Advertisement

ಗ್ರಾಮೀಣ ಭಾಗದಲ್ಲೂ ಕಲುಷಿತ ನೀರಿನ ಭೀತಿ!

05:34 PM Jun 16, 2022 | Team Udayavani |

ರಾಯಚೂರು: ನಗರದಲ್ಲಿ ಕಲುಷಿತ ನೀರು ಸೇವಿಸಿ ಸರಣಿ ಸಾವು ಸಂಭವಿಸುತ್ತಿರುವುದು ಗ್ರಾಮೀಣ ಭಾಗದ ಜನರ ನಿದ್ದೆಗೆಡಿಸಿದೆ. ಹಳ್ಳಿಗಳಲ್ಲೂ ಕೆಲವೆಡೆ ಅಶುದ್ಧ ನೀರೇ ಬರುತ್ತಿದ್ದು, ನಮಗೂ ವಾಂತಿ  ಬಂದರೆ ಏನು ಗತಿ ಎಂಬ ಭಯ ಶುರುವಾಗಿದೆ.

Advertisement

ತಾಲೂಕಿನ ಗೋನಾಲ ಗ್ರಾಮದಲ್ಲಿ ಕಲುಷಿತ ನೀರು ಸರಬರಾಜಾಗುತ್ತಿದ್ದು, ಗ್ರಾಮದಲ್ಲೂ ವ್ಯಕ್ತಿಯೊಬ್ಬ ವಾಂತಿಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಜಾಗೀರ್‌ ವೆಂಕಟಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮದ ಹತ್ತಿರ ಕೆರೆ ನಿರ್ಮಿಸಿ ಅಲ್ಲಿಂದ ಟ್ಯಾಂಕ್‌ ಮೂಲಕ ಮನೆ-ಮನೆಗೆ ನೀರು ತಲುಪಿಸಲಾಗುತ್ತಿದೆ. ಅಲ್ಲದೇ, ಈ ಕೆರೆಯಿಂದ ಪತ್ತೇಪುರ ಗ್ರಾಮಕ್ಕೂ ನೀರು ಪೂರೈಸಲಾಗುತ್ತಿದೆ.

ಗೋನಾಲ ಗ್ರಾಮದಲ್ಲಿ ಒಂದು ಸಾವಿರ ಜನಸಂಖ್ಯೆಯಿದ್ದು, ಒಂದು ಆರ್‌ಒ ಪ್ಲಾಂಟ್‌ ಅಳವಡಿಕೆ ಮಾಡಲಾಗಿದೆ. ಆದರೆ, ಇಲ್ಲಿ ಒಂದು ಕ್ಯಾನ್‌ಗೆ ಐದು ರೂ. ಕೊಡಬೇಕಿದೆ. ಬಡವರು, ಕೂಲಿ ಕಾರ್ಮಿಕರು ದುಡ್ಡು ಕೊಟ್ಟು ನೀರು ಖರೀದಿಸಲಾಗದೆ ಕೆರೆ ನೀರನ್ನೇ ಬಳಸುತ್ತಾರೆ.

ಕುಡಿಯಲು ಮಾತ್ರ ಆರ್‌ಒ ಪ್ಲಾಂಟ್‌ ನೀರು ತಂದರೂ ಅಡುಗೆಗೆ ಕೆರೆ ನೀರನ್ನೇ ಬಳಸುತ್ತಾರೆ. ಕೆರೆ ಬಳಿ ನೀರು ಶುದ್ಧೀಕರಣ ಘಟಕ ಇದ್ದರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನೀರನ್ನು ಶುದ್ಧೀಕರಿಸದೇ ಹಾಗೆ ಬಿಡಲಾಗುತ್ತಿದೆ. ಈ ಕೆರೆಗೂ ತುಂಗಭದ್ರಾ ಕಾಲುವೆ ಮೂಲಕವೇ ನೀರು ಹರಿಸಲಾಗುತ್ತಿದೆ. ಈಗ ನೀರು ಹಳದಿ ಬಣ್ಣಕ್ಕೆ ತಿರುಗಿದ್ದು, ಅಂಥ ನೀರೇ ಮೂರು ದಿನಕ್ಕೊಮ್ಮೆ ಬಿಡಲಾಗುತ್ತಿದೆ. ಗ್ರಾಮದಲ್ಲಿ ನಾಲ್ವರು ಪಂಚಾಯಿತಿ ಸದಸ್ಯರಿದ್ದು, ಪಿಡಿಒ ಗಮನ ಸೆಳೆದರೂ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ. ತಾಂತ್ರಿಕ ಕಾರಣಗಳನ್ನು ಹೇಳುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ವಾಂತಿ ಭೇದಿ ಶುರು: ಗೋನಾಲ ಗ್ರಾಮದಲ್ಲಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಈಗಾಗಲೇ ವೆಂಕಟೇಶ ಎನ್ನುವವರು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಬುಧವಾರ ಕೂಡ ಚಿಕ್ಕ ಮಗುವಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಕಲುಷಿತ ನೀರು ಸೇವನೆಯಿಂದ ದಿನೇದಿನೇ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

Advertisement

ಎಚ್ಚೆತ್ತುಕೊಳ್ಳಬೇಕಿದೆ ಸ್ಥಳೀಯ ಆಡಳಿತ

ನಗರದಲ್ಲಿ ಅಶುದ್ಧ ನೀರು ಪೂರೈಕೆಯಿಂದ ಸಾಕಷ್ಟು ಅವಾಂತರಗಳು ನಡೆಯುತ್ತಿದ್ದು, ಗ್ರಾಮೀಣ ಭಾಗದಲ್ಲೂ ಅಂಥ ಪರಿಸ್ಥಿತಿ ನಿರ್ಮಾಣವಾಗದಂತೆ ಸ್ಥಳೀಯ ಆಡಳಿತ ಎಚ್ಚೆತ್ತುಕೊಳ್ಳಬೇಕಿದೆ. ಗ್ರಾಮೀಣ ಭಾಗದಲ್ಲಿ ಅನೇಕ ದಶಕಗಳಷ್ಟು ಹಳೆಯ ಓವರ್‌ ಹೆಡ್‌ ಟ್ಯಾಂಕ್‌ಗಳಿದ್ದು, ತುಂಗಭದ್ರಾ, ಕೃಷ್ಣಾ ನದಿ ಮೂಲಕವೇ ನೀರು ಪೂರೈಸಲಾಗುತ್ತಿದೆ. ಕೆಲ ದಿನಗಳ ಹಿಂದೆ ಗದಾರ್‌ ಗ್ರಾಮದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ನಲ್ಲಿ ಏಳು ಕೋತಿಗಳು ಮೃತಪಟ್ಟು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ರಾಯಚೂರಿನ ರಾಂಪುರ ನೀರು ಶುದ್ಧೀಕರಣ ಘಟಕದಲ್ಲಿ ಹಲ್ಲಿಗಳು ಸತ್ತು ಬಿದ್ದಿರುವುದು ಕಣ್ಣಿಗೆ ಬಿದ್ದಿವೆ. ಹೀಗಾಗಿ ಎಲ್ಲ ಟ್ಯಾಂಕ್‌ಗಳ ಸ್ವಚ್ಛತೆಗೆ ಆದ್ಯತೆ ನೀಡುವುದರ ಜತೆಗೆ ನೀರು ಶುದ್ಧೀಕರಣಕ್ಕೂ ಒತ್ತು ನೀಡಬೇಕಿದೆ.

ಗೋನಾಲ ಗ್ರಾಮದಲ್ಲಿ ಅಶುದ್ಧ ನೀರು ಪೂರೈಕೆ ವಿಚಾರ ಗಮನಕ್ಕೆ ಬಂದಿಲ್ಲ. ಅಲ್ಲಿನ ಕೆರೆ ನಿರ್ವಹಣೆ ವಿಚಾರವಾಗಿ ಟೆಂಡರ್‌ ಬೇರೆಯವರಿಗೆ ಆಗಿದೆ. ಗ್ರಾಮಸ್ಥರು ಆರ್‌ಒ ಪ್ಲಾಂಟ್‌ ನೀರು ಬಳಸುತ್ತಾರೆ. ಆದರೂ ಗ್ರಾಮಕ್ಕೆ ಭೇಟಿ ನೀಡಿ ಅಶುದ್ಧ ನೀರು ಪೂರೈಕೆ ಬಗ್ಗೆ ಕ್ರಮ ವಹಿಸಲಾಗುವುದು. –ಮಮತಾ, ಪಿಡಿಒ, ವೆಂಕಟಾಪುರ ಗ್ರಾಪಂ

ಕಳೆದ ಕೆಲ ದಿನಗಳಿಂದ ನಮ್ಮ ಊರಿಗೆ ಹಳದಿ ಬಣ್ಣಕ್ಕೆ ತಿರುಗಿದ ನೀರು ಪೂರೈಕೆಯಾಗುತ್ತಿದೆ. ಬಡ, ಕೂಲಿ ಕಾರ್ಮಿಕರು ದುಡ್ಡು ಕೊಟ್ಟು ನೀರು ಖರೀದಿಸಲಾಗದೆ ಇದೇ ನೀರು ಸೇವಿಸುತ್ತಿದ್ದಾರೆ. ಈಗಾಗಲೇ ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಗ್ರಾಪಂಗೆ ದೂರಿದರೂ ಯಾವುದೇ ಕ್ರಮ ವಹಿಸುತ್ತಿಲ್ಲ. -ಸುಧಾಕರ ಗೋನಾಲ, ಗ್ರಾಮದ ಯುವಕ

Advertisement

Udayavani is now on Telegram. Click here to join our channel and stay updated with the latest news.

Next