದೇ ಅಪೇಕ್ಷೆ ಪಡದೆ ನಾವೇ ಸ್ಮಾರಕ ಕಟ್ಟಲು ತೀರ್ಮಾನ ಮಾಡಿದ್ದೇನೆ. ಯಾವುದೇ ಹಣವನ್ನು ಯಾರಿಂದಲೂ ಅಪೇಕ್ಷೆ ಪಡೆಯುವುದಿಲ್ಲ ಎಂದು ನಟ ವಿನೋದ್‌ರಾಜ್ ತಿಳಿಸಿದರು.