Advertisement

15 ದಿನಗಳೊಳಗೆ ಬಾಕಿ ಬೆಳೆ ವಿಮೆ ಪರಿಹಾರ

12:17 PM Nov 25, 2017 | |

ಹುಬ್ಬಳ್ಳಿ: ಬಾಕಿ ಉಳಿದಿರುವ ಬೆಳೆವಿಮೆ ಪರಿಹಾರ ಮೊತ್ತವನ್ನು ಇನ್ನು 15 ದಿನಗಳೊಳಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳೆವಿಮೆ ಪರಿಹಾರ ಸಮರ್ಪಕ ವಿತರಣೆಗೆ ನೇಮಕ ಮಾಡಲಾದ ತಾಂತ್ರಿಕ ಸಮಿತಿ ಮುಂದಿನ ವಾರ ಅಂತಿಮ ವರದಿ ನೀಡಲಿದೆ. ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. 

Advertisement

ರಾಜ್ಯದಲ್ಲಿ ಟಾಟಾ-ಎಐಜಿ ಹಾಗೂ ಯುನಿವರ್ಸಲ್‌ ಸೊಂಪೊ ಕಂಪನಿಗಳು ಬೆಳೆವಿಮೆ ಪರಿಹಾರ ನೀಡುತ್ತಿವೆ. ವಿಮಾ ಕಂಪನಿಗಳ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ತಕರಾರುಗಳನ್ನು ಇತ್ಯರ್ಥಗೊಳಿಸಲಾಗುವುದು.

ಒಂದು ವೇಳೆ ಕಂಪನಿಗಳು ಭಾರತ ಸರಕಾರಕ್ಕೆ ಮೇಲ್ಮನವಿ ಸಲ್ಲಿಸಿದರೆ ಬೆಳೆವಿಮೆ ಪರಿಹಾರ ವಿತರಣೆ ವಿಳಂಬಗೊಳ್ಳಲಿದೆ ಎಂದರು. 944 ಕೋಟಿ ಬೆಳೆವಿಮೆ ಪರಿಹಾರದಲ್ಲಿ ಈವರೆಗೆ 740 ಕೋಟಿ ರೂ. ವಿತರಿಸಲಾಗಿದೆ. ಸುಮಾರು 200 ಕೋಟಿ ರೂ. ಬೆಳೆವಿಮೆ ಬಾಕಿ ಉಳಿದಿದೆ.

ವಿಮಾ ಕಂಪನಿಗಳೊಂದಿಗೆ ನಾನು 12 ಸಭೆಗಳನ್ನು ಮಾಡಿದ್ದೇನೆ. ಹತ್ತಿ ಹಾಗೂ ಮೆಣಸಿನಕಾಯಿ ಬೆಳೆ ಪರಿಹಾರ ವಿತರಣೆಯಾಗದಿರುವುದು ಗಮನಕ್ಕೆ ಬಂದಿದೆ ಎಂದರು. ಆಧಾರ ಕಾರ್ಡ್‌ ಲಿಂಕ್‌, ಅಪ್‌ಡೇಟ್‌ ಕಾರಣದಿಂದಾಗಿ ಬ್ಯಾಂಕ್‌ಗಳಿಂದ ಬರಬೇಕಾದ ಬೆಳೆವಿಮೆ ಪರಿಹಾರ 25 ಕೋಟಿ ರೂ. ಬಾಕಿಯಿದೆ. ಬೆಳೆವಿಮೆ ಪರಿಹಾರ ವಿತರಣೆ ವ್ಯವಸ್ಥೆಯಲ್ಲಿನ ಸಣ್ಣ-ಪುಟ್ಟ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು. 

ಸಾವಯವ ಜಾಗೃತಿ ಅವಶ್ಯ: ಮಾರುಕಟ್ಟೆಯಲ್ಲಿ ಸಾವಯವ ಉತ್ಪನ್ನಗಳ ಬೇಡಿಕೆ ಹೆಚ್ಚಾದಂತೆ ಸಾವಯವ ಕೃಷಿ ಮಾಡುವ ರೈತರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಸರಕಾರದ ಬಲವಂತಕ್ಕೆ ಯಾರೂ ಕೂಡ ಸಾವಯವ ಕೃಷಿ ಮಾಡುವುದಿಲ್ಲ. ಕಳೆದ 2-3 ವರ್ಷಗಳಲ್ಲಿ ಸಾವಯವ ಉತ್ಪನ್ನಗಳ ಬಗ್ಗೆ ಆಸಕ್ತಿ ಹೆಚ್ಚಾಗುತ್ತಿದೆ ಎಂದರು. 

Advertisement

ಸಾವಯವ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದ್ದು, ಉತ್ಪಾದನೆಯಲ್ಲಿ 3ನೇ ಸ್ಥಾನದಲ್ಲಿದೆ. ಸಾವಯವ ಬೆಳೆಗಾರರ ಒಕ್ಕೂಟ ಮಾಡಿ ಅವುಗಳೊಂದಿಗೆ ಆಹಾರ ಸಂಸ್ಕರಣಾ ಕಂಪನಿಗಳ ಸಂಪರ್ಕ ಕಲ್ಪಿಸಲಾಗುತ್ತಿದೆ. ಮಧ್ಯವರ್ತಿಗಳ ಶೋಷಣೆ ತಡೆಯುವ ಉದ್ದೇಶದಿಂದ ಬೆಳೆಗಾರರ ಒಕ್ಕೂಟ ಪೂರಕವಾಗಿದೆ ಎಂದರು. 

ರಾಜ್ಯದಲ್ಲಿ ಒಟ್ಟು 1ಕೋಟಿ 10ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಮಾಡಲಾಗುತ್ತಿದ್ದು, ಅದರಲ್ಲಿ 2.5 ಲಕ್ಷ ಎಕರೆ ಪ್ರದೇಶದಲ್ಲಿ ಸಾವಯವ ಕೃಷಿ ಮಾಡಲಾಗುತ್ತಿದೆ. ಇದರ ಪ್ರಮಾಣ ಹೆಚ್ಚಾಗಬೇಕಿದೆ. ಸರಕಾರ ರಿಟೇಲ್‌ ಮಾರುಕಟ್ಟೆ ಮೂಲಕ ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡುವುದು ಕಷ್ಟ.

ಆದರೆ ಬೆಂಗಳೂರಿನಲ್ಲಿ 6 ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಕೇವಲ ಸಾವಯವ ಬೆಳೆಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು. ಕೃಷಿ ಹೊಂಡಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಮಲೆನಾಡು ಭಾಗದ ಜಿಲ್ಲೆಗಳಲ್ಲೂ ಕೃಷಿ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ. ಕೃಷಿ ಹೊಂಡ ಆರಂಭಿಸಿದ ಸಂದರ್ಭದಲ್ಲಿ ಕೆಲವರು ತಮಾಷೆ ಮಾಡಿದರು.

ಆದರೆ ಕೃಷಿಹೊಂಡದಿಂದ ರೈತರ ಇಳುವರಿ ಹೆಚ್ಚಾಗುತ್ತಿದೆ ಎಂದು ವಿವರಿಸಿದರು. ನೀರು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವ ಬೆಳೆಗಳನ್ನು ಕಡಿಮೆ ಮಾಡಿ ಕಡಿಮೆ ಪ್ರಮಾಣದ ನೀರಿನಲ್ಲಿ ಬೆಳೆಯುವ ರಾಗಿ, ಬಿಳಿಜೋಳ ಬೆಳೆಗಳಿಗೆ ಪ್ರೋತ್ಸಾಹಿಸಲು ಕ್ವಿಂಟಲ್‌ಗೆ 400ರೂ.  ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು. 

ವೇರ್‌ಹೌಸ್‌ ಸಂಖ್ಯೆಯಲ್ಲಿ ಹೆಚ್ಚಳ: ನಮ್ಮ ಸರಕಾರ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದಲ್ಲಿ 13 ಲಕ್ಷ ಟನ್‌ ಸಾಮರ್ಥ್ಯದ ವೇರ್‌ಹೌಸ್‌ಗಳಿದ್ದವು. ಆದರೆ ಸದ್ಯ 26 ಲಕ್ಷ ಟನ್‌ ಸಾಮರ್ಥ್ಯದ ವೇರ್‌ ಹೌಸ್‌ ನಿರ್ಮಿಸಲಾಗಿದೆ. ನಬಾರ್ಡ್‌ನಿಂದ 700 ಕೋಟಿ ರೂ. ಸಾಲ ಹಾಗೂ ಇತರ ಸಂಸ್ಥೆಗಳಿಂದ 300 ಕೋಟಿ ರೂ. ಪಡೆದು ವೇರ್‌ಹೌಸ್‌ಗಳನ್ನು ನಿರ್ಮಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next