ಮೆಲ್ಬೋರ್ನ್: ಭಾರತ ತಂಡ ಸಾಲು ಸಾಲು ಸರಣಿಗಳನ್ನು ಗೆದ್ದು ಬೀಗುತ್ತಿದೆ. ಭಾರತದ ಬೌಲರ್ ಗಳು ಮಾರಕ ದಾಳಿ ನಡೆಸುತ್ತಿದ್ದು, ಟೆಸ್ಟ್ ನಲ್ಲಿ ಅಗ್ರ ಸ್ಥಾನಿಯಾಗಿ ಮೆರೆಯುತ್ತಿದೆ. ಆದರೆ ಆಸೀಸ್ ನ ಮಾಜಿ ನಾಯಕ ರಿಕಿ ಪಾಂಟಿಂಗ್ ಭಾರತಕ್ಕಿಂತ ಆಸ್ಟ್ರೇಲಿಯಾದ ಬೌಲಿಂಗ್ ದಾಳಿಯೇ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ನೆಲದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಕಳೆದ ಎರಡು ವರ್ಷಗಳಿಂದ ಅದ್ಭುತ ದಾಳಿ ಸಂಘಟಿಸುತ್ತಿದ್ದಾರೆ. ಉಮೇಶ್ ಯಾದವ್ ಮತ್ತು ಇಶಾಂತ್ ಶರ್ಮಾ ಕೂಡಾ ಉತ್ತಮ ಬೆಂಬಲ ನೀಡುತ್ತಿದ್ದಾರೆ. ಅಶ್ವಿನ್ ಮತ್ತು ಜಡೇಜಾ ಬೆಂಬಲ ಸಿಕ್ಕರೆ ಭಾರತದ ಬೌಲಿಂಗ್ ದಾಳಿ ಸದೃಢವಾಗಿದೆ ಎಂದು ಪಂಟರ್ ಹೇಳಿದ್ದಾರೆ.
ಆದರೆ ಭಾರತದ ಸ್ಪಿನ್ನರ್ ಗಳು ಆಸ್ಟ್ರೇಲಿಯಾದಲ್ಲಿ ಕಷ್ಟಪಡುತ್ತಾರೆ. ಆಸೀಸ್ ನೆಲದಲ್ಲಿ ಭಾರತದ ಬೌಲರ್ ಗಳಿಗಿಂತ ನಾಥನ್ ಲಯಾನ್ ಉತ್ತಮ ಪ್ರದರ್ಶಬ ತೋರುತ್ತಾರೆ. ಇದರ ಜೊತೆಗೆ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಆಸೀಸ್ ಗೆ ಹೆಚ್ಚುವರಿ ಶಕ್ತಿ ತುಂಬುತ್ತಾರೆ. ಹೀಗಾಗಿ ಆಸೀಸ್ ಬೌಲಿಂಗ್ ದಾಳಿ ಭಾರತಕ್ಕಿಂತ ಉತ್ತಮವಾಗಿದೆ ಎಂದು ಪಾಂಟಿಂಗ್ ಅಭಿಪ್ರಾಯಪಟ್ಟರು.
ಪಾಕಿಸ್ಥಾನ ವಿರುದ್ಧದ ಎರಡು ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ 176 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಭಾರತ 360 ಅಂಕಗಳಿಂದ ಮೊದಲ ಸ್ಥಾನದಲ್ಲಿದೆ.