Advertisement
ಇದು ಯಾವುದೋ ಗ್ರಾಮೀಣ ಭಾಗದ ಆಸ್ಪತ್ರೆಯ ಕಥೆಯಲ್ಲ. ನಗರದ ಹೃದಯ ಭಾಗದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರ ಕಚೇರಿಯ ಎದುರೇ ಇರುವ ಪಾಲಿಕ್ಲಿನಿಕ್‌ನ ವ್ಯಥೆ. ಜಿಲ್ಲೆಯಲ್ಲಿ 2014ರಿಂದ ಜಿಲ್ಲಾಸ್ಪತ್ರೆ ಪರಿಕಲ್ಪನೆಯಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಡಿ ಪಾಲಿಕ್ಲಿನಿಕ್ ಆರಂಭಗೊಂಡು ಎಂಟು ವರ್ಷಗಳೇ ಸಂದಿದೆ. ಇದೀಗ ಸುಸಜ್ಜಿತ ಹೊಸ ಕಟ್ಟಡದಲ್ಲಿ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಕಾರ್ಯಾರಂಭ ಮಾಡಿರುವ ಈ ಕ್ಲಿನಿಕ್ ಗೆ ಕೆಲವೊಂದಿಷ್ಟು ಮೂಲಸೌಕರ್ಯಗಳ ಕೊರತೆ ಎದುರಾಗಿದೆ. ಸುಸಜ್ಜಿತ ಕಟ್ಟಡವಿದ್ದು, ಆದರೆ ಆಸ್ಪತ್ರೆಗೆ ಹೋಗಲು ಬೇಕಾದ ಸುಸಜ್ಜಿತ ರಸ್ತೆಯೇ ಇಲ್ಲ. ಮಳೆಗಾಲದಲ್ಲಿ ಆಸ್ಪತ್ರೆಯ ಆವರಣ ಕೆಸರು ಗದ್ದೆಯಂತಾಗುವುದು ಸಾಮಾನ್ಯವಾಗಿ ಬಿಟ್ಟಿದೆ.
Related Articles
Advertisement
ಪಶುಗಳಿಗೆ ಔಷಧ ಶಾಸ್ತ್ರ, ಶಸ್ತ್ರಚಿಕಿತ್ಸೆ, ಬಂಜೆತನ ನಿವಾರಣೆ ಮತ್ತು ಪ್ರಸೂತಿ ಶಾಸ್ತ್ರ ಈ ಮೂರು ವಿಭಾಗದಲ್ಲಿ ತಜ್ಞ ವೈದ್ಯರನ್ನು ಕೊಡಬೇಕೆಂಬುದೇ ಈ ಪಾಲಿಕ್ಲಿನಿಕ್ ಉದ್ದೇಶ. ಸದ್ಯ ಈ ಮೂರು ವಿಭಾಗದಲ್ಲಿ ತಜ್ಞರ ಕಾರ್ಯನಿರ್ವಹಣೆಯಿಂದ ಜಾನುವಾರುಗಳಿಗೆ ಅನುಕೂಲ ಆಗಿದೆ. ಆದರೆ ಈ ತಜ್ಞರಿಗೆ ಸಹಾಯ ಮಾಡಲು ಸಿಬ್ಬಂದಿ ಕೊರತೆಯೇ ಬಹಳಷ್ಟಿದೆ. ಕ್ಲಿನಿಕ್ ಗೆ ನಾಲ್ಕು ಡಿ ದರ್ಜೆ ಸಿಬ್ಬಂದಿ ಹುದ್ದೆಯಿದ್ದು, ಒಂದೇ ಹುದ್ದೆ ಭರ್ತಿಯಿದೆ. ಎಕ್ಸರೇ ಹಾಗೂ ಪ್ರಯೋಗಾಲಯದ ಸಿಬ್ಬಂದಿಯೂ ಬೇಕಿದ್ದು, ವಾಹನ ಚಾಲಕ ಹುದ್ದೆಯೂ ಖಾಲಿ ಇದೆ.
ಚಾಲಕನಿಲ್ಲದ “ಪಶು ಸಂಜೀವಿನಿ’ ವಾಹನ
ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಪಶು ಸಂಜೀವಿನಿ ಎಂಬ ಸುಸಜ್ಜಿತ ಪಶು ಶಸ್ತ್ರಚಿಕಿತ್ಸಾ ವಾಹನವನ್ನು ಈ ಪಾಲಿಕ್ಲಿನಿಕ್‌ಗೆ ಕೊಟ್ಟು 2-3 ವರ್ಷಗಳೇ ಆಗಿದೆ. ಆದರೆ ಈ ವಾಹನ ಮಾತ್ರ ಆಸ್ಪತ್ರೆ ಆವರಣ ಬಿಟ್ಟು ಹೊರಗಡೆ ಹೋಗಿಲ್ಲ. ಈ ವಾಹನ ಚಾಲಕ ಹುದ್ದೆ ಖಾಲಿ ಇದ್ದು, ವಾಹನ ಆಸ್ಪತ್ರೆ ಎದುರೇ ನಿಲ್ಲುವಂತಾಗಿದೆ. ಮಳೆ-ಗಾಳಿಯಿಂದ ವಾಹನ ನಿಂತಲ್ಲಿಯೇ ನಿಂತು ಹಾಳಾಗಿದ್ದರೂ ಚಾಲಕ ಹುದ್ದೆ ಭರ್ತಿ ಮಾಡಿ, ವಾಹನ ಕಾರ್ಯಾರಂಭಕ್ಕೆ ಮಾತ್ರ ಯಾರೂ ಮನಸ್ಸೇ ಮಾಡುತ್ತಿಲ್ಲ.
ಪಾಲಿಕ್ಲಿನಿಕ್‌ಗೆ ಬೇಕಾಗಿರುವ ಸಿಬ್ಬಂದಿ, ಎಕ್ಸರೇ ಯಂತ್ರಗಳ ಕೊರತೆ ನೀಗಿಸಲು ಇಲಾಖೆ ವತಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಈಡೇರಿದರೆ ಜಾನುವಾರುಗಳ ಚಿಕಿತ್ಸೆಗೆ ಮತ್ತಷ್ಟು ಅನುಕೂಲ ಆಗಲಿದೆ. –ಡಾ| ಜಂಬುನಾಥ ಆರ್. ಗದ್ದಿ, ಉಪನಿರ್ದೇಶಕರು, ಪಾಲಿಕ್ಲಿನಿಕ್, ಧಾರವಾಡ
-ಶಶಿಧರ್ ಬುದ್ನಿ