ಕಾರ್ಕಳ: ರೆಂಜಾಳ ಗ್ರಾಮದ ಪೊಲ್ಲುಂಡಿ ಎಂಬಲ್ಲಿ 1 ಕೋ.ರೂ. ವೆಚ್ಚದಲ್ಲಿ ಹೊಸದಾಗಿ ಸೇತುವೆ ನಿರ್ಮಿಸಲಾಗಿದೆ. ಆದರೆ ಸೇತುವೆಯ ಎರಡೂ ಬದಿಯಲ್ಲಿ ಸಂಪ ರ್ಕ ರಸ್ತೆಯ ಅರೆಬರೆ ಕಾಮಗಾರಿಯಿಂದಾಗಿ ಸಾರ್ವ ಜನಿಕರಿಗೆ ಓಡಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 5 ಕೋ.ರೂ. ವೆಚ್ಚದಲ್ಲಿ ರೆಂಜಾಳ ರಸ್ತೆಯಲ್ಲಿ ಕಾಮಗಾರಿ ನಡೆದಿದೆ. ಇದೇ ರಸ್ತೆಯಲ್ಲಿ ಪ್ರತ್ಯೇಕ 1 ಕೋ.ರೂ. ಅನುದಾನದಲ್ಲಿ ಪೊಲ್ಲುಂಡಿ ಸೇತುವೆ ನಿರ್ಮಾಣವಾಗಿದೆ. ಸೇತುವೆ ನಿರ್ಮಾಣವಾಗಿದ್ದರೂ ಸೇತುವೆಗೆ ಹೊಂದಿಕೊಂಡ ಎರಡೂ ಕಡೆಯಲ್ಲಿ ಸಂಪರ್ಕ ರಸ್ತೆಗಳನ್ನು ಪೂರ್ಣಗೊಳಿಸಿಲ್ಲ. ಮಣ್ಣು ತುಂಬಿ ಹಾಗೇ ಅರ್ಧಕ್ಕೆ ಬಿಟ್ಟಿದ್ದರಿಂದ ಕೆಸರು ತುಂಬಿ ಹೊಂಡಗಳಾಗಿ ಸಂಚಾರಕ್ಕೆ ಸಮಸ್ಯೆಯಾಗಿದೆ.
ಸೇತುವೆ ಪಕ್ಕದ ರಸ್ತೆ ಅವ್ಯವಸ್ಥೆ ಕುರಿತು ಸ್ಥಳೀಯರು ಎಂಜಿನಿಯರ್, ಗುತ್ತಿಗೆದಾರರ ಗಮನಕ್ಕೆ ಈ ಹಿಂದೆ ಹಲವು ಬಾರಿ ತಂದಿದ್ದಾರೆ. ಬಳಿಕವೂ ಸುಧಾರಿಸಿಲ್ಲ. ಈಗ ಕರೆ ಮಾಡಿದರೆ ಕರೆ ಸ್ವೀಕರಿಸದೆ, ಪ್ರತಿಕ್ರಿಯೆ ನೀಡದೆ ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ಸ್ಥಳಿಯ ಗ್ರಾ.ಪಂ. ಸದಸ್ಯ ರಮೇಶ್ ರೆಂಜಾಳ ತಿಳಿಸಿದ್ದು, ಮಳೆಗಾಲ ಪ್ರಾರಂಭವಾಗುತ್ತಿದೆ. ಅದಕ್ಕೂ ಮೊದಲು ಬಾಕಿ ಉಳಿದ ಕಾಮಗಾರಿ ಪೂರ್ಣಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.
ದೂರು ಕೊಟ್ಟರೂ ಪ್ರತಿಕ್ರಿಯೆ ಇಲ್ಲ
ಮುಖ್ಯ ರಸ್ತೆಯಲ್ಲಿ ಇನ್ನೊಂದು ಕಡೆಯೂ 1 ಕೋ.ರೂ. ವೆಚ್ಚದಲ್ಲಿ ಡಾಮರು ಕಾಮಗಾರಿ ಆಗಿದೆ. ಕಾಮಗಾರಿ ಆದ ಬೆನ್ನಲ್ಲೇ ಡಾಮರು ಎದ್ದು ಹೋಗಿದೆ.
ರಸ್ತೆ ಬದಿ ಚರಂಡಿಯೂ ನಿರ್ಮಿಸದೆ, ಅವೈಜ್ಞಾನಿಕವಾಗಿ ಕಾಮಗಾರಿ ನಡೆದಿದೆ. ಈ ಬಗ್ಗೆ ಎಂಜಿನಿಯರ್, ಗುತ್ತಿಗೆ ದಾರರಿಗೆ ಸ್ಥಳೀಯರು ದೂರು ನೀಡಿದ್ದರು. ಎಲ್ಲವನ್ನೂ ಸರಿಪಡಿಸುವ ಭರವಸೆ ದೊರಕಿತ್ತು. ಬಳಿಕ ಅವರದ್ಯಾರದ್ದೂ ಪ್ರತಿಕ್ರಿಯೆ ಇಲ್ಲ ಎನ್ನುತ್ತಾರೆ ಸ್ಥಳೀಯ ನಾಗರಿಕರೊಬ್ಬರು. ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಹಾಳಾಗಿ 1 ಕೋ.ರೂ. ವೆಚ್ಚದ ಕಾಮಗಾರಿ ವ್ಯರ್ಥವಾಗಲಿದೆ ಎಂದರು.
ಶೀಘ್ರ ಪೂರ್ಣ
ಕಾಮಗಾರಿ ಪೂರ್ಣಗೊಳಿಸಲು ಸ್ವಲ್ಪ ಬಾಕಿಯಿದೆ. ಈ ಕೂಡಲೇ ಪೂರ್ಣ ಗೊಳಿಸುವ ಕೆಲಸ ಮಾಡಲಾಗು ವುದು. ಈ ಬಗ್ಗೆ ಎಂಜಿನಿಯರ್ ಅವರ ಗಮನಕ್ಕೆ ತಂದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಮಸ್ಯೆ ನಿವಾರಿಸುತ್ತೇವೆ.
-ಆಲ್ವಿನ್, ಎಇಇ, ಪಿಎಂಜಿಎಸ್‌ವೈ, ಉಡುಪಿ ಜಿಲ್ಲೆ