ಬೀದರ: ಮಾಲಿನ್ಯ ನಿಯಂತ್ರಣದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅಪಾರವಾಗಿದೆ ಎಂದು ಪಶು ವೈದ್ಯಕೀಯ ವಿವಿ ಸಂಶೋಧನಾ ನಿರ್ದೇಶಕ ಡಾ| ಬಿ.ವಿ ಶಿವಪ್ರಕಾಶ ನುಡಿದರು.
ನಗರದ ಕರ್ನಾಟಕ ಕಾಲೇಜಿನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನದ ತಾಂತ್ರಿಕ ಅಧಿ ವೇಶನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಅವರು, ಪರಿಸರದಲ್ಲಿ ಅಸಮತೋಲನಕ್ಕೆ ಜಲ, ಮಣ್ಣು ಮತ್ತು ವಾಯು ಮಾಲಿನ್ಯ ಪ್ರಮುಖ ಕಾರಣವಾಗಿದೆ. ಜ್ವಾಲಾಮುಖೀ, ಕಾಗ್ಗಿಚ್ಚು, ಕಾರ್ಖಾನೆ ಹೊಗೆ, ಟೈರ್ ಸುಡುವುದರಿಂದ ವಾಯು ಮಾಲಿನ್ಯ ಉಂಟಾಗುತ್ತಿದೆ. ಇಂಗಾಲದ ಅಪೂರ್ಣ ದಹನದಿಂದ ಕಾರ್ಬನ್ ಮೋನಾಕ್ಲೈಡ್ ಉಂಟಾಗಿ ವಿಪರೀತ ಮೆದುಳು ರೋಗಗಳು ಹಾಗೂ ಉಸಿರಾಟದ ತೊಂದರೆ ಉಂಟಾಗುತ್ತಿದೆ. ಇದಕ್ಕೆ ಸ್ವಯಂ ಶುಚಿ, ಚದುರುವಿಕೆ ಮತ್ತು ಮಳೆ ನೀರಿನ ಶುದ್ಧತೆಯಿಂದ ವಾಯು ಮಾಲಿನ್ಯ ತಡೆಗಟ್ಟಬಹುದು ಎಂದರು.
ಭೂಮಿಯಲ್ಲಿ ಮಣ್ಣು ತಯಾರಾಗಲು ಹತ್ತು ವರ್ಷಗಳೇ ಬೇಕು. ಆದರೆ, ಅದನ್ನು ಕ್ಷಣ ಮಾತ್ರದಲ್ಲಿ ಹಾಳು ಮಾಡುತ್ತಿದ್ದೇವೆ. ವಾತಾವರಣದಲ್ಲಿ ಮಾಲಿನ್ಯ ತಡೆಗಟ್ಟಬೇಕಾದರೆ ವಿದ್ಯುತ್ ಯಂತ್ರಗಳಿಂದ ಶರೀರ ಸುಡುವುದು, ಕಂಪನಿಗಳಿಗೆ ತ್ಯಾಜ್ಯ ವಸ್ತು ಹೊರಚೆಲ್ಲದಂತೆ ಸೂಚನೆ ನೀಡುವುದು, ಬಯೋಫಿಲ್ಟರ್ ಹಾಗೂ ವೆಟ್ ಸ್ಕ್ರಬ್ಬರ್ ಯಂತ್ರದ ಮೂಲಕ ಹಾಗೂ ಸಾರ್ವಜನಿಕ ಜಾಗೃತಿ, ತ್ಯಾಜ್ಯ ಮರುಬಳಕೆ-ವಿಲೇವಾರಿ ಸಮರ್ಪಕವಾಗಿ ಮಾಡುವುದರಿಂದ ಮಾಲಿನ್ಯ ತಡೆಗಟ್ಟಬಹುದು ಎಂದರು.
ಇಂದು ಪ್ಲಾಸ್ಟಿಕ್ ವಾತಾವರಣದಲ್ಲಿ ಅತಿ ಹೆಚ್ಚು ಬಳಸುವ ವಸ್ತುವಾಗಿದೆ. ಪ್ಲಾಸ್ಟಿಕ್ ತಯಾರಿಕೆಯಲ್ಲಿ ಮಹಾರಾಷ್ಟ್ರ ನಂ.1 ಸ್ಥಾನದಲ್ಲಿದೆ. ಹೀಗಾಗಿ ಒಂದೇ ಸಾರಿ ಪ್ಲಾಸ್ಟಿಕ್ ಬಳಕೆ ನಿಷೇಧ ಅಸಾಧ್ಯ. ಇದರ ಮೇಲೆ ಸಾವಿರಾರು ಕಾರ್ಮಿಕರು ಅವಲಂಬಿತರಾಗಿದ್ದಾರೆ. ಆದರೆ, ಅವರಿಗೆ ಪರ್ಯಾಯ ವ್ಯವಸ್ಥೆ ಮಾಡುವುದರ ಮುಖಾಂತರ ಅಥವಾ ಸರ್ಕಾರಗಳು ಉಗ್ರ ಕಾನೂನು ಜಾರಿಗೆ ತರುವ ಮುಖಾಂತರ ಪ್ಲಾಸ್ಟಿಕ್ ನಿಷೇಧ ಮಾಡಬಹುದು ಎಂದು ತಿಳಿಸಿದರು.
ವಿಶ್ರಾಂತ ಕುಲಪತಿ ಪ್ರೊ| ಬಿ.ಜಿ. ಮೂಲಿಮನಿ, ಸಿದ್ರಾಮ ಪಾರಾ, ಮಹಾದೇವೇಗೌಡ, ಡಾ| ಉದಯಶಂಕರ ಪುರಾಣಿಕ, ಪ್ರಾಚಾರ್ಯ ಡಾ| ಮಲ್ಲಿಕಾರ್ಜುನ ಚೆಲ್ವಾ, ಪ್ರೊ| ಎಸ್.ವಿ ಕಲ್ಮಠ ಮತ್ತಿತರರಿದ್ದರು.