Advertisement

ಕರದಾತರ ಅಭಿಪ್ರಾಯಕ್ಕೆ ಪಾಲಿಕೆ ಮಣೆ

12:50 PM Jul 18, 2017 | |

ಹುಬ್ಬಳ್ಳಿ: ಘನತ್ಯಾಜ್ಯ ನಿರ್ವಹಣೆ ಹೆಸರಲ್ಲಿ ಜನರ ಮೇಲೆ ಹೆಚ್ಚುವರಿ ಸೆಸ್‌ ಹಾಕುವುದಕ್ಕೆ ಪಾಲಿಕೆ ಸಾಮಾನ್ಯ ಸಭೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಹಾಪೌರ ಡಿ.ಕೆ. ಚವ್ಹಾಣ ಸೆಸ್‌ ಆಕರಣೆ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಿ ಮತ್ತೂಮ್ಮೆ ಸಭೆಯಲ್ಲಿ ಮಂಡಿಸುವಂತೆ ಆಯುಕ್ತರಿಗೆ ಆದೇಶಿಸಿದರು. 

Advertisement

ಸೋಮವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಘನತ್ಯಾಜ್ಯ ನಿರ್ವಹಣೆ ಸೆಸ್‌ ಆಕರಣೆ ವಿಷಯ ಮಂಡನೆ ಮಾಡಿದಾಗ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಡಾ| ಪಾಂಡುರಂಗ ಪಾಟೀಲ, ಒಂದೇ ಆಸ್ತಿ ಮೇಲೆ ಎಷ್ಟು ವಿಧವಾದ ಕರ ಹಾಕಬಹುದಾಗಿದೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು. 

ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆ ಆಧಾರದಲ್ಲಿ ಘನತ್ಯಾಜ್ಯ ನಿರ್ವಹಣೆ ಹೆಚ್ಚುವರಿ ಸೆಸ್‌ ಹಾಕುವುದು ಎಷ್ಟರ ಮಟ್ಟಿಗೆ ಸರಿ, ಕರ ಇಲ್ಲವೆ ಸೆಸ್‌ ಆಕರಣೆಗೆ ಕರದಾತರ ಒಪ್ಪಿಗೆ ಅವಶ್ಯವಾಗಿದೆ. ಈಗಾಗಲೇ ಆಸ್ತಿಕರದಲ್ಲಿಯೇ ಮೂಲ ಸೌಲಭ್ಯಗಳ  ನೀಡಿಕೆಗಾಗಿಯೇ ಕರ-ಸೆಸ್‌ ಹಾಕಲಾಗುತ್ತಿದೆ. ಇದೀಗಮತ್ತೂಂದು ಸೆಸ್‌ ಎಂಬುದು ಬಹುವಿಧವಾದ ಕರ ಹಾಕಿದಂತಾಗಲಿದೆ ಎಂದರು. 

ಕಾಂಗ್ರೆಸ್‌ನ ಗಣೇಶ ಟಗರಗುಂಟಿ, ಬಿಜೆಪಿಯ ಸುಧೀರ ಸರಾಫ್ ಸೇರಿದಂತೆ ಅನೇಕ ಸದಸ್ಯರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು. ಮಹಾಪೌರರು ಈ ಬಗ್ಗೆ ವಲಯವಾರು ನಾಗರಿಕರು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಅನಂತರ ಸೆಸ್‌ ನಿರ್ಧಾರ ಕೈಗೊಳ್ಳಬೇಕು.

ಅಲ್ಲಿವರೆಗೆ ಈ ಪ್ರಸ್ತಾವನೆ ಜಾರಿ ಮಾಡುವುದು ಬೇಡ ಎಂದು ಆದೇಶಿಸಿದರು. ಘನತ್ಯಾಜ್ಯ ನಿರ್ವಹಣೆಗಾಗಿ ಮನೆ, ವಾಣಿಜ್ಯ, ಕೈಗಾರಿಕೆ ಇನ್ನಿತರ ಕಟ್ಟಡಗಳ ಮೇಲೆ 10ರಿಂದ 600 ರೂ.ವರೆಗೆ ಸೆಸ್‌ ಆಕರಣೆಗೆ ಯೋಜಿಸಿ ಪ್ರಸ್ತಾವನೆ ಮಂಡಿಸಲಾಗಿತ್ತು. 

Advertisement

ಹಣದ ಕೊರತೆಯಿಲ್ಲ: ಶೌಚಾಲಯ ನಿರ್ಮಾಣ ವಿಷಯವಾಗಿ ಸದಸ್ಯರಾದ ಶಿವಪ್ಪ ಬಡವಣ್ಣವರ, ಮೋಹನ ಹಿರೇಮನಿ, ಸತೀಶ ಹಾನಗಲ್ಲ, ಶಿವಾನಂದ ಮುತ್ತಣ್ಣವರ ಮಾತನಾಡಿ, ಶೌಚಾಲಯ ಕಟ್ಟಿಕೊಳ್ಳಲು ಮುಂದಾದವರಿಗೆ ಸಹಾಯಧನ ಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿದರು. 

ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ಅವಳಿ ನಗರವನ್ನು ಬಹಿರ್ದೆಸೆ ಮುಕ್ತವಾಗಿಸುವ ನಿಟ್ಟಿನಲ್ಲಿ ವೈಯಕ್ತಿಕ ಹಾಗೂ ಸಾಮೂಹಿಕ ಶೌಚಾಲಯ ನಿರ್ಮಾಣಕ್ಕೆ ಯಾವುದೇ ಹಣದ ಕೊರತೆ ಇಲ್ಲ. ಶೌಚಾಲಯಗಳ ನಿರ್ಮಾಣದ ಕುರಿತಾಗಿ ಫೋಟೋ ತೆಗೆದು ಅಪ್‌ಲೋಡ್‌ ಮಾಡುವುದು ಬಿಲ್‌ ಕಲೆಕ್ಟರ್‌ಗಳ ಜವಾಬ್ದಾರಿ. 

ಕೆಲವರು ನಿರ್ಲಕ್ಷ್ಯ ವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಸಮಸ್ಯೆ ಇರುವ ವಾರ್ಡ್‌ಗಳ ಸದಸ್ಯರು ಲಿಖೀತ ದೂರು ನೀಡಿದಲ್ಲಿ ಅಂತಹ ಬಿಲ್‌ ಕಲೆಕ್ಟರ್‌ ಗಳನ್ನು ಅಮಾನತು ಮಾಡುವುದಾಗಿ ಹೇಳಿದರು. ಅವಳಿ ನಗರದಲ್ಲಿ ಅನೇಕರು ಶುಲ್ಕ ಪಾವತಿಸಿ ಖಾತಾ ಬದಲಾವಣೆಗೆ ಅರ್ಜಿ ಸಲ್ಲಿಸಿದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸದಸ್ಯರಾದ ಮಂಜುನಾಥ ಚಿತಗಿಂಜಲ, ಗಣೇಶ ಟಗರಗುಂಟಿ ಇನ್ನಿತರ ಸದಸ್ಯರು ಆರೋಪಿಸಿದರು.

ಡಾ| ಪಾಂಡುರಂಗ ಪಾಟೀಲ ಮಾತನಾಡಿ, ಸರಕಾರದ ಪತ್ರವನ್ನೇ ಕಾಯ್ದೆ ಎಂದುಕೊಂಡು ಪಾಲಿಗೆ ಬರಬೇಕಾದ ಆದಾಯ ಪಡೆಯದಿರುವುದು ಸರಿಯಲ್ಲ ಎಂದರು. ಖಾತೆಗಳ ವರ್ಗಾವಣೆ ಕುರಿತಾಗಿ ಹಳೇ ಪದ್ಧತಿಯನ್ನು ಜಾರಿಗೊಳಿಸುವಂತೆ ಮಹಾಪೌರರು ಆದೇಶಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next