Advertisement

ಪಳ್ಳತ್ತೂರು-ಕೊಟ್ಯಾಡಿ-ಅಡೂರು ರಸ್ತೆ ಹೊಂಡಗುಂಡಿ

03:45 AM Jul 02, 2017 | Team Udayavani |

ಮುಳ್ಳೇರಿಯ: ಪಳ್ಳತ್ತೂರು-ಕೊಟ್ಯಾಡಿ- ಅಡೂರು ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರ ದುಸ್ತರವಾಗಿದೆ.
ಕೇರಳ ಮತ್ತು ಕರ್ನಾಟಕವನ್ನು ಪಳ್ಳತ್ತೂರು ಮೂಲಕ ಸಂಪರ್ಕ ಕಲ್ಪಿಸುವ ಮತ್ತು ಕಾಸರಗೋಡು-ಅಡೂರು ಮಧ್ಯೆ ಸಂಚಾರದ  ಪ್ರಧಾನ ರಸ್ತೆ ಇದಾಗಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಯ ದುರಸ್ತಿ ಕಾಮಗಾರಿ ಹಿಂದಿನ ವರ್ಷ ನಡೆಸಲಾಗಿತ್ತು. ಆ ಮೂಲಕ ಹಲವು ವರ್ಷಗಳ ಕೂಗಿನ ಫಲವಾಗಿ ತೀರಾ ಹದಗೆಟ್ಟ ಈ ರಸ್ತೆಗೆ ಶಾಪ ವಿಮೋಚನೆ ಲಭಿಸಿತ್ತು. ಆದರೆ ಈಗ ಮತ್ತೆ ಇದು ಹಿಂದಿನಂತಾಗಿದೆ. ಎಲ್ಲಿ ನೋಡಿದರೂ ಹೊಂಡಮಯ. ವಾಹನಗಳು ಹೊಂಡವನ್ನು ತಪ್ಪಿಸಿ ಸಾಗುವಾಗ ಇನ್ನೊಂದು ಹೊಂಡಕ್ಕಿಳಿಯಲೇ ಬೇಕಾಗಿದೆ.

Advertisement

ಪಳ್ಳತ್ತೂರಿನಿಂದ ಅಡೂರಿಗೆ ಸಾಗುವ ಮೂರು ಕಿ.ಮೀ. ರಸ್ತೆಯ ಸ್ಥಿತಿ ಇದಾಗಿದೆ. ಇದನ್ನು ಶೀಘ್ರವಾಗಿ ಡಾಮರೀಕರಿಸಬೇಕಾಗಿದೆ. ಆದರೆ ಮಳೆಗಾಲ ದೂರವಾಗುವ ತನಕ ಹದಗೆಟ್ಟ ರಸ್ತೆಯೇ ಗತಿ. ಪಳ್ಳತ್ತೂರು ಸೇತುವೆಗೆ ಸರಕಾರದ ಅನುಮತಿ ಲಭಿಸಿದ್ದು ಇದರ ಜೊತೆಗೆ ಈ ರಸ್ತೆಯ ಕಾಮಗಾರಿಯೂ ನಡೆಯಲಿದೆ ಎನ್ನಲಾಗಿದೆ.

ದೇಲಂಪಾಡಿ ಗ್ರಾಮ ಪಂಚಾಯತ್‌ಗೆ ಸೇರಿರುವ ಪಳ್ಳತ್ತೂರು ಸೇತುವೆಯ ಮೂಲಕ ಸಂಚಾರ ದುಸ್ತರವೂ, ಪ್ರಾಣಾಪಾಯಕ್ಕೆ ಸಾಕ್ಷಿಯಾಗಬೇಕಾಗುತ್ತಿದ್ದರೂ ನೂತನ ನಿರ್ಮಾಣ ಮರೀಚಿಕೆಯಾಗಿತ್ತು. ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗದ ಹಿನ್ನೆಲೆ ಯಲ್ಲಿ ಈ ವರ್ಷವಂತೂ ಇದೇ ಗತಿ. ಇಬ್ಬದಿಯಲ್ಲಿ ಯಾವುದೇ ರಕ್ಷಣೆ ಇಲ್ಲದ ಸೇತುವೆ ಮೂಲಕ ಸಂಚಾರ ನಡೆಸಲಾಗುತ್ತಿದೆ. ಜೋರಾಗಿ ಮಳೆ ಸುರಿದರೆ ಇದರ ಮೇಲೆ ನೀರು ಹರಿದು ಸಂಚಾರ ಮೊಟಕುಗೊಳ್ಳುತ್ತದೆ. ಪ್ರಯತ್ನ ಪೂರ್ವಕವಾಗಿ ದಾಟುವ ಪ್ರಯತ್ನ ಮಾಡಿದರೆ ಅಪಾಯ ಕಟ್ಟಿಟ್ಟಬುತ್ತಿ. ಇಂತಹ ಪ್ರಯತ್ನ ಜೀವಹಾನಿಗೂ ಕಾರಣವಾದುದು ನಡುಕ ಹುಟ್ಟಿಸುವ ವಿಚಾರ. ಮುಂದಿನ ಮಳೆಗಾದಲ್ಲಿಯಾದರೂ ಸೇತು ನಿರ್ಮಾಣ ಪೂರ್ತಿಗೊಂಡರೆ ಜನರು ನಿಟ್ಟುಸಿರು ಬಿಡಬಹುದು.

ಈ ಸೇತುವೆ ನಿರ್ಮಾಣಗೊಂಡು, ಅಡೂರಿನ ತನಕ ರಸ್ತೆಯೂ ನವೀಕರಣಗೊಂಡರೆ ಪುತ್ತೂರು ಪ್ರಯಾಣ ಮತ್ತಷ್ಟು ಸುಲಭವಾಗಲಿದೆ. ನೂರಾರು ಜನರಿಗೆ ಇದರ ಪ್ರಯೋಜನ ಲಭಿಸಲಿದೆ. ಈ ರಸ್ತೆಯ ಮೂಲಕ ಕೊಟ್ಯಾಡಿ, ಅಡೂರು ಪ್ರದೇಶಗಳಿಗೆ ಖಾಸಗಿ, ಕರ್ನಾಟಕ ಸರಕಾರಿ ಬಸ್‌ಗಳು, ಇತರ ವಾಹನಗಳು ನಿತ್ಯವೂ ಓಡಾಟ ನಡೆಸುತ್ತಿವೆ. 

ಆದರೆ ಸೇತುವೆ ದುರವಸ್ಥೆಯು ಸಂಚಾರವನ್ನು ಮೊಟಕುಗೊಳಿಸುತ್ತಿವೆ. ಇದರಿಂದಾಗಿ ನಿತ್ಯವೂ ಈ ರಸ್ತೆಯನ್ನು ಆಶ್ರಯಿಸಿರುವ ವಿದ್ಯಾರ್ಥಿಗಳು, ಕಾರ್ಮಿಕರು ಮೊದಲಾದವರು ತೊಂದರೆ ಅನುಭವಿಸುತ್ತಿದ್ದಾರೆ. ಕರ್ನಾಟಕಕ್ಕೆ ಸೇರಿದ ಈಶ್ವರಮಂಗಲ, ಪುತ್ತೂರು ಮೊದಲಾದ ಪ್ರದೇಶಗಳಿಗೆ ಇದು ಸಂಪರ್ಕ ಕಲ್ಪಿಸುತ್ತಿದೆ. ಕಾಸರಗೋಡು ಪ್ರದೇಶಗಳಿಗೆ ಸಾಗುವ ಸಾಕಷ್ಟು ಖಾಸಗಿ ಬಸ್‌ಗಳು, ಇತರ ವಾಹನಗಳಿಗೂ ಈ ರಸ್ತೆಯೇ ರಹದಾರಿ. ಕರ್ನಾಟಕಕ್ಕೆ ಸೇರಿದ ರಸ್ತೆಯ ಭಾಗವನ್ನು ಕರ್ನಾಟಕ ಸರಕಾರ ಎರಡು ವರ್ಷಗಳ ಹಿಂದೇಯೇ ಮೆಕಾಡಂ ಮಾದರಿಯ ಟಾರಿಂಗ್‌ ನಡೆಸಿ ಸುಸಜ್ಜಿತಗೊಳಿಸಿದೆ. ಆದರೆ ಕೇರಳಕ್ಕೆ ಸೇರಿದ ರಸ್ತೆಯ ಭಾಗ ಮಾತ್ರಾ ಈ ತನಕ ಶೋಚನೀಯವಾಗಿಯೇ ಉಳಿದಿದೆ. ಈ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಇನ್ನು ಮುಂದಿನ ದಿನಗಳಲ್ಲಿ ಸಾಧ್ಯವಾಗಲಿದೆ ಎನ್ನುವುದು ಎಲ್ಲರಿಗೂ ಸಂತಸ ತರಬಲ್ಲುದು. ಆದರೆ ಒಂದು ವರ್ಷವಂತೂ ಸಹಿಸಲೇ ಬೇಕು.

Advertisement

ಸುಪ್ರಸಿದ್ಧ ಅಡೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ದಿನನಿತ್ಯ ಸಾಕಷ್ಟು ಮಂದಿ ಭಕ್ತರು ಆಗಮಿಸುತ್ತಿದ್ದಾರೆ. ಆದರೆ ರಸ್ತೆಯ ದುಃಸ್ಥಿತಿ ಮತ್ತು ಪಳ್ಳತ್ತೂರು ಸೇತುವೆಯ ಅಪಾಯಕರ ಸ್ಥಿತಿ ಧೃತಿಗೆಡಿಸಬಲ್ಲುದು. ಕೃಷಿಕರೂ, ಹಾಗೆಯೇ ಉನ್ನತ ಶಿಕ್ಷಣಕ್ಕಾಗಿ ತೆರಳುವ ವಿದ್ಯಾರ್ಥಿಗಳ ಪಾಲಿಗೆ, ಪ್ರಧಾನವಾಗಿ ಕರ್ನಾಟಕಕ್ಕೆ ಸಾಗುವ ಮಂದಿ ಈ ಶೋಚನೀಯ ಸ್ಥಿತಿಯನ್ನು ಎದುರಿಸಲೇಬೇಕಾಗಿದೆ. 

ಸೇತುವೆ ಮತ್ತು ರಸ್ತೆ ಕಾಮಗಾರಿ ಆದಷ್ಟು ಬೇಗ ಆರಂಭ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next