Advertisement
ಬಾಲ್ದಬೆಟ್ಟು ಬಳಿ ಹೊಳೆಗೆ ಸೇತುವೆಯಿಲ್ಲದೆ ಬಾಲ್ದಬೆಟ್ಟು, ದೇವಸ್ಯ, ಆಂಚೋಟ್ಟು, ಊರಾಜೆ, ಮುಗೇರ್ಕಳ ಈ ಭಾಗಗಳ ನಾಗರಿಕರು ಪೊಲ್ಲಡ್ಕ ಮೂಲಕ ಬಜಗೋಳಿ ಸಂಪರ್ಕಿಸಲು ಸಮಸ್ಯೆ ಎದುರಿಸುತ್ತಿರುತ್ತಾರೆ. ಮಳೆಗಾಲದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಳ್ಳುವ ಮೊದಲೇ ಮಳೆ ಜೋರು ಬಂದರೆ ಹೊಳೆಯಲ್ಲಿ ನೆರೆ ಹೆಚ್ಚು ಹರಿಯುತ್ತದೆ. ಆಗ ಹೊಳೆಯ ಒಂದು ಬದಿಯಲ್ಲಿ ಮಕ್ಕಳು, ಮಹಿಳೆಯರು ನಿಂತು ನೆರೆ ನೀರು ಎಂದು ಇಳಿಯುತ್ತದೋ ಎಂದು ಕಾದು ಕುಳಿತಿರುತ್ತಾರೆ. ನೆರೆ ಇಳಿಯದಿದ್ದಾಗ ಅನಿವಾರ್ಯವಾಗಿ ಸುಮಾರು 10ರಿಂದ 12 ಕಿ.ಮೀ. ದೂರ ಸುತ್ತು ಬಳಸಿ ಬಜಗೋಳಿ ಪೇಟೆ, ಕಾರ್ಕಳಕ್ಕೆ ಪ್ರಯಾಣಿಸಬೇಕಾಗುತ್ತದೆ.
Related Articles
Advertisement
ಕ್ಷೇತ್ರದ ಶಾಸಕರು ಸಚಿವರಾಗಿರುವುದು ಖುಷಿ ತಂದಿದೆ. ಕ್ಷೇತ್ರಕ್ಕೆ ಹೆಚ್ಚು ಅನುದಾನ ತರಿಸುವ ಪ್ರಯತ್ನ ಅವರಿಂದ ನಡೆಯುತ್ತದೆ. ಆಗ ಇಲ್ಲಿ ಸೇತುವೆ ನಿರ್ಮಾಣ ಮಾಡಿಯೇ ಮಾಡುತ್ತಾರೆ ಎನ್ನುವ ನಂಬಿಕೆಯಿದೆ. ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಮಾಡುತ್ತೇವೆ. ಕ್ಷೇತ್ರದ ಸಂಸದರೂ ಕೇಂದ್ರದಲ್ಲಿ ಸಚಿವೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಖಂಡಿತ ನಮ್ಮ ಕನಸು ಈಡೇರುತ್ತದೆ ಎನ್ನುವ ವಿಶ್ವಾಸ ನಮಗೆಲ್ಲ ಇದ್ದೆ ಇದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ವಾಸುದೇವ ನಾಯಕ್ ಅವರು.
ಬೇಡಿಕೆ ಪಟ್ಟಿಯಲ್ಲಿ ನಮ್ಮದು ಸೇರಿದೆ :
ಕಾರ್ಕಳದ ಸಮಗ್ರ ಅಭಿವೃದ್ಧಿಗೆ 2018ರಲ್ಲಿ ಶಾಸಕರು ಅನುದಾನಕ್ಕೆ ಪ್ರಯತ್ನಿಸಿದ್ದರು. ಕ್ಷೇತ್ರದ ಒಟ್ಟು 108 ಕೋ.ರೂ. ಅನುದಾನದ ಪಟ್ಟಿಯಲ್ಲಿ ತಾಲೂಕಿನ ಪ್ರಮುಖ 12 ರಸ್ತೆಗಳು, 9 ಸೇತುವೆಗಳ ನಿರ್ಮಾಣವು ಸೇರಿದೆ ಎಂದು ಹೇಳಲಾಗಿತ್ತು. ಅದರಲ್ಲಿ ಮಾಳ ಗ್ರಾಮದ ಇದೇ ನೆಲ್ಲಿಕಟ್ಟೆ ಬಳಿ ಸೇತುವೆ ನಿರ್ಮಾಣಕ್ಕೆಂದು 100 ಕೋ.ರೂ. ಇದೆ ಎಂದು ಹೇಳಲಾಗಿತ್ತು. ಅದರಲ್ಲಿ ಸೇತುವೆ ಇಕ್ಕೆಲಗಳ ರಸ್ತೆ ನಿರ್ಮಾಣವೂ ಸೇರಿತ್ತು. ಆದರೇ ಯಾವುದೋ ಕಾರಣದಿಂದ ಅದಾಗಿಲ್ಲ, ಮುಂದೆ ಆಗಬಹುದು ಎಂದು ಅಲ್ಲಿಯ ನಿವಾಸಿಗಳು ಹೇಳುತ್ತಾರೆ.
ಇತರ ಸಮಸ್ಯೆಗಳೇನು? :
- ಗ್ರಾಮದಲ್ಲಿ ನೆಟ್‌ವರ್ಕ್ ಸಮಸ್ಯೆ ಗಂಭೀರವಾಗಿದೆ. ವಿದ್ಯುತ್ ಕೂಡ ಕೈಕೊಡುತ್ತಿರುತ್ತದೆ.
- ಕಾಡುಪ್ರಾಣಿಗಳ ಹಾವಳಿ ಹೆಚ್ಚಿದ್ದು, ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿವೆ. ಕೃಷಿಗೂ ತೊಂದರೆ ಮಾಡುತ್ತಿರುತ್ತದೆ.
- ಈ ಭಾಗಕ್ಕೆ ಸಂಪರ್ಕಿಸುವ ರಸ್ತೆಗಳು ಕೂಡ ನಾದುರಸ್ಥಿತಿಯಲ್ಲಿದ್ದು ಸಂಪರ್ಕ ರಸ್ತೆ ಸಮಸ್ಯೆಯೂ ಇದೆ.