ಚಿಕ್ಕಬಳ್ಳಾಪುರ: ರೈತರ ತೋಟಗಳಿಗೆ ರಾತ್ರೋರಾತ್ರಿ ನುಗ್ಗಿ ಬೆಲೆ ಬಾಳುವ ಲಕ್ಷಾಂತರ ರೂ. ಮೌಲ್ಯದ ದಾಳಿಂಬೆ ಹಣ್ಣುಗಳನ್ನು ಕದ್ದು ಸಿನಿಮೀಯ ರೀತಿಯಲ್ಲಿ ಪರಾರಿಯಾಗುತ್ತಿದ್ದ ಕಳ್ಳರನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ತಾಲೂಕಿನ ಕುರ್ಲಹಳ್ಳಿ ಗ್ರಾಮದ ನಿವಾಸಿಗಳಾದ ಕೆ.ಬಿ.ರಾಜು (23) ಹಾಗೂ ದೊಡ್ಡೆಗಾನಹಳ್ಳಿ ಗ್ರಾಮದ ನಿವಾಸಿ ಕೆ.ಶ್ರೀಕಾಂತ್ (18) ಎಂದು ಗುರುತಿಸ ಲಾಗಿದೆ.
ಆರೋಪಿಗಳು ಇತ್ತೀಚೆಗೆ ತಾಲೂಕಿನ ಅಜ್ಜವಾರ ಹಾಗೂ ಸಾದೇನಹಳ್ಳಿ ಗ್ರಾಮದಲ್ಲಿರುವ ದಾಳಿಂಬೆ ತೋಟಗಳಿಗೆ ರಾತ್ರೋರಾತ್ರಿ ನುಗ್ಗಿ, ಸುಮಾರು 4 ಟನ್‌ನಷ್ಟು ದಾಳಿಂಬೆ ಹಣ್ಣುಗಳನ್ನು ಕಳವು ಮಾಡಿದ್ದರು. ನಂತರ ಅವುಗಳನ್ನು ಚಿಕ್ಕಬಳ್ಳಾಪುರಕ್ಕೆ ತಂದು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್ ವಿಚಾರಣೆ ವೇಳೆ ಆರೋಪಿ ಗಳು ಬಾಯಿ ಬಿಟ್ಟಿದ್ದಾರೆ.
ತಾಲೂಕಿನಲ್ಲಿ ಇತ್ತೀಚೆಗೆ ದಾಳಿಂಬೆ ಹಣ್ಣುಗಳ ಕಳವು ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್ .ನಾಗೇಶ್ ಮಾರ್ಗದರ್ಶನದಲ್ಲಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಖರೀದಿದಾರರೂ ಅಂದರ್: ರೈತರ ತೋಟಗಳಲ್ಲಿ ದಾಳಿಂಬೆ ಹಣ್ಣುಗಳನ್ನು ಕದ್ದು ತರುತ್ತಿದ್ದ ರಾಜು ಹಾಗೂ ಶ್ರೀಕಾಂತ್ ಬಳಿ ಹಣ್ಣು ಖರೀದಿ ಮಾಡುತ್ತಿದ್ದ ಚಿಕ್ಕಬಳ್ಳಾಪುರ ನಗರದ ಹಣ್ಣು ವ್ಯಾಪಾರಿಗಳಾದ ಸೈಯದ್ ಮನ್ಸೂರ್ ಹಾಗೂ ಅಗಲಗುರ್ಕಿ ಗ್ರಾಮದ ಹಣ್ಣಿನ ವ್ಯಾಪಾರಿ ಎಸ್ .ನಂಜುಂಡ ಅವರನ್ನೂ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.